ಬುಧವಾರ, ಅಕ್ಟೋಬರ್ 12, 2022

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ
ನಾನು ಹುಟ್ಟಿರಲಿಲ್ಲ

ಹುಟ್ಟಿದ ಕ್ಷಣದಿಂದಲೇ  
ಅನುಭವಿಸಿದೆ  ಸ್ವಾತಂತ್ರ್ಯ, 
ತ್ಯಾಗ, ಬಲಿದಾನದ, ಅರಿವಿರಲಿಲ್ಲ 

ಇತಿಹಾಸ ತಿಳಿಸುತ್ತೆ !

ಪರಕೀಯರು ನುಸಿಳಿದರು ದೇಶಕ್ಕೆ ಬೆಕ್ಕಿನಂತೆ,  
ಹಿಡಿದರು ಮೋಸದಿಂದ ಆಡಳಿತ  ಕಪಿಮುಷ್ಟಿಯಂತೆ,  
ದೇಶ  ನಮ್ಮದು, ಸಂಪತ್ತು ನಮ್ಮದು   
ದೋಚಿ ಸಾಗಿಸಿದರು, ಕಟ್ಟಿದ ಸುಂಕವೂ, ತಮ್ಮದಂತೆ    

ದಿನಸಿ ಪಡೆಯಲು ನಿಲ್ಲಬೇಕಿತ್ತು ದಿನವೆಲ್ಲಾ ಸಾಲು 
ಬಡತನ, ಕಷ್ಟಗಳು,  ಜನರ, ದಿನನಿತ್ಯದ ಗೋಳು  
ಬೇಸತ್ತು ಹೋದರು ಜನ, ಕ್ರೌರ್ಯ ದಬ್ಬಾಳಿಕೆಗೆ   
ಜೈಲು, ನೇಣು, ಬಲಿಯಾದವರೆಷ್ಟೋ ಗುಂಡುಗಳಿಗೆ 
 
ನೆತ್ತರು ಹರಿದರೂ, ವೀರರು ಸತ್ತರೂ  
ಬಿತ್ತಿದರು ಸ್ವಾತಂತ್ರದ ಬೀಜ ಸಾವಿರಾರು  
ಸತ್ಯಾಗ್ರಹ, ಅಸಹಕಾರ, ಹೋರಾಟದ ಹಾದಿ 
ಬ್ರಿಟಿಷರು, ದೇಶ ತೊರೆಯುವಂತಾಯಿತು ನೋಡು  

ದೇಶ ವಿಭಜಿಸಿ,  ಕಿಚ್ಚನ್ನು ಹಚ್ಚಿ, ಬಿಟ್ಟುಹೋದರು 
ಕೊಟ್ಟರು ಸ್ವಾತಂತ್ರ್ಯ ಜೊತೆಗೆ ಕಶ್ಮೀರ ಜಂಜಾಟ 
ಅಮೃತವರ್ಷದ ಸ್ವತಂತ್ರ  ಆಚರಿಸುತ್ತಿದ್ದರೂ 
ನಿಂತಿಲ್ಲ, ಗಡಿಯಲ್ಲಿ ನಿತ್ಯ  ಸೈನಿಕರ ಕಾದಾಟ  

ಆದರೂ !
ಭಾರತ ವರಚೈತನ್ಯದ ನಾಡು,  ರೈತರ ಸಿರಿನಾಡು 
ಭಾವೈಕ್ಯತೆಯ ನೆಲೆವೀಡು,  ಭಾತೃತ್ವದ ಸವಿಗೂಡು 
ವಿವಿಧ ಭಾಷೆಯ, ವಿವಿಧ ಸಂಸ್ಕೃತಿಯ ತವರೂರು,   
ಬಲಿಷ್ಠವಾಗುತ್ತಾ ಸಾಗಿದೆ  ದೇಶ, ವಿಶ್ವಗುರುವಾಗಲು

*ಮಹಾಲಯ*

 

ಮಲಗಲೊಂದು ಚಾಪೆ 
ಪಾದ ಸವಿಯದಂತೆ ರಕ್ಷೆ 
ಉರುಗೋಲು ನೀನಾದರೆ 
ಬೇರೆ ಬೇಕಿನ್ನೇನು ನನಗೆ - ಮಗನೆ 

ಮುದಿ ಜೀವ ಇರುವುದಿನ್ನ 
ನಿತ್ಯ ತಿನ್ನುವೆ  ತುತ್ತು ಅನ್ನ 
ಅರ್ಥ ಮಾಡಿಕೊ ಇಳಿಯ ಮನಸ್ಸನ್ನ 
ಕೊಟ್ಟರೆ ಸಾಕು ಸ್ವರ್ಗ, ಸಮಯವನ್ನ - ಮಗನೆ 
   
ಹೋದ ಮೇಲೆ ಪಿಂಡ ಕಟ್ಟಿ 
ಚಾಪೆ ಚಪ್ಪಲಿ ಛತ್ರಿಯನ್ನ 
ಹಾಸಿಗೆ ಸಹಿತ ದಾನ ಮಾಡಿದರೆ 
ಸಿಗದು ನನಗೆ, ನೀ  ತಿಳಿದರೆ ಚನ್ನ  - ಮಗನೆ 

ಹೊಳೆವ ಕಣ್ಣಲಿ


ಬಳ್ಳಿ  ಹುಬ್ಬಿನ 
ಹೊಳೆವ ಕಣ್ಣಲಿ 
ಮಿಂಚು ಒಂದು ಮೂಡಿದೆ 

ತಂಗಾಳಿ ಬೀಸಲು 
ಬಳುಕಿ ಕೂದಲು  
ಗಂಧ ಸೂಸುತ ಹಾರಿದೆ   

ಬಿರಿದ ಸಂಪಿಗೆ ಹೂವಿನಂತೆ 
ನೀಳ ನಾಸಿಕ ನಾಚಿದೆ 
ಕಂಚಿನಂಥ  ಮಾತಿನಲ್ಲಿ   
ತುಟಿಯು ಮೆಲ್ಲಗೆ ನಗುತಿದೆ 

ತಾರೆಯಂತೆ ಹೊಳೆವ ಮುಖದಲಿ 
ಇಂದ್ರಲೋಕವೇ ಇಳಿದಿದೆ 
ರಂಭೆ ಊರ್ವಶಿ  ಮೇನಕೆಗೇನು ಕಮ್ಮಿ 
ಸೌಂದರ್ಯ  ಕಣ್ಮನ ಸೆಳೆದಿದೆ 

ಮಯೂರಿಯಾಗಿ ಹರಿಣಿಯಾಗಿ   
ಎದೆಯ ತುಂಬಾ ಓಡಾಡಿದೆ 
ಕನಸಿನಲ್ಲೂ ನನಸಿನಲ್ಲೂ 
ನಿನ್ನನೇ ಕಾಯುತ ಕುಳಿತಿಹೆ 

ನಿನ್ನಾ ನಗುವು

 ನೀಲಿ ಆಕಾಶದಲಿ  

ಮಿನುಗೋ ಪುಟ್ಟ ತಾರೆಗಳಂತೆ   
ಸೊಗಸಾಗಿ ಮಿಂಚುತಿದೆ
ನಿನ್ನಾ ನಗುವು

ಕೆರೆಯ ತಿಳಿ ನೀರಿನಲಿ
ಬಿರಿದ ಕೆಂದಾವರೆಯಲ್ಲಿ
ಹೊಳೆವ ಇಬ್ಬನಿಯಂತೆ
ನಿನ್ನ ನಗುವು

ಹಸಿರು ತುಂಬಿದ ವನದಲಿ
ಬಣ್ಣದ ಚಿಟ್ಟೆ  ಹಾರುತಲಿ
ಹೂಗಳು ನಾಚಿದಂತೆ
ನಿನ್ನ ನಗುವು

ಭಾವನೆಗಳ ಲೋಕದಲಿ
ಮೃದುವಾದ ಮನಸಿನಲಿ  
ನವಿರಾಗಿ ಚುಮ್ಮುತಿದೆ  
ನಿನ್ನಾ ನಗುವು

ನೋಟವಿರಲಿ ಆಟವಿರಲಿ
ಪಾಠ ಜೀವನಕ್ಕಿರಲಿ
ಎಲ್ಲವಕ್ಕೂ ಉಸಿರು
ನಿನ್ನಾ ನಗುವು

ನಕ್ಕು ಬಿಡು ನೀನೊಮ್ಮೆ
ನಗುವೆನು ನಾನೊಮ್ಮೆ
ನಗುವಿನ ಮೊಹರಾಗಲಿ 
ನಿನ್ನಾ ನಗುವು