ಎಷ್ಟು ಚಲುವೆ ನನ್ನ ಈ ಮುದ್ದು ರಾಧೆ
ಸೃಷ್ಟಿಸಿದ ನಾನೇ ಇಂದು ಮಾರು ಹೋದೆ ||ಪ||
ಆಕಳು ಕಾಯುವ ನೆಪದಲಿ ಯಮುನೆಯ
ದಡದಲ್ಲಿ ಕೊಳಲನು ಉದುತ ಕುಳಿತು
ಮುರುಳಿಯ ನಾದದಿ ಹೊಮ್ಮುವ ಸ್ವರದಲಿ
ನಿನ್ನ ಕಂಡಿದ್ದು ಹೇಳದಿರಲು ಸಾಧ್ಯವೇ ರಾಧೆ! ೧
ಗೋವರ್ಧನ ಗಿರಿಯ ಎತ್ತಿದ ಸಮಯದಿ
ಕಾಳಿಂಗನ ಹೆಡೆಯ ಮೇಲೆ ಕುಣಿದ ಕ್ಷಣದಲಿ
ಕಂಸನ ಸೊಕ್ಕನ್ನು ಅಡಗಿಸಿ ತುಳಿದಾಗ
ನಿನ್ನ ನೆನಪು ಇರದಿರಲು ಸಾಧ್ಯವೇ ರಾಧೆ ! ೨
ನನಗಾಗಿ ಪ್ರತಿ ದಿನವು ನಿರಂತರ ಜಪಿಸಿ
ಹಗಲು ಇರಿಳು ನಾ ಬರುವುದೇ ನಿರೀಕ್ಷಿಸಿ
ಕಾದು ಕಾದು ಕುಳಿತ ನಿನ್ನ ಮೋಹದ ಪ್ರೀತಿಗೆ
ಮನಸು ಸೋಲದಿರಲು ನನ್ನಿಂದ ಸಾಧ್ಯವೇ ರಾಧೆ! ೩
ನಯನ ಮನೋಹರ ಮಧುರೆಯ ಸೊಬಗಲಿ
ಎಲ್ಲೆಡೆ ನಿನ್ನ ಕಾಣುವ ನೆನಪಿನ ಕಡಲು
ತುಂಬಿ ಬರುತಲಿದೆ ನನ್ನ ಪ್ರೀತಿಯ ಒಡಲು
ನಿನ್ನ ಅರಸಿ ನಾ ಬಾರದಿರಲು ಸಾಧ್ಯವೇ ರಾಧೆ! ೪
ಕಣ್ಣಿನ ಕಾಂತಿಯಲಿ ಹೊಳೆವ ಮಿಂಚು ನೀನು
ಮೋಹಕ ನಗುವಿನಲ್ಲಿ ಇರುವ ಚಲುವೆ ನೀನು
ಕನಸು ಮನಸು ಹೃದಯದಲ್ಲಿ ತುಂಬಿರುವೆ ನೀನು
ನೀ ಇಲ್ಲದೆ ನಾ ಇರಲು ಸಾಧ್ಯವೇ ರಾಧೆ!
:ಪ್ರಭಂಜನ ಮುತ್ತಿಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ