ಗುರುವಾರ, ಡಿಸೆಂಬರ್ 31, 2020

ಹೋಗು ನೀ ಇಪ್ಪತ್ತು

ಹೋಗು ನೀ ಇಪ್ಪತ್ತು 

ಮತ್ತೆಂದೂ ಬಾರದಂತೆ 

ನಿನ್ನ ಮುಖ ಯಾರಿಗೂ  

ಮುಂದೆಂದೂ ತೋರದಂತೆ  ಪ 


ಕರೋನ ಸೃಷ್ಟಿಸಿ ನೀನು 

ಘೋರ ತಪ್ಪನು ಎಸಗಿದಂತೆ 

ಮರುಕಳಿಸದಿರು ಯಾವತ್ತೂ 

ಜನರ ಜೀವಹಿಂಡಿದ ಪಾಪಿ ನೀನಂತೆ  ೧


ಹಳೆಯ ಮಳೆಸೇರಿಸಿ ಸುರಿದು  

ಇಳೆಯು ಕಳೆದುಹೋಗುವಂತೆ 

ತೊಳೆದು ಬಿಟ್ಟೆಯಲ್ಲ ನೀ 

ಬೆಳೆಯ ಕಳೆಯೂ ಉಳಿಯದಂತೆ  ೨


ಬಾ ನವ ವರುಷವೇ ಬಾ   

ಹೊಸ ಅಸೆ ಚಿಗುರಿಸುವ ನಿಶೆಯಲ್ಲಿ

ಹೊಸ ಕನಸಿನ ಬೀಜ ಬಿತ್ತುತಲಿ    

ಹಸಿರಾಗಿಸು ಅಮೃತವ ಸುರಿಸುತಲಿ. ೩

ಬುಧವಾರ, ನವೆಂಬರ್ 11, 2020

ಗಾಜಿನಪಟ

ಇಳಿದ ಸರಿ ರಾತ್ರಿಯಲಿ
ಚಳಿಗೆ ಹೆದರದೆ ತೂಗಾಟ 

ಬಳಿಗೆ ಬಂದವರ ಹೆದರಿಸಿ
ಘಿಳಿಡುವುದೇ ನಮ್ಮ ಆಟ 

ಕಪ್ಪು ರೆಕ್ಕೆಯ ಹರಡಿ
ಕತ್ತಲಲಿ ಸುತ್ತುವ ಹಾರಾಟ  

ಕತ್ತೆತ್ತಿ ನೋಡಿದರೆ ಸಾಕು 
ಕಣ್ಣ ಬಡಿದು ಆಡುವೆವು ಜೂಟಾಟ  

ಸುತ್ತಲಿನ ಮರಗಳ  ಕಡೆದು 
ಎತ್ತರೆತ್ತರ ಮನೆಗಳ ಕಾಟ

ಚಿತ್ತ ಬದಲಾಗಿ ಅಪ್ಪಳಿಸಿದೆವು 
ಚಿತ್ತಾರ ಮೂಡಿದೆ ಒಡೆದ ಗಾಜಿನಪಟ

ಶುಕ್ರವಾರ, ಸೆಪ್ಟೆಂಬರ್ 11, 2020

**ಪಯಣದೊಳಗೋ**



ಯೋಗಿ ಭೋಗಿಯೊಳಗೋ
ಭೋಗಿ ಯೋಗಿಯ ಜೊತೆಗೋ
ಯೋಗಿ ಭೋಗಿಯೂ ಇರುವರು  
ರೈಲು ಭೋಗಿಯೊಳಗೋ 

ಹಸಿರು ಕನ್ನಡಿಹೊರಗೋ
ಕನ್ನಡಿ ಹಸಿರಿನ ಒಳಗೋ 
ಹಸಿರು ಕನ್ನಡಿಗಳೆರೆಡು 
ಉಗಿ ಬಂಡಿಯೊಳಗೋ 

ನಯನ ಮೊಬೈಲಿನೋಳಗೋ
ಮೊಬೈಲ್ ನಯನದ ಕಡೆಗೋ
ನಯನ ಮೊಬೈಲ್ ಒಳಗೆ 
ಮುಳುಗಿರುವುದು ಯಾವುದರೊಳಗೊ 

ಕಾಲ ಬದಲಾವಣೆಯೊಳಗೋ
ಬದಲಾವಣೆಯೇ ಕಾಲವೋ 
ಕಾಲ ಬದಲಾವಣೆಯ ಚೆಲುವು
ಕಾಣುವುದು ಪಯಣದೊಳಗೋ !  ಮನುಜಾ.

ಲಾಲಿ ಹಾಡು


ಜೋ ಜೋ .. ಜೋ ಜೋ ಜೋ 

ಕಣ್ಣು ಬಿಟ್ಟು ನೋಡದಿರು

ಮತ್ತೆ ಎದ್ದು ಕೂರದಿರು

ಮುದ್ದಾಗಿ ನಗುತ ಮಲಗು ನನ್ನ ಮಗುವೇ


ಇರಿಳು ಸರಿದ ರಾತ್ರಿಯಲಿ 

ಅರ್ಧಚಂದ್ರ ನಗುತಿಹನು   

ಕಣ್ಣುಮುಚ್ಚಾಲೆ ಆಡುತಿರುವ

ಬಾನಿನಲ್ಲಿ ನಿನ್ನ ಕಣ್ಗಳಂತೆ 


ನೋಡುವೆ ಏನು ಕಿಟಿಕಿಯಲ್ಲಿ

ನಗು ಜಾರಿದ ಆ ತುಟಿಗಳಲ್ಲಿ

ಕನವರಿಸಿ ಏಳುವೆ ಏಕೋ

 ಆತಂಕ ಕಂಗಳಲ್ಲಿ 


ಚಂದಿರನ ಕರೆಸುವೆನು

ತಂಗಾಳಿ ಜೊತೆ ಬಂದು  

ಮಲಗಿದ ಮಂಚ ತೂಗಿ    

ದುಗುಡ ಓಡಿಸುವ ಅರೆಕ್ಷಣದಲ್ಲಿ 


ಚಂದ್ರ ಲೋಕಕೆಕರೆದೊಯ್ದು  

ಉಯ್ಯಾಲೆ ಆಡಿಸುವನು 

ತಾರೆಗಳಿಂದ ಲಾಲಿ ಹಾಡಿಸುವ

ಮಲಗು ಮುದ್ದು ಮಗುವೇ

ಉಸಿರೂ ಕಣೆ. .

 ಊದಿದೆ   
ಪ್ರೀತಿಯಲ್ಲಿ ಕೆನ್ನೆ ಊದಿದೆ   
ಊದಿದೆ
ಕೆನ್ನೆ ಮೇಲೆ ತುಟಿಯು
ಮೂಡಿದೆ. 

ನೋಡು ನಿನ್ನ ನನ್ನ ಕಣ್ಣಾ ಒಳಗೆ
ನಿಜವೂ ನಿನಗೂನು  ತಿಳಿಯುತ್ತದೆ
ಕಿವಿಯಲ್ಲಿ ಬಂದು ನಿಜವ ಹೇಳುವೇ
ಹೇಳಲೇ
ಕನಸಿನಲ್ಲೂ ನೀನೆ  ಕಾಣುವೆ 

ನಿನ್ನಾಣೆಗು ಬೇರೆ ಹುಡುಗಿ ಜೊತೆ ಎಂದು ಓಡಾಡಿಲ್ಲ
ನಿನ್ನಾಮೇಲೆ ಪ್ರೀತಿಕಿಚ್ಚು ಹುಚ್ಚಾಗಿ  ಮಿತಿ ಮೀರಿದೆ 
ಕೈಯಲಿ ಕೈ ಇಟ್ಟು ವಾದಮಾಡಲೇ ನನಗಾಗಿ ನೀನು ಹುಟ್ಟಿರುವೆ
ಹಿಂದಿನ ಜನ್ಮದ ರಹಸ್ಯ ತಿಳಿಸಲೇ ನಿನಗಾಗಿ ನಾ  ಸತ್ತಿರುವೇ 
ಮತ್ತೆ ಸಾಯಲೇ 

ಅದೇ ಪ್ರೀತಿ ಇಂದು ಕಾಡಿದೆ
ಕಾಡಿದೆ
ಕನಸಿನಲ್ಲೂ ನೀನೆ ಕಾಣುವೆ 

ನಿನ್ನಪ್ಪನ ಅಡ್ಡಿ ಇದೆಯಾ, ನನ್ನ ಪ್ರೀತಿಮಾಡಲೂ
ನಿನ್ನಮ್ಮನಾ  ಮದುವೇಗೊಪ್ಪಿಸುವೆ,  ನಾ ಬೇಗ ಹಾಳಾಗಲು
ಕತ್ತಲಿ ತಾಳಿಯೊಂದು ಬೇಕಾಗಿದೆ,  ಕಟ್ಟಿ ಇಡುವೆ  ಸಿಂಧೂರಾ
ಮಧುಚಂದ್ರಕೆ  ಹೋಗಬೇಕಾಗಿದೆ, ಇದೆಯಾ ನಿನ್ನ ಸಹಕಾರ
ಅರಳಿದೆ    

ಆಸೆಯಲ್ಲಿ ಕೆನ್ನೆ ಮಿಂಚಿದೆ 
ಹೇಳದೇ
ಕೆನ್ನೆ ಮೇಲೆ ತುಂಟ ಕಿರುನಗೆ  

ನೋಡಿದೆ ನಾ ನಿನ್ನ ಕಣ್ಣಾ ಒಳಗೆ
ಮೋಹದ ಕಾಂತಿ  ನಲಿದಾಡಿದೆ 
ತುಟಿಯಲಿ ತುಟಿಯಿಟ್ಟು ಒಂದು ಹೇಳಲೇ
ಹೇಳಲೇ 

ನೀನೆ ನನ್ನ ಉಸಿರೂ ಕಣೆ. . 

ಶುಕ್ರವಾರ, ಜುಲೈ 3, 2020

ಅಂಜಿಕೆ ಆಗ್ತದ ನಿಂತ್ಕೊಂಡ್ರು

ಊರೆಲ್ಲಾ ಕರೋನ ವಕ್ಕರಿಸಿದೆಯಮ್ಮ 
ಗುಡಿಸಲೂ ಮಳೆಯಲ್ಲಿ ಬಿದ್ದುಹೋಯ್ತು 
ದುಂಡು ಪೈಪಲ್ಲಿ ಎಷ್ಟುದಿನ ಇರ್ಬೇಕಮ್ಮ 
ಪಾತ್ರಿ ಪೊಡಗ, ಸಾಲಿಚೀಲ ಕೊಚ್ಚೊಯ್ತ  

ನೀನಂತೂ ಸಾಲಿ ಕಲಿಲಿಲ್ಲ ಅಮ್ಮ 
ಸಾಲಿ ಸೇರಿಸಿದ್ದಿ ಕೂಲಿ ದುಡ್ಕೂಡಿಟ್ಟು 
ವರ್ಷದ ಪೂರ್ತಿ ಓದು  ನಿಂತೋಯಿತಮ್ಮ 
ಫೀಜು ವಾಪಾಸ್ ಬರಲ್ಲ ಕೈಬಿಡ್ತು 

ಸಾಲಿ ಇನ್ನು ಸುರುವಗಲ್ಲ ಅಮ್ಮಾ 
ಯಾಕೆ ಹಾಕುತಿ ಈ ಸ್ಕೂಲ್ ಡ್ರೆಸ್ಸು  
ಈ ಬಟ್ಟೆ ಮೈಮೇಲೆ ಇದ್ರೆ  ಅಮ್ಮ 
ಹೋಗ್ಬೇಕ್ ಅನಿಸ್ತಾದ ಸಾಲಿಗೆ ಸ್ವಲ್ಪೊತ್ತು 

ದೊಡ್ಡಮನೆ ಹುಡುಗ್ರು ಓದುತ್ತಾರಂತಮ್ಮ 
ಕಂಪ್ಯೂಟರ್ ಮುಂದೆ ಕುತುಗೊಂಡು 
ರಾತ್ರಿ ಕತ್ತಲೆ ಬೆಳಕಿಲ್ಲದ ಪೈಪಮ್ಮ
ಓದೋದಿರ್ಲಿ, ಅಂಜಿಕೆ ಆಗ್ತದ ನಿಂತ್ಕೊಂಡ್ರು  

ಬುಧವಾರ, ಮೇ 6, 2020

ತೊಳೆ

ಮಳೆ 
ಇಳೆಯ 
ಕೊಳೆಯನ್ನೆಲ್ಲ 
ತೊಳೆ 
ಕರೋನ 
ಕಳೆಯನ್ನು 
ಅಳೆ
ಕೊಡು 
ಪರಿಸರಕ್ಕೆ 
ನಮಗೆ 
ಹೊಸಾ 
ಖಳೆ  

ಭೂಮಿ ನಮ್ಮವ್ವಾ

ಏಟು ಚಂದಾ ಕಾಣಿಸ್ತಿಯವ್ವ 
ಭೂಮಿ ನಮ್ಮವ್ವಾ 
ಹಸಿರು ಪಟ್ಟಿ ಸೀರೆ ಉಟಕೊಂಡು 
ನೀ ಹೊಳಿಯಕತಿಯವ್ವ 

ಹೊಕ್ಕಳು ಹೋಲುವ ಜಾಗಾದಾಗ    
ಸಣ್ಣ ಮನೀಯ ಕಟ್ಟಿಯವ್ವ 
ಸುತ್ತಾ  ತೆಂಗು ಮಾವು ಬಾಳೆ 
ಜೀವಕ ಉಸಿರು  ತುಂಬ್ಯಾವ

ಹ್ಯಾಂಗ ಜೀವನ್ ಮಾಡಬೇಕೆಂದು 
ನೀ ತೋರಿಸಿ ಕೊಟ್ಟಿಯವ್ವ 
ಹಣದ ಹಿಂದೆ ಹೋಗಿ ಹಸಿರು 
ಉಸಿರು ನಾವು ಮರೆತು ಬಿಟ್ಟೀದ್ವೆವ್ವ  

ನಿನ್ನಹಂಗ ನಾವು ಇರಬೇಕು ಅಂದ್ರು 
ಜನುಮದಾಗ ಆಗಂಗಿಲ್ಲ ಅಂದಿದ್ವಿವ್ವ  
ಕರೋನ ತಂದು ಆಗಲಾರದ್ದೆಲ್ಲಾ  
ನೀ ಮಾಡಿ ತೋರಿಸಿಬಿಟ್ಟೆಲ್ಲವ್ವ   

ಕುಬೇರ ಆಗಿಹೋದ್ನಾ

ಹಳಿ ಮನೆ ಕೆಡವಿ ಹೊಸ ಮನಿ ಕಟ್ಟಕ
ತಯಾರಿ ಮಾಡಿದ್ನಾ
ಮನ್ಯಾಗಿರುವ ಹಳಿ ಹಳಿ ಸಾಮಾನು
ಹೊರಕ್ಕೆ ಹಾಕಿ ಬಂದಿದ್ನಾ

ಲಕ್ಷ ಲಕ್ಷ ಸಾಲ ಮಾಡಿ
ಮನಿಕಟ್ಟಕ ಹತ್ತಿದ್ನಾ
ಆರು ತಿಂಗಳಾಗ ನನ್ನರಮನಿಯೊಳಗ
ಪ್ರವೇಶ ಮಾಡಿದ್ನಾ

ಊರೂರು ಸುತ್ತಿ ದಲ್ಲಾಳಿ ಇಟ್ಟು
ಚಂದದ ಹುಡುಗಿ ಹುಡುಕಿದ್ನಾ
ಮನಿ ಮುಂದ ಚಪ್ಪರ ಹಾಕಿ
ಭರ್ಜರಿ ಮದಿವಿ ಆಗಿದ್ನಾ

ಮನಿ ಒಳ ವಿನ್ಯಾಸ ಓದಿದ್ದ
ಹೆಂಡ್ತಿ ಬಂದಿದ್ಲಾ
ಹಳೆ ಸಾಮಾನ್ ಇಲ್ಲಿ ಇರಲೇಬೇಕು
ಅಂತ ಹಠ ಮಾಡಿದ್ಲಾ

ಹಳಿ ಪಾತ್ರಿ ಅಂಗಡಿ ಹುಡುಕೊಂಡು
ಊರೆಲ್ಲ ಸುತ್ತಿದ್ನಾ
ಹೆಂಡ್ತಿ ಇಷ್ಟ ಪಟ್ಟ ಹಳೆ ಸಂದೂಕ
ಮಂಚ ಮನಿಗೆ ತಂದಿದ್ನಾ

ಮೇಜಿನ ಮೇಲೆ ಸಂದೂಕ
ಇಡಾಕ ಜಾಗ ಮಾಡಿದ್ನಾ
ಮ್ಯಾಲಿಡುವಾಗ ಅದರ ಮೇಲೆ ಇದ್ದ
ಅಡ್ಡ ಹೆಸರು ಓದಿದ್ನಾ

ಆಯ್ಯ ನಮ್ಮದಾ ಸಂದೂಕ
ರೊಕ್ಕ ಕೊಟ್ಟು ತಂದಿದ್ನ
ಹಳೆ ಗ್ವಾಡಿ ಬಿದ್ದಾಗ ಸಿಕ್ಕ ಕೀ
ಹಾಕಿ ತೆಗೆದು ನೋಡಿದ್ನಾ

ಸಂದೂಕದ ತುಂಬಾ ಬೆಳ್ಳಿ ಬಂಗಾರ
ವಜ್ರ ತುಂಬಿದ್ವಾ
ಮನಿ, ಮದುವಿ ಸಾಲ ತೀರ್ಸಿ ಹೆಂಡ್ತಿಗೆ
ವಡವಿ ಮಾಡಿಸಿಬಿಟ್ನಾ

ಹಳೀ ಸಾಮಾನು ಹೊರಗೆ ಹಾಕಿ
ದೊಡ್ಡ ತಪ್ಪು ಮಾಡಿದ್ನಾ
ಹೊಸಾ ಹೆಂಡ್ತಿ ಹಳಿ ಸಂದೂಕ ತಂದು
ಕುಬೇರ ಆಗಿಹೋದ್ನಾ  

ಮಂಗಳವಾರ, ಮಾರ್ಚ್ 24, 2020

ಕೆಮ್ಮಂಗಿಲ್ಲಾ

ನರ ಮನುಷ್ಯ
ಇನ್ಮೇಲೆ ಕೆಮ್ಮಂಗಿಲ್ಲಾ
ಕೆಮ್ಮಿದ್ರೆ ಜನಗಳ
ಜೊತೆ ಸೇರಂಗಿಲ್ಲ
ಕೆಮ್ಮಿದ್ರೆ ಸಣ್ಣ ಹನಿ
ಬೀಳ್ತಾವೆ ಬಾಯಿಂದ
ವೈರಾಣು ಹರಡ್ತಾವೆ
ಮೂರಡಿ ವರೆಗೆ
ಅಲ್ಲಿರಿವ ವಸ್ತುಗಳಲ್ಲಿ
ಮುರ್ತಾಸು ಬದುಕಿರ್ತಾವೆ
ಕೈಯಿಂದ ಮುಟ್ಟಿದ್ರೆ
ಕಣ್ಣುಬಾಯಿ ಮುಟ್ಟದೆನೆ
ಕೈ ತೊಳಿ ಸೋಪಾಕಿ
ವೈರಾಣು ಸತ್ತು ಹೋಗ್ತಾವೆ
ಗಂಟಲಲ್ಲಿ ಕೂತ್ರೆ ಕರೋನ ಬರ್ತದೆ
ಹೆದರೋದು ಬೇಡಣ್ಣ
ಹುಷಾರಾಗಿ ಇದ್ಬಿಡೋಣ
ಮನೆ ಬಿಟ್ಟು ಹೊರಗೆ ಹೋಗದೆ
ಕರೋನ ತಡೆಗಟ್ಟೋಣಾ
ಸದ್ಯಕ್ಕೆ ಇದೊಂದೇ ಔಷದ
ನಾವೆಲ್ಲ ಪಾಲಿಸೋಣ

ಭಾನುವಾರ, ಫೆಬ್ರವರಿ 9, 2020

ಪ್ರೀತಿಗೆ

ಪ್ರೀತಿಗೆ ಯಾರ
ಅಪ್ಪಣೆ ಬೇಕಾಗಿಲ್ಲ
ಪ್ರೀತಿಗೆ ವಯಸ್ಸುನ
ಯಾವ ಹಂಗು ಇಲ್ಲ

ಮನಸುಗಳು ಬೆರಿತಾವೆ
ಕನಸುಗಳು ಬೀಳ್ತಾವೆ
ಮುನಿಸುಗಳು ಕೂಡ ಇರ್ತಾವ ತಾನೇ
ಬೆಸುಗೆಯಲಿ ಮರೆಯೋದು ಇದು ಪ್ರೀತಿನೇ

ಕನಸುಗಳು ಮುರಿಬಹುದು
ನನಸು ಆಗದಿರಬಹುದು
ಮನಸಿನಲ್ಲಿ ಪ್ರೀತಿ ಹಾಗೆ  ಇರ್ತಾದ ತಾನೇ
ತುಸು ದೂರ ಆದ್ರೂನೂ ಪ್ರೀತಿಗೆ ಸಾವಿಲ್ಲ ಕಣೇ  

ಬೇಕಿದ್ದು ಬಿಡದಹಾಗೆ
ಸಿಕ್ಕಿದ್ದು ಸಿಕ್ಕಿದಹಾಗೆ
ದಕ್ಕಿಸಿಕೊಳ್ಳುವವನೇ ಜಾಣ ತಾನೇ
ಜೊತೆಗೂಡಿ ನೆಡೆದಾರೆ ಜೀವನ ಸರಿದಾರಿನೇ

ಮದುವೆನೂ  ಆಗ್ತಾದೆ
ಮಕ್ಕಳೂನೂ ಹುಟ್ಟುತ್ತಾವೆ
ಮನಸ್ಸಿಗೆ ಪ್ರೀತಿ ಮುಲಾಮು ತಾನೇ
ಮನಸ್ಸಿಂದ ಮಗುವಾಗಿ ಇದ್ರೆ ಅದೇ ಸುಖಾನೇ   

ಶುಕ್ರವಾರ, ಜನವರಿ 24, 2020

ಮದುವೆ ಮುಂಚೆ

ಮಾತು ಮಾತಿನಿಂದ
ಹೇಗೋ ಅರ್ಥ ಮಾಡಿಸಬಲ್ಲೆ
ಆದರೆ ನನ್ನ ಮೌನ ಅರ್ಥ
ಮಾಡಿಕೊಳ್ಳುವವರು  ಇದ್ದರೆ ಅದು ನೀನು..

ಶಕ್ತಿ ಮೀರಿ ಕೆಲಸ ಮಾಡ ಬಲ್ಲೆ
ಆದರೆ ನಾ ಮಾಡದೆ ಬಿಟ್ಟದ್ದನ್ನು
ಮುಂದುವರೆಸುವವರು
ಯಾರಾದ್ರೂ  ಇದ್ದರೆ ಅದು ನೀನು..

ಕಣ್ಣ ಭಾಷೆ ತಿಳಿದು
ಹೃದಯ ಬಡಿತ ಅರಿತು
ಮನದೊಳಿಳಿದು
ಮುದನೀಡ ಬಲ್ಲೆ

ಆದರೆ ಕಣ್ಣ ಒಳಗೆ ಕುಳಿತು
ಹೃದಯದೊಳಗೆ ಅವಿತು
ನನ್ನ ಪ್ರೀತಿಸುವವರು
ಯಾರಾದರೂ ಇದ್ದರೆ ಅದು ನೀನು,
ಹೀಗೆಂದು ಮದುವೆ ಮುಂಚೆ ಮಾತ್ರ ಹೇಳಿದ್ದೆ ನಾನು. 💐🤣