ಶುಕ್ರವಾರ, ಡಿಸೆಂಬರ್ 9, 2022

ಕೋಟಿ ಕಂಠ

ಹಾಡುವ ಬನ್ನಿ ಕನ್ನಡಿಗರೆಲ್ಲಾ 
ಕನ್ನಡ ನುಡಿಯ ಜಾತ್ರೆಯಲಿ 

ಕೋಟಿ ಕೋಟಿ ಕನ್ನಡಿಗರೆಲ್ಲರೂ ಸೇರಿ 
ಹಾಡುವ ನಾಣ್ಣುಡಿ ಒಂದೇ ಧ್ವನಿಯಲ್ಲಿ  

ಕನ್ನಡ ನಾಡಿಗೆ ಪರಧಿಯು  ಇದ್ದರೂ 
ಭಾಷೆಯು ಸಾಗರದಾಚೆಗೂ ಪಸರಿಸಿದೆ 
ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ 
ಮಿಡಿಯದೇ ಹೃದಯ ನುಡಿದ ಮೊದಲ್ನುಡಿಗೆ 

ಜಾತಿ ಕುಲ ಆಚರಣೆಗಳು ಬೇರೆಯಾದರೂ 
ಕನ್ನಡ ನಮ್ಮೆಲ್ಲರ ತಾಯ್ನುಡಿಯು 
ವಿವಿಧ ದೇಶದಗಳ ಭಾಷೆ ಕಲಿತರು    
ಕನ್ನಡವಿರಲಿ ನಿತ್ಯ ಬಾಯ್ನುಡಿಯು 
  
ಕನ್ನಡ ತೇರು ಸಾಗುತ್ತಲೇ ಇರಲಿ 
ಎಳೆಯುವ ಬನ್ನಿ ಹಾಡಿನ ರೂಪದಲಿ 
ಕೋಟಿ ಕಂಠದ ಧ್ವನಿ ಮುಗಿಲೆತ್ತರ ಸಾಗಿ 
ಕನ್ನಡ ಸ್ವರ್ಗ ಲೋಕಗಳ ತಲುಪಿಬಿಡಲಿ  

ಕನ್ನಡ

 ಗಿಳಿಯೇ ಗಿಳಿಯೇ ಮುದ್ದಿನ ಗಿಳಿಯೇ 
ಹಾರುತ ಎಲ್ಲಿಗೆ  ಹೋಗಿರುವೆ 

ನಿನ್ನಯ ಕನ್ನಡ ಮಾತನು ಕೇಳಲು  
ಕಾತರದಿ  ಕಾಯುತ ಕುಳಿತಿರುವೆ 

ಮೂಡಣ ಪಡುವಣ ಬಡವಣ ತೆಂಕಣ 
ಗಡಿಗಳ ತಾಣಕೆ  ಹೋಗಿರುವೆ 
ನೋಡುತ ನಲಿಯುತ ಹಾರುತ ಆನಂದದಿ 
ಕಣ್ತುಂಬಿ  ಉಲ್ಲಾಸದಿ ಬರುತಿರುವೆ 

ಗೋಳಗುಂಬಜ ಮನ ಸೆಳೆಯುತಲಿ   
ನಿನ್ನ ದನಿಗೆ ಪ್ರತಿದನಿ ನೀಡುತಿದೆ  
ದಾಸರ ಶರಣರ ವಚನ ಸಾಹಿತ್ಯ 
ಬದುಕಿನ ಪರಿ ಪಾಠ ಸಾರುತಿವೆ  

ಕೃಷ್ಣ ಭೀಮಯರು ತುಂಬಿ ಹರಿಯುತಲಿ 
ಧರೆಗೆ ಸೀರೆಯ ಉಡುಸುತಿವೆ 
ಬಾದಾಮಿ ಐಹೊಳೆ ಗುಹಾ ದೇವಾಲಯ 
ಚಾಲುಕ್ಯರ ಇತಿಹಾಸ ತಿಳಿಸುತಿದೆ 

ವಿಜಯನಗರ ಕಲ್ಲಿನ ತೇರಿನಲ್ಲಿ  
ಸಂಗೀತ ದುಂದುಭಿ ಮೊಗಳುತಿದೆ 
ತುಂಗಭದ್ರ-ತಟ ಹನುಮನ ಹಂಪೆಯು 
ವೈಭವ ಸಾಮ್ರಾಜ್ಯದ ಕಥೆ ಹೇಳುತಿದೆ 

ಕಿತ್ತೂರ ಚನ್ನಮ್ಮ ರಾಣಿ ಒಬಕ್ಕ 
ಒನಕೆ ಓಬವ್ವ ನಮ್ಮ ನಾಡಿನಾ ಹೆಮ್ಮೆ  
ಗಂಡು ಮೆಟ್ಟಿದಾ ನಾಡು ಕರ್ನಾಟಕ 
ಕುಂದ, ಫೆಡೆ, ಮಿರ್ಚಿ  ತಿನಿಸುತಿದೆ 

ಹೊರನಾಡು ಅನ್ನಮ್ಮ  ಶೃಂಗೇರಿ ಶಾರದೆ 
ಕೊಲ್ಲೂರು ಮೂಕಾಂಬಿಕೆ ಹರಸುತಿಹೆ  
ಬೇಳೂರು ಹಳೇಬೀಡು ಸೋಮನಾಥಪುರ 
ಮೇರು ಶಿಲ್ಪಿ ಕಲೆಯಲಿ ಹೊಳೆಯುತಿವೆ 

ಪಶ್ಚಿಮ ಘಟ್ಟಗಳ ನದಿ ಸಾಗರದಂಚಲಿ 
ಜಲಪಾತ ಬೆಟ್ಟಸಾಲು ಕಣ್ಣ್ ಸೆಳೆದಿವೆ 
ದೈವಗಳ ನಿತ್ಯ ಆರಾಧನೆಯಲಿ 
ಪ್ರಸಾದ, ದಾಸೋಹ ನೆಡೆಯುತಿವೆ 

ಕೊಡಗಲಿ ಧರೆಗಿಳಿದು ಜೀವನಾಡಿಯಾಗಿ 
ಹರಿವಳು ಪಡುವಣದಲೆಲ್ಲಾ ಕಾವೇರಿ 
ಬೆಂಗಳೂರು ಹೆಸರಾ ಮೈಸೂರು ದಸರಾ 
ಬೆಳಗುತಿದೆ ಇಂದಿಗೂ  ಜಯಭೇರಿ 

ಕನ್ನಡ ನಾಡಿದು  ಕನ್ನಡ ನುಡಿಯಿದು 
ಸಂಸ್ಕಾರದ ಸಂಸ್ಕೃತಿ ತವರೂರು  
ಕನ್ನಡ ಕನ್ನಡ ಕನ್ನಡ ಎನ್ನುತ  
ಮಿಡಿಯುತಿದೆ ನೋಡು ನನ್ನೆದೆಯು  

ಬಿಡಿಸಲಾಗದು

ಕಳೆದು ಹೋಗದಿರು ಮನವೇ 
ಕ್ರೂರ ಮಾತುಗಳ ಆರ್ಭಟಕೆ  \ ಪ \

ಕಾಣದಾಗಿದೆ ಅರಿಯೆ ಮುಂದೆ ದಾರಿ   
ಕಡೆಯಲೇನಿಹುದೊ ಇರಬಹುದು  ಕವಲುದಾರಿ \ ಆ ಪ \

ಕದಡಿದ ಕೆರೆಯಂತೆ ಕೆಸರಾಗಿದೆ ಮನಸ್ಸು 
ಕಾರಣ ಕ್ಷುಲ್ಲಕ  ಏಕಿಷ್ಟು ಮುನಿಸು 
ಕಮರಿ ಹೋಗಿದೆ ಕಂಡ ಎಲ್ಲಾ ಕನಸು 
ಕಲ್ಲಿನಂದದಿ ಜೀವಿಸಿದರೆ ಏನು ಸೊಗಸು \೧\

ಕೊಲ್ಲದಿರು ಮಾತೆಂಬ ಬಾಣಗಳ ಹಾಕಿ 
ಕೊರೆದು ಹೋಗಿದೆ ಹೃದಯ ಬಾಣಗಳು ತಾಕಿ 
ಕಟ್ಟಿಕೊಂಡು ಹೋಗುವುದೇನಿಲ್ಲ ಇಲ್ಲೇ ಬಿಸಾಕಿ 
ಕೊಟ್ಟುಬಿಡು ಒಮ್ಮೆ ಪ್ರೀತಿ ನಗುವಿನ ಚಟಾಕಿ  \೨\

ಕಳೆದ ಸಮಯ ಎಂದೂ ಮತ್ತೆ ಬಾರದು 
ಕ್ಷಣ ತಪ್ಪಿದರೆ ಮುಂದೆ ಜೀವನ ಸಾಗದು 
ಕಾಳಗದಿಂದ ಏನು ಸಾಧಿಸಲು ಆಗದು 
ಕಟ್ಟಿಡು ಪ್ರೀತಿಯ ನಂಟು ಅದು ಬಿಡಿಸಲಾಗದು \೩\

*ಕಡಲೆ ಪರಿಷೆ*

ನಗರದೊಳ ಹಳ್ಳಿಯ  
ಕಡ್ಲೆ ಪರಿಷೆಗೆ  ಬನ್ನಿ 

ಕಡ್ಲೆ ಪಿಪಿ ಬಲೂನು 
ಚಿಣ್ಣರೆ ಕೊಳ್ಳ ಬನ್ನಿ
 
ಹಿಂದೆ ಗುಡ್ಡದ ಸುತ್ತಾ 
ಕಡಲೆ ಪೈರು ಇರುತಿತ್ತು 
ಕೊಯ್ಲು ಮುಂಚೆ ಕಡ್ಲೆ 
ತಿಂದು ಹೋಗುತ್ತಿತ್ತು ಎತ್ತು 

ಬೇಡಿದರು ದೊಡ್ಡ ಬಸವಗೆ  
ಕಡಲೆ ನೈವೇದ್ಯದ ಹರಕೆ 
ನೆಡೆಸಿದರು ಬಸವನಗುಡಿಯಲ್ಲಿ 
ಬಿಡದೆ ಇಂದಿಗೂ ಕಡಲೆ ಪರಿಷೆ 

ದೊಡ್ಡ ಬಸವಗೆ ಕಡಲೆ 
ದೊಡ್ಡ ಗಣಪಗೆ ಕಡಲೆ 
ದೊಡ್ಡ ಸಣ್ಣ ಉದ್ದಾ ಕಡಲೆ 
ದುಡ್ಡುಕೊಟ್ಟು ಕೊಳ್ಳಿ ಪರಿಷೆಯಲ್ಲಿ  

ಉಯ್ಯಾಲೆ ಗಿರಿಕಿನಿ ಕುದುರೆ 
ಕೈಯಲ್ಲಿ ಕಾಸಿನ ಕುದುರಿ 
ಬೆಂಡು ಬತ್ತಾಸು ಜಿಲೇಬಿ   
ತಿಂಡಿ ತಿಂದು ನಲಿಯ ಬನ್ನಿ 

ರಸ್ತೆ ಪೂರ್ತಿ ಡಾಂಬಾರು 
ಹಳ್ಳಿ ವಾತಾವರಣ ನೋಡು 
ಎತ್ತ ನೋಡಿದರೂ ಬೆಳಕಿನ 
ಕಾರ್ತೀಕ ದೀಪೋತ್ಸವ ನೋಡ ಬನ್ನಿ  

ವರುಷಕ್ಕೊಮ್ಮೆ ಪರಿಷೆ 
ಹರುಷಕ್ಕೊಮ್ಮೆ  ಜಾತ್ರೆ 
ಹರಸುವನು ಗಣಪ ಬಸವ 
ಕೊರೆವ ಚಳಿಯಲ್ಲಿ ಸುತ್ತಾಡುವ ಬನ್ನಿ