ಶುಕ್ರವಾರ, ಮೇ 18, 2018

ದೊಡ್ದುರ ಸೇರಿದೆವು

ನಮ್ಮೂರ ದಾರಿ ಬಿಟ್ಟು ದೊಡ್ದುರ ಸೇರಿದೆವು
ಬೆಳೆ  ವಣಗಿತು ಮಳೆ ಬರದೇ  ಕಾಡಿ 
ಬಿತ್ತಿ ಬೆಳೆಯುವ ಕೈಗೆ ಅದಿರಿನ  ಬುಟ್ಟಿ ಬಂತು
ಹೊತ್ತು ಸಾಗಿಸಬೇಕಿದೆ ಕನಸ ದೂಡಿ
ಗುಳೆ ಎದ್ದು ಬಂದಿದೀವಿ ಹಸು ಕರು ಹೇಗಿವೆಯೋ
ಚಿಂತೆ ತುಂಬಿದೆ ಮನಸಲ್ಲಿ  ನೋವ ಮೂಡಿ
ಜಾತಿ ಕುಲವೆನ್ನದೆಯೇ ಜೊತೆಯಾಗಿ ನಾವೆಲ್ಲ
ದುಡಿದು ಊರ ಸೇರಬೇಕಾಗಿದೆ ನೋಡಿ 

ಸಂಜೆ ರಾಜಕೀಯ


ಬೆಳಿಗ್ಗೆ ಕಾ-ಕು ಜೋತುಬಿದ್ದು 
ಸಂಜೆ ರಾಜ್ಯಪಾಲರ ಸದ್ದು
ರಾತ್ರಿಪೂರಾ ಕೋರ್ಟು ಎದ್ದು
ಯೆಡ್ಡಿ ಸಹಿತ  ಬಿಜಿಪಿ ಗೆದ್ದು
ಕುರುಡ ಕಾಂಚಾಣ ಕುಣಿಯುತಲಿದ್ದು
ಚುನಾವಣೆ ಬರಬಹುದು ಸರ್ಕಾರ ಬಿದ್ದು
ಮುಂದೆ ಆದ್ರೂ ಒಂದೇ ಪಕ್ಷಕ್ಕೆ ಓಟು ಕೊಟ್ಟು 
ಪೂರ್ತಿ ಬಹುಮತ ಬರೋಹಾಂಗೆ ಗುಂಡಿ  ವತ್ತು
-ಪ್ರಭಂಜನ 

ಬುಧವಾರ, ಏಪ್ರಿಲ್ 25, 2018

ಬೆಳೆದೆರೆಡು ಹೂವುಗಳು


ತೆಳ್ಳನೆಯ ಚಪ್ಪರದಿ 
ಬಳ್ಳಿಯು ತುದಿಯಲ್ಲಿ 
ಬೆಳ್ಳನೆಯ ಹೂಗಳ  ನೋಡೋ 

ಬಾಳೆಂಬ ತೋಟದಲಿ 
ಬೆಳೆದೆರೆಡು ಹೂವುಗಳು 
ಬಳುಕುತಾ ತಲೆದೂಗಿವೆ ನೋಡೋ 

ಅಂಬರದಿ ಸುವಾಸನೆಗೆ  
ದುಂಬಿಗಳ ಹಾರುತಿವೆ 
ತುಂಬಿದ ಮೊಗವ ನೋಡೋ 

ನೈದಿಲೆಯು ನಾಚಿಕೆಗೆ 
ಬೈತಲೆಯು ಎರಡಾಗಿ 
ಕೈ ಹಿಡಿದ ನಗುವ ನೋಡೋ   

ಬಟ್ಟಲು ಗಣ್ಣನು ಬಿಟ್ಟು 
ಬೆರಗಾಗಿ ಸುತ್ತ ನೋಡುತ್ತಿವೆ   
ಬಳಿಸಾಗಿ ಸೊಬಗ ಸವಿಯಬೇಕು ನಾವು 

ಬುಧವಾರ, ಏಪ್ರಿಲ್ 18, 2018

ಕದ್ದ ಮಡಿಕೆ ತೋರು

ನಂದಗೋಕುಲದಲ್ಲಿ
ಮಿಂದ ನಮ್ಮ ಮಡಕೆಗಳ  
ತಂದು ಜೋಡಿಸಿರುವೆ ನೀ 
ಕಂದನಲ್ಲವೋ  ಕೃಷ್ಣ 

ಬೆಣ್ಣೆ ತುಂಬಿ ತರುತಿದ್ದೆ 
ಹಣ್ಣು ಹಾಲು ತುಂಬುತ್ತಿದ್ದೆ  
ತಣ್ಣನೆಯ ಮೊಸರು ಮಾರುತಿದ್ದೆ 
ಕ್ಷಣದಲ್ಲಿ ಕದ್ದು ತಂದೆ  ಕೃಷ್ಣ  

ಸುಣ್ಣದಿಂದ ಚಿತ್ರ ಬಿಡಿಸಿ 
ಬಣ್ಣ ತುಂಬಿದ ನನ್ನ ಮಡಿಕೆ 
ಕಣ್ಣು ಬಿಟ್ಟು ಹುಡುಕಿದರೂ 
ಸಣ್ಣ ಕುರುಹು ಇಲ್ಲ ಕೃಷ್ಣ 

ಸಭ್ಯನಲ್ಲವೇ ನೀನು   
ಲಭ್ಯವಿದ್ದರೆ ನನ್ನ ಮಡಿಕೆ ತೋರು 
ಅಭ್ಯಂಜನ ಮಾಡಿಸಿ ಬೆಣ್ಣೆ ಕೊಡುವೆ  
ಪ್ರಭಂಜನನಂತೆ ಬಾರೋ ಕೃಷ್ಣ 

ಶ್ರೀ ಶೇಷಾಗಿರಿರಾವ್

ಹೂವ್ವಿನ ಹಡಗಲಿ ವಾಸ 
ಶ್ರೀ ಶೇಷಾಗಿರೀಶ 
ಮಲ್ಲಿಗೆ ತೋಟದಲ್ಲಿ 
ಮಾನವೀಯತೆಯ ಹೂ ಬೆಳೆದ \\ ಪ \\

ಬರವಣಿಗೆಯ ಮೂಲಕ ಜನರ 
ಬಡೆದಿಬ್ಬಿಸಿ ಜಾಗೃತಿ ಮೂಡಿಸಿದ 
ಬರೆದಂತೆ ನುಡಿದಂತೆ ನೆಡೆದು 
ಬೇರೆಯವರಿಗೆ ಆದರ್ಶಪ್ರಾಯರಾದ   ೧. 

ಬೇರೆ ಬೇರೆ ಧರ್ಮ ಆಚರಣೆಗೆ 
ಬೆಲೆಕೊಟ್ಟು ಎಲ್ಲರಿಗೂ ಸಹಕರಿಸಿದ 
ಬವಣೆಗಳು ಎಷ್ಟೇ ಬಂದರೂ 
ಬಿಡದೆ ತನ್ನ ನೈಜ ಧರ್ಮ ಪಾಲಿಸಿದ  ೨ 

ಭಾವನೆಗಳಿಗೆ ಬೆಲೆಕೊಟ್ಟು ಬೆಳೆಸಿದ 
ಬಾಲ ಕವಿಗಳೆಷ್ಟೋ ನಾನರಿಯೆ 
ಬದುಕಿದರೆ ಹೀಗೇ ಬದುಕಬೇನೆಂದು ತೋರಿ 
ಬಾರದ ಲೋಕಕ್ಕೆ ಇಷ್ಟುಬೇಗ ಹೋದದ್ದು ಸರಿಯೇ ೩

ಭಾನುವಾರ, ಮಾರ್ಚ್ 18, 2018

ಯುಗಾದಿ


ಬೇವು ಹೂವು, ಬೆಲ್ಲ ಸೇರಿ
ಬಂತು ಮತ್ತೆ ಯುಗಾದಿ
ಬನ್ನಿ ಎಲ್ಲ ಸಂಭ್ರಮಿಸೋಣ

ಸಿಹಿ ಕಹಿ ಮುನಿಸು ಸೊಗಸು
ಸೇರಿ ಜೀವನದ ದಾರಿ
ಸಾರುವ ಸತ್ಯ ಅರಿಯೋಣ

ಮರ ಗಿಡ ಚಿಗುರಿ ಚಿಗುರಿ
ಮೂಡಿದೆ  ಹೊಂಬಣ್ಣ
ಮನಸು ಬಿಚ್ಚಿ ನಲಿಯೋಣ

ಎಳೆಯ ಎಲೆಯ ಹಸಿರು ಸೂಸಿ
ಹೊಳೆಯುತ್ತಿದೆ ಇಳಿಯು
ಹಳೆಯ ದ್ವೇಷ ಮರೆಯೋಣ

ಹೂವು ಕೊಟ್ಟು ಪ್ರೀತಿ ಹರಿಸಿ
ಹೊಸ ವರ್ಷ ಸ್ವಾಗತಿಸಿ
ಹೊಸತು ಕನಸು ಕಾಣೋಣ 

-ಪ್ರಭಂಜನ ಮುತ್ತಿಗಿ

ಶುಕ್ರವಾರ, ಡಿಸೆಂಬರ್ 15, 2017

ಸೋತೆ

ಮನಸೇ ಮನಸೇ ನಿನ್ನ ಮೌನಕೆ ನಾ ಸೋತೆ 
ಕನಸೇ ಕನಸೇ ನೀ ಏಕೆ ಕಾಡುತಿರುವೆ 

ಬೊಗಸೆ ಕಣ್ಣಿಲಿ ಹೊಳಪೊಂದು ಮಿಂಚಿದೆ 
ಅದನೋಡುತ ಕಳೆದುಹೋದೆ   
ಸೊಗಸಾಗಿ ನೈದಿಲೆ ಲತೆಯಂತೆ ಬಳಕುತಿದೆ
ಅದುಹಾರಲು ಮದವೇರಿತೇ   
ಬಾಗಿಲನ್ನು ಹಾಕಿ ಬೆಚ್ಚಗೆ ಇಡುತಿದೆ ರೆಪ್ಪೆ 
ಬಿಗಿದಪ್ಪಿ ಕರೆದಂತಿದೆ  
ಕಮಲದ ಎಲೆಯಂತೆ ಸೆಳೆಯುತಿದೆ  ಕಣ್ಣು 
ಜಿಂಕೆಯ ಚಲುವಿಗೆ ಇದೆ ಹೋಲಿಕೆ 


ಬಿಸಿಲಲ್ಲಿ ನರಳು ಕೊಡೆಯಂತೆ ಬಾಗಿದ  ಹುಬ್ಬು 
ಪ್ರೀತಿಯ ಮಳೆಯಲ್ಲಿ ಮಿಂದಂತಿದೆ 
ಉಸಿರಿಗೆ ಹೊಸತನ ಬರುವಂತಿದೆ ನಾಸಿಕವು 
ಸುಮಧುರ ಪರಿಮಳವ ಸೂಸಿದೆ   
ಬೆಸುಗೆಯ ಬಯಸುತ ತುಟಿ ನಲಿದಾಡುತಿವೆ 
ಇನಿಯನ ಸನಿಹಕೆ ಕಾದಂತಿವೆ 
ಹುಣ್ಣಿಮೆ ಚಂದ್ರನ ಹೋಲುವ ಆ  ದುಂಡುಮುಖ  
ನನ್ನ ಮನಸು ಹೃದಯವ ಸೆಳೆದಿದೆ