ಮಂಗಳವಾರ, ಏಪ್ರಿಲ್ 5, 2011

ಹೊಸತು

ಋತು ಋತುಗಳು ಉರಳಿ ಉರಳಿ
ಯುಗಾದಿ ಮರಳಿ ಬಂದಿದೆ
ತಿಳೀ ಹಸಿರ ನಸುಗಂಪು ಹರಡಿ
ಉಲ್ಲಾಸ ಹರುಷ ತಂದಿದೆ

ತಳಿರ ರಂಗು ಮನಸಿಗಿಂದು
ಮರು ಯೌವ್ವನ ಕೊಡುತಿದೆ
ಎಳೆಯ ಎಲೆ ಅರಳಿ ಹೊರಳಿ
ಸೊಗಸಾದ ಕಂಪು ಬೀರಿದೆ

ಹಚ್ಚ ಹಸಿರ ಟೊಂಗೆಗಳಲ್ಲಿ
ಬೇವಿನ ಹೂವು ಮಿನುಗುತಿದೆ
ಹಳೆಯ ಬಾಗಿಲಿಗೆ ಕಳೆ ಕಟ್ಟಿ
ಹೊಸಾ ತೋರಣ ನಗುತಿದೆ

ಹೊಸತು ಬಟ್ಟೆ ಹಾಕಿಕೊಂಡ
ಚಿಣ್ಣರು ಕುಣಿದು ನಲಿದಾಡುತಿವೆ
ಹೂರಣದ ಭೂರಿ ಭೋಜನಕ್ಕೆಂದು
ನೆಂಟರ ದಂಡು ದಂಡು ಬರುತಿದೆ

ಹೊಸ ವರುಷ ಬಂದಿತೆಂದು
ನಮ್ಮೆಲ್ಲರ ನಾಡಿ ಮಿಡಿಯುತಿದೆ
ಬೇವು ಬೆಲ್ಲ ಬೆರೆತುಕೊಂಡು
ಜೀವನದ ನಿತ್ಯ ಸತ್ಯ ಸಾರುತಿದೆ

ಶನಿವಾರ, ಏಪ್ರಿಲ್ 2, 2011

ಓಡದಿರು ಮನವೇ

ಓಡದಿರು ಮನವೇ
ರಹದಾರಿ ಇದೆಯಂದು
ಅಡ್ಡಿ ಆತಂಕಗಳು
ವೇಗ ಹೆಚ್ಚಿಸಬಹುದು

ಕುಳಿತು ಯೋಚಿಸು ನೀ
ಸಮಯ ಮೀರುವ ಮುನ್ನ
ಕ್ರಮಿಸುವಾ ದಾರಿಯು
ಕಡಿಮೆ ಯಾಗಬಹುದು

ಬೆಲೆಯನ್ನು ತೆರದಿರು
ಕ್ಷಣದ ಕೋಪದ ಭರದಲ್ಲಿ
ಕೋಟಿ ಕೊಟ್ಟರೂ ಬರದ
ಮಾನ ಹೋಗಬಹುದು

ಕೆಡಕು ಹೇಳುವರಿಹರು
ಒಡಕು ಮಾಡಲು ಮನೆಗೆ
ಒಳಿತು ಬಯಸದವರೂ
ಒಡನಾಡಿಗಳಾಗಬಹುದು

ತಂಪೆರೆದು ಮನಸಿಗೆ
ಬುದ್ದಿ ಕಡಿವಾಣ ಹಾಕುವುದು
ಕೇಳು ಹೃದಯದ ಸವಿ ಮಾತು
ಜೀವನ ಸೋಗಸಾಗಬಹುದು