ಭಾನುವಾರ, ಮಾರ್ಚ್ 15, 2009

ಜೊತೆಗೂಡಿ ನಲಿಯುವ ಬಾ

ತುಂತುರು ಮಳೆ ಮಿತವಾಗಿ ಸುರಿದ
ಹಚ್ಚ ಹಸಿರು ಪಸರಿಸಿದ ಕಾನನದಲ್ಲಿ
ಚಿಗುರು ತಳಿರು ಹೂ ಕಂಗೊಲಿಸುತಲಿವೆ
ಮನಬಿಚ್ಚಿ ಜೊತೆಗೂಡಿ ನಲಿಯುವ ಬಾ

ಮಲ್ಲಿಗೆಯ ಸುವಾಸನೆ ಹರಡುತ
ಹಾರುವ ಚಕ್ಕ ಪುಟ್ಟ ದುಂಬಿಗಳ
ಸುಸ್ವರಕೆ , ಮನಸೋತು ಆಲಿಸುತ
ಬಳಕುತ ಜೊತೆಗೊಡಿ ನರ್ತಿಸುವ ಬಾ

ಗೊಲ್ಲನ ಕೊಳಲ ದ್ವ್ಹನಿ ಇಂಪಾಗಿ
ಮೆಲ್ಲನೆ ತಂಗಾಳಿಯಲಿ ತೇಲಿ ಬರಲು
ನಿಲ್ಲದೆ ಗೋವುಗಳು ಓಡಿಬರುವಂತೆ
ಓಡುತ ಜೊತೆಗೂಡಿ ಹಾಡುವ ಬಾ

ಸಂಜೆ ಸೂರ್ಯ ಆಗಸದಲಿ ಮೆಲ್ಲನೆ ಜಾರಲು
ಚಿಲಿ ಪಿಳಿ ಕಲವರದೊಂದಿಗೆ ಹಕ್ಕಿಗಳು
ಮನೆಯರಸಿ ಹಾರಿ ಬರುವಂತೆ
ಮನವರಿಸಿ ಜೊತೆಗೂಡಿ ಹಾರುವ ಬಾ

ಸಂಧ್ಯಾಕಾಲದಿ ಮಿಂದ ಹೃದಯಗಳು
ಅಂದದಿ ಹಿತವಾಗಿ ಕೈ ಹಿಡಿದು
ಪ್ರಪಂಚವನ್ನೇ ಮೈಮರೆತು ನಿಂತಂತೆ
ಆಸೆಯಲಿ ಜೊತೆಗೂಡಿ ಸೇರುವ ಬಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ