ಬುಧವಾರ, ಡಿಸೆಂಬರ್ 31, 2014

ಹೊಸವರ್ಷ 2015

ಬಾಂಬ್ ಸ್ಪೋಟದ ರಕ್ತ ಚಲ್ಲಿತ್ತು 
ಸೂತಕದ ಛಾಯಯೂ  ಇತ್ತು 
ಆತಂಕದ ಮಧ್ಯ ಖಾಕಿ ದಂಡಿತ್ತು 
ಆದರೂ ರಸ್ತೆತುಂಬಾ ಸಂಬ್ರಮವಿತ್ತು 

ಉಗ್ರರ ಕರಿನರಳು  ಬಿದ್ದು  
ಶ್ವಾನಗಳು ವಾಸನೆ ಹುದುಕುತಿತ್ತು 
ಆದರೂ ದೀಪದ ಅಲಂಕರವಿತ್ತು 
ರಸ್ತೇಲಿ ಬಿಸಿರಕ್ತದ ಪಡೆಯೇ ತುಂಬಿತ್ತು 

ಮಳೆಯ ಉಲ್ಲಾಸದ ಸಿಂಚನವಿತ್ತು 
ತೊಳೆದು ಹಳೆಯದೆಲ್ಲವ ಮರೆಸಿತ್ತು 
ಛಳಿಯ ಮಧ್ಯದಲ್ಲೂ  ಮುವಿತ್ತು 
ಹಳೆ ಬಾಗಿಲಿಗೆ ಹೊಸ ತೋರಣವಿತ್ತು  

ಮಧುರ ನೆನಪುಗಳ ಹೊತ್ತು 
ಹೊಸಾ ಕನಸುಗಳು ಸಿಹಿ  ಇತ್ತು 
ವಿಷಾದಕ್ಕೆ ದಿಟ್ಟ ತಿಲಾಂಜಲಿ ಇಟ್ಟು 
ವಿನೋದದ ಹೊಸವರ್ಷ ಬಂದೇಬಿಟ್ಟಿತು 

ಹೊಸವರ್ಷದ ಶುಭಾಶಯಗಳು 

ಶುಕ್ರವಾರ, ಡಿಸೆಂಬರ್ 26, 2014

ಗುಬ್ಬಚ್ಚಿ

ಹುಡುಕುತಿಹೆ ಹೊಸಜಾಗ 
ಗೂಡೊಂದನು ಕಟ್ಟಲು
ಕಡಿದು ಹಾಕಿದರು ಹಳೆ
ಗೂಡ ತಿಳಿದ ಉಗ್ರರಿವರು

ಬಡಿದಾಡುತಿವೆ ಮರಿಗಳು
ತಡಿಯದಾಗದೆ ಈ ಚಳಿ
ಹೂಡಲಾರೆ ನಿಮಂತೆ
ಬಂಡಿ ಮನೆಯಿಂದ ಮನೆಗೆ

ಕಡ್ಡಿ ಕಸ ಹೆಕ್ಕಿ ತರಬೇಕು
ಅಡವಿ ಇದೆ ಅನತಿ ದೂರ
ಕೆಡದಂತೆ ಕಟ್ಟಬೇಕು ಹೊಸ
ಗೂಡು ಯಾರಿಗೂ ಸಿಗದಂತೆ

ಅಟ್ಟದಿರಿ ಉರ ಹೊರಗೆ
ಅಸ್ಪೃಶ್ಯತೆ ನಮಗಿಲ್ಲ
ಅತ್ತಾಗ ಮಕ್ಕಳಿಗೆ ತೋರಿಸಲು
ಗುಬ್ಬಚ್ಚಿಗಳು ನಾವು ಸಿಗುವುದಿಲ್ಲ

ಗಾಳಿ ಬೆಳಕು ಮರ ಗಿಡ
ನಿಮಗೊಂದೇ ಮೀಸಲಿಲ್ಲ
ಬದುಕಿ ಬದುಕಲು ಬಿಡಿ
ಇರಲಿ ಸಹಬಾಳ್ವೆ ನಮಗೆಲ್ಲ

ಸೋಮವಾರ, ನವೆಂಬರ್ 24, 2014

ಅಲ್ಲೇನು ನೋಡುತ್ತಿರುವೆ


ಅಲ್ಲೇನು ನೋಡುತ್ತಿರುವೆ

ಬುಧವಾರ, ಅಕ್ಟೋಬರ್ 29, 2014

ಹಚ್ಚೋಣ ದೀಪ

ಪ್ರಣತಿ ಎಣ್ಣೆಯ  ಒಡಲು
ಪ್ರೀತಿ ತುಂಬಿದ ಕಡಲು
ಬೆಳಗುತಿರಲಿ ದೀಪ ಹಗಲು ಇರಿಳು 

ದ್ವೇಷ ಅಸೂಯೆ ಬದಲು
ಮನಸ ಕೊಳೆಯನು ತೊಳೆದು
ಬೆಳಗಿಸುವ ಸ್ನೇಹ ಸುರಿಸಿ ಸೊಗಸು 

ಓಡಿಸಿ ಅಜ್ಞಾನದ ಕತ್ತಲು
ಹಚ್ಚೋಣ  ದೀಪ ಸುತ್ತಲು
ಬೆಳಗುರಿತಲಿ ಜ್ಞಾನ ಹರಿಸಿ ಹೊನಲು 

ಭಾನುವಾರ, ಅಕ್ಟೋಬರ್ 19, 2014

ಗಿಳಿಯೇ

ಚಂದದ ಗಿಳಿಯೇ ಬಾರೋ 
ಮುದ್ದಾದ ಹಾಡು ಹಾಡೋ 
ಹಚ್ಚ ಹಸಿರ ರೆಕ್ಕೆ ಬಿಚ್ಚಿ 
ಹೊಸ ಉಲ್ಲಾಸ ತಾರೋ ...
 
ಮಾವಿನ ಮರವ ಹುಡುಕಿ 
ಮಾಗಿದ ಕಾಯಿ ಕಚ್ಚೋ 
ದಾಳಿಂಬೆ ತೋಟಕೆ ನುಗ್ಗಿ 
ಸಿಹಿ ಹಣ್ಣಿಗೆ  ಧಾಳಿ ಮಾಡೋ 

ಹಣ್ಣಿನ ರುಚಿಯನ್ನ ಸವಿದು 
ಉಳಿದ ಗಿಳಿಗಳ ಕರಿಯೋ 
ಚಿಲಿಪಿಲಿ ಗುಟ್ಟುತ ಹಾರಿ 
ಮರಿ ಗಿಳಿಗೆ ಗುಟುಕು ನೀಡೋ 

ಹಸಿರಎಲೆ ಹಿಂದೆ ಕುಳಿತು 
ಕಣ್ಣು ಮುಚ್ಚಾಲೆ ಆಡೋ 
ರೆಂಬೆ ರೆಂಬೆ ಹಾರುತ  
ಮುದ್ದು ಮಾಡುತ ಕೂರೋ 

ಮಂಗಳವಾರ, ಅಕ್ಟೋಬರ್ 14, 2014

ವಸುಧೆ


ಹರನು ಜಡೆ ಸರಸಿ 
ಹರಿಯಬಿಟ್ಟ ಭಾಗಿರಥಿಯೋ 

ಹಸಿರ ಸೀರೆಯನುಟ್ಟು 
ಹಸಿಹಾಲು ಸುರಿಸೋ ಗಂಗೆಯೋ 

ವಸುಧೆಯೋಳಗಿನ 
ರಸಿಕ ಲೋಕದ ಒಡಲೊ 

ಹಸನಾದ ನಿತ್ಯ ಕಾನನದ 
ಹೊಸತಾದ ಝುಳು ಲಹರಿಯೋ 

ಉಸಿರಿಗೆ ಮೋಹ ತರುವ 
ವಸುಗೆಯಾಗದ ಮಾಯಾಂಗನೆಯೊ 

ಪಿಸುಮಾತಿಗೆ ಶರಣಾದ
ಹಸಿರು ತುಂಬಿದ ನವ ವಧುವೋ

ಹಸಿವ ಮರೆಸಿ ಮುದನೀಡುವ 
ಹೊಸರೂಪದ ಮೃಷ್ಟಾನ್ನವೋ 

ಕವಿಗಳಿಗೆ ಸ್ಪೂರ್ತಿ ತುಂಬೋ 
ನವಿರಾದ ಜೀವ ಜಲಪಾತವೋ

ಬಸವಳಿದು ಹೋಗಿರುವೆ ನಾ 
ನುಸುಳದಾಗಿವೆ ಪದಗಳು ಚೆಲುವ ವರ್ಣಿಸಲು !!
(ಚಿತ್ರಕ್ಕಾಗಿ ಬರೆದ ಕವನ )

ಶುಕ್ರವಾರ, ಅಕ್ಟೋಬರ್ 10, 2014

ಬರಗಾಲ


ನಲ್ಲನ ಪ್ರೀತಿಯ ಸಂದೇಶ 
ಬಂದರಾಗಲೇ ವಸಂತಕಾಲ 

ಚಲ್ಲಿ ಅರಳಿದ ಗುಲಾಬಿ ಹೂವು 
ಕಿರುನಗೆಯಬೀರಿದಾಗಲೇ ಮಳೆಗಾಲ  

ನಲ್ಲೆ  ಪ್ರೀತಿ ಕಣ್ಣಲ್ಲಿ ನೋಡಿ ಒಪ್ಪಿ 
ಅಪ್ಪಿಕೊಂಡರಾಗಲೇ ಚಳಿಗಾಲ 

ವಲ್ಲೆ ನಿನ್ನ ಸಹವಾಸ  ಎಂದು  
ಮುನಿಸಿಕೊಂಡಾಗಲೇ ಬೇಸಿಗೆಕಾಲ 

ಬೆಲ್ಲ ಕಡಲೆ ತಾಳಿ ಒಣಕೊಬ್ಬರಿ 
ಜೊತೆಇಟ್ಟಾಗಲೇ ಮುಹೂರ್ತಕಾಲ 

ಇಲ್ಲವಾದರೆ ಜೀವನ ಪೂರ್ತಿ 
ಕಂಡು ಕೇಳರಿಯದಾ ಬರಗಾಲ .. ಬರಗಾಲ !!

ಮಂಗಳವಾರ, ಸೆಪ್ಟೆಂಬರ್ 30, 2014

ಚದುರಿ ಹೋದವು ಮುತ್ತು

ಮುತ್ತಿನಹಾರವಧರಿಸಿ ಮನಸೆಳೆದ ಗೆಳತಿಯ 
ಕತ್ತನು ನೋಡಿ ಮೂಡಿತು ಪ್ರೀತಿ ಕಣ್ಣಂಚಿನಲ್ಲಿ
ಹತ್ತಿರ ಬಂದು ಬರಸೆಳೆದು ತಬ್ಬಲು ದೇಹ
ಚಿತ್ತಾರವಾಯಿತು ಸಂಚಲನ ತುಂಬಿದ ಸ್ಪರ್ಶದಲ್ಲಿ

ಭಂದಿಯಾಗಿವೆ ಹೃದಯ ಏರಿಸುತ ನಾಡಿ ಬಡಿತ
ಹೊರಳಾಡುತಿವೆ ಮುತ್ತು ಆ ಬಿಗಿ ಹಿಡಿತದಲ್ಲಿ
ಚಂದಿರನ ಬೆಳಕಲ್ಲಿ  ರತಿ ಮನ್ಮಥರಾಟವನು
ನೋಡುತ ನಲಿದಾಡುತಿವೆ ಮುತ್ತು ಮೌನದಲ್ಲಿ  

ಹೊಡೆದಾಡುತಿವೆ ಛಲದಿ ಸರದಲ್ಲಿರುವ ಮುತ್ತು
ನಾ ಚಂದ ನೀ ಅಂದ ಈ ಸರಸಮಯದಲ್ಲಿ
ಅರಿವಿಲ್ಲದೆ ಮತ್ತಿನಲಿ ಸರಸವಾಡುತ ಜೋಡಿ  
ಮೈ ಮರೆತು ಉಸಿರೇರಿಸುತ  ಉನ್ಮಾದದಲ್ಲಿ   

ರಸಿಕರಾಟದಲಿ ಚದುರಿ ಹೋದವು ಮುತ್ತು
ನಾ ಮುಂದು ತಾ ಮುಂದು ಮಧುಮಂಚದಲ್ಲಿ
ಮುತ್ತುಗಳ ಸರಮಾಲೇ ಬೀಳಲು ತುಟಿಯಲ್ಲಿ
ದಾರಹರಿದು ಜಾರಿದವು ಮುತ್ತು ಮಂಚದಡಿಯಲ್ಲಿ  

ಸೋಮವಾರ, ಸೆಪ್ಟೆಂಬರ್ 15, 2014

ಡೋಣಿ


ತೀರವನರಿಯದೆ ಹೋಗುವ ಡೋಣಿ 
ನೀರಲಿ ತೇಲುತ ಸಾಗುತಲಿ 
ದೂರವನರಿಯದೆ ದಿಕ್ಕನು ನೋಡಿ 
ಹರಿಗೋಲನು ಹಾಕುತ ಹರುಷದಲಿ

ಉಸಿರಲಿ ಉಸಿರಾಗಿರುವ ಡೋಣಿ 
ಹಸಿವಲಿ  ನೀರನು  ಕುಡಿಸುತಲಿ 
ಬಿಸಿಲಲಿ ಬಳಲಿ ಬೆವರಿಳಿಸಿದರು 
ನಸುಕಲಿ ಜೀವ ತುಂಬತಲಿ 

ಬಲೆಯನು ಬೀಸುತ ಸಾಗಿದೆ ಡೋಣಿ 
ಅಲೆಯನು ಹಿಂದೆ ಸರಿಸುತಲಿ  
ಜಲರಾಸಿಯೊಳಗಿನ ಲೋಕವ ನೋಡಿ 
ಚಲುವಿನ ಮೀನು ಹಿಡಿಯುತಲಿ

ಧೀರನು ಬೇಕು ನಡೆಸಲು ಡೋಣಿ
ಬಿರುಗಾಳಿಯು ತುಂಬಿದ ಇರುಳಿನಲಿ 
ಶೂರನು  ಹೆದರದೆ ಸಾಗುವ ಮುಂದೆ 
ಭರವಸೆ ಬೆಳಕು ಹುಡುಕುತಲಿ 

                 

ಶುಕ್ರವಾರ, ಸೆಪ್ಟೆಂಬರ್ 5, 2014

ಇರುಳ ಸಂಜೆ

ಕಳೆದೆ ಹಲವರ ಜೊತೆ  ಈ ಬಾಳ ಪಯಣದಲಿ  
ಬಳಲಿದರೂ ಮಡದಿ ನಡೆದಳು ಕೊನೆಯವರೆಗೆ
ಹೇಳಲಾರೆ ಏನನ್ನು ಹಣಕ್ಕಾಗಿ ಜೊತೆಇದ್ದವರಿಗೆ    
ಬಾಳದಾರಿಯಲ್ಲಿ  ಇಂದು ಯಾರಿಲ್ಲ ನಾ ಒಂಟಿ 

ವಯಸ್ಸಿನ ಮದದಲ್ಲಿ ನಡೆದಿದ್ದೆ ದಾರಿ 
ಬಯಸಿದ್ದು  ಪಡೆದೆ ಗಳಸಿ ಹೆಣ್ಣು ಹೊನ್ನು 
ಆಯಸ್ಸು ಹೋಯಿತು ಅರಿಯದೆ  ಕ್ಷಣದಲ್ಲಿ 
ಭಯವಾಗುತ್ತಿದೆ ನೆನೆದು ಕೊನೆಯ ಘಳಿಗೆ 

ನಿಲ್ಲಬೇಕಾಗಿದೆ ಉರಿವ ದೀಪದ ಕಂಬದಂತೆ 
ವಲ್ಲೆನಂದರು  ಬೇಕು  ತಂತಿಯ ಆಸರೆ 
ಬಲ್ಲವರ ಬಾಳು ಬರಡು ಹುಣುಸೇಮರದಂತೆ 
ಚಲ್ಲಿದರು ಪ್ರೀತಿ ಉರಗೋಲು ಬೇಕು ಕೊನೆಗೆ  

ನಿಲ್ಲದೀ ಪಯಣ ಮುಂದೆ ಏನೆಂದು ತಿಳಿದಿಲ್ಲ 
ಎಲ್ಲರೂ ಹೇಳುವ ಮುಕ್ತಿ ಸಿಗುವುದೆಂದು 
ಎಲ್ಲ ಪಕ್ಷಿಗಲಿದ್ದರೇನು ಮುಂದೆ ಕಾಗೆಯೇ ಬೇಕು 
ಸಲ್ಲಿಸುವೆ ನಮನ ಇಂದೇ ಮುಂದೆ ಪಿಂಡ ಕಚ್ಚಲು 

ರಹದಾರಿ ಸವಿಸಿ ಬಂದಿಹೆನು ಇಲ್ಲಿ 
ಕಹಳೆ ಊದುವ ವೇಳೆ ಇರುಳ ಸಂಜೆ 
ಬಹಳ ಯೋಚಿಸಿ ವಿದಾಯ ಹೇಳಬೇಕಾಗಿದೆ  
ಸಹಿಸಿ ಬಂದಿಹೆನು ಅರಿತು ಬಾಳ ಸಂಜೆ  

ತಿರುಗಿ ನೋಡಲಾರೆ ನೆಡೆದು ಬಂದದಾರಿ 
ಮರುಗುವೆನು  ಮಾಡಿದ ತಪ್ಪುಗಳಿಗೆಲ್ಲ 
ಹಗುರವಾಗಿದೆ ಮನಸು ಮುಂದೆ ಸಾಗಲು 
ಬೇರೆಗು ಗೊಳಿಸುವ ಲೋಕದ ಕದತಟ್ಟಲು 

ಸೋಮವಾರ, ಸೆಪ್ಟೆಂಬರ್ 1, 2014

ರವಿ

ಬೆಳಕನು ಚಾಚುತ ಇಣುಕುತ ಬಂದೆ 
ಬಾನಂಗಳದ ಅಂಚಿನಲಿ 
ಮುಸುಕೆಳೆದವರ ಹೊಡೆದೆಬ್ಬಿಸಿ  
ಉತ್ಸಾಹ ತುಂಬುತ ಹಗಲಿನಲಿ 

ಚಿಲಿಪಿಲಿ ಗುಟ್ಟುತ ಹಾರಿವೆ ಹಕ್ಕಿ 
ಕನಸನು ಕಟ್ಟುತ ಆಸೆಯಲಿ   
ತೋರಿಸು ದಾರಿ ಬೀರುತ ಬೆಳಕು 
ಹಾರಲಿ ಹಕ್ಕಿಗಳು ಹರುಷದಲಿ 

ಹರಿಯುವ ನದಿ ಪುಳಕಿತಗೊಂಡವು 
ಕಿರಣಗಳ ಕೋಳಾಟ ಆಡುತಲಿ
ಮೌನವ ಮುರಿದು ಪರವಶಗೊಂಡವು 
ಜಲಚರ ವೇಗದಿ ಓಡಾಡುತಲಿ

ಬಣ್ಣವ ಬದಲಿಸಿ ಅಂದದಿ ನಗುತಿವೆ   
ಗಿರಿತುದಿಗಳು ಮನ ಸೆಳೆಯುತಲಿ 
ಏರುತ ಏರುತ ಬೀರುತ ಪ್ರಖರತೆ 
ಓಡಿಸುವೆ ಚಳಿ ಮುಂಜಾವಿನಲಿ 

ಬೇಸರವಿಲ್ಲವೇ  ನಿಲ್ಲದೆ ಓಡುವೆ  
ಸಮಯವ ಸವಿಸುತ ದಿನದಲ್ಲಿ
ನಿಂತರೆ ಎಲ್ಲವ ನಿಲ್ಲಿಸಿಬಿಡುವೆ 

ನೀನಿರುವೆ ಹಸಿರು ಉಸಿರಿನಲಿ  

ಮುಸ್ಸಂಜೆ

ಇಳಿಯುವ ಸೂರ್ಯನಲ್ಲಿ
ಹೊಳೆಯುವ ಬಣ್ಣದಲಿ
ಹಸಿರ ಭುವಿಯ ತುಂಬೆಲ್ಲ
ನಿನ್ನದೇ ಪ್ರೀತಿಯ ರಂಗು

ನೀಲಿ  ಬಾನ ಮೋಡದಲಿ  
ಮೂಡಿದ ಹೊಸ ರೂಪದಲಿ
ಹೊಳೆವ ಕಣ್ಣ ತುಂಬೆಲ್ಲಾ  
ನಿನ್ನದೇ ಪ್ರೀತಿಯ ರಂಗು ..

ಮುಸ್ಸಂಜೆಯ ಹೊತ್ತಿನಲಿ
ಕಡಲ ಕಿನಾರೆಯಲಿ
ಹೊಂಬಾನಿನ ತುಂಬೆಲ್ಲ
ನಿನ್ನದೇ ಪ್ರೀತಿಯ ರಂಗು ....

ರಂಗಿನ ಚೆಲ್ಲಾಟದಲಿ
ಅಲೆಗಳ ನಡುವಿನಲಿ
ಪ್ರತಿಫಲಿಸಿ ಕಡಲ ತುಂಬೆಲ್ಲ
ನಿನ್ನದೇ  ಪ್ರೀತಿಯ ರಂಗು

ಇರುಳ ಸಾಗರದಲ್ಲಿ  
ಹಕ್ಕಿಯಂತೆ ಹಾರುತಲಿ  
ತಂದ ಪತ್ರದ  ತುಂಬೆಲ್ಲ
ನಿನ್ನದೇ ಪ್ರೀತಿಯ ರಂಗು ..
ಉತ್ತರಿಸಲೇ ಪ್ರೀತಿಯಲಿ ಮಿಂದು  

ಭಾನುವಾರ, ಆಗಸ್ಟ್ 24, 2014

ಬೆಳದಿಂಗಳು

ಹೊತ್ತು ಮುಳುಗಿ
ಕತ್ತಲು ಮೂಡುವ ಗಳಿಗೆ
ತುತ್ತು ಉಣಿಸುವಳಮ್ಮ
ಸುತ್ತಲು ನಿನ್ನದೇ ಬೆಳದಿಂಗಳು !!

ಬಿತ್ತು ಮಿನುಗುತಾರೆ 
ಹಿತ್ತಲಿನ  ಗಿಡದ ಮೇಲೆ 
ಎತ್ತಿ ಕೊಡಲು ಬರುವನಮ್ಮ 
ಸುತ್ತಲು ಹರಿಸಿ ಬೆಳದಿಂಗಳು !!

ಎತ್ತ ನೋಡಿದರೇನು 
ಕತ್ತು ಹೊರಳಿಸಿ ನಗುವನು 
ಮುತ್ತು ಮಾಮ ಇವನಮ್ಮ 
ಸುತ್ತಲು ಅವನದೇ ಬೆಳದಿಂಗಳು !!

ಹೆಚ್ಹು ಅಡಿಸುವುದಿಲ್ಲ 
ಬೊಚ್ಚ ಬಾಯಿಯ ತೆರೆದು 
ಕಚ್ಚದೆ ತುತ್ತು ನುಂಗುವೆನಮ್ಮ  
ಮೆಚ್ಚಿನೋಡುತ ನಿನ್ನ ಆ ಕಂಗಳು !!

ಮಂಗಳವಾರ, ಆಗಸ್ಟ್ 19, 2014

ಹಂಗಿನರಮನೆ


ಹಂಗಿನರಮನೆ(ಸಿಟಿ) ಗಿಂತ
ಹಳ್ಳಿಯ ಗಿರಿ ಮನೆ ಸಾಕು 
ಹೃದಯದ ಬಾಗಿಲು ತೆರೆದು 
ಹೊರಗೆ ನೋಡುತಿರಬಹುದು 

ಒಡೆಯ ನಿಲ್ಲದ ಮನೆಗಿಂತ  
ಒಡಲು ತುಂಬಿದ ಪ್ರಕೃತಿ ಸಾಕು
ಓಡುವ ಜೀವನಕೆ ವಿರಾಮವಿಟ್ಟು   
ಒಡನಾಡಿಗಳ ಜೊತೆ ನಲಿಯಬಹುದು 

ಮುಚ್ಚಿದ ನಗರದ ಮನೆ ಬಾಗಿಲಿಗಿಂತ   
ಮನೆಯ ಮುಂದೆ ತೆರೆದಬಾಗಿಲು ಬೇಕು    
ಮುಖ ಮೇಲೆತ್ತಿ ತೆರೆದಬಾಹುಗಳಿಂದ 
ಮುಗಿಲ ತಬ್ಬಿ ಮುದ್ದಾಡಬಹುದು  

ಹುಲ್ಲು ಬೆಳೆಯದ ನಗರ ದಾರಿಗಿಂತ 
ಹಸಿರು ತುಂಬಿದ ಕಾಲುದಾರಿ ಲೇಸು 
ಹಿತವಾದ ಹಳ್ಳಿ ಪರಿಸರದಲಿ  ಬೆರೆತು
ಹೊಸದಾಗಿ ಕನಸು ಕಾಣಬಹುದು 


ಗುರುವಾರ, ಆಗಸ್ಟ್ 7, 2014

ಸಂಜೆಯಲಿ

ಅಂದದ ಮಳೆಯ ಬರುತಿದೆ 
ಚಂದದ ಒಂದು ಸಂಜೆಯಲಿ
ಮಿಂಚು ಗುಡುಗು ಸಿಡಿಲು 
ಬಂತು ರಾಜನಂತೆ ಗರ್ಜಿಸುತಲಿ

ಬಂಗಾರದ ಬೆಳಕು ಚಲ್ಲಿ 
ಹೊಂಬಣ್ಣ ತುಂಬಿದೆ ಇರುಳಲ್ಲಿ  
ಮಿಂಚು ಚಿತ್ತಾರ ಮೂಡಿಸಿ 
ಹೊಂಚು ಹಾಕಿದೆ ಆಗಸದಲ್ಲಿ  

ತೆಂಗಿನ ಗರಿಗಳ ಕಲರವದಿ   
ತಂಗಾಳಿ ಇಂಪು ತುಂಬುತಲಿ 
ತುಂತುರು ಮುತ್ತಿನ ಮಳೆಹನಿಯ 
ತಂಪು ಮುತ್ತಿಕ್ಕುತಿದೆ ಭುವಿಯಲ್ಲಿ 

ನಲ್ಲೆಯ ಸನಿಹ ಬಯಸುತಿದೆ 
ಈ ಮೋಹ ತುಂಬಿದ  ಇರುಳಲ್ಲಿ
ಕೊರೆವೆ ಹೊಸ ಪ್ರೀತಿಯ ಕವನ 
ಅವಳಿಗಾಗಿ ನನ್ನ ಹೃದಯದಲ್ಲಿ 

ಬುಧವಾರ, ಆಗಸ್ಟ್ 6, 2014

ಸೊಳ್ಳೆ

ಸೊಳ್ಳೆ  ನೀ ಎಲ್ಲಿಅಂದರೆ ಅಲ್ಲೇ ..
ನೀ ಸೊಳ್ಳೆ  ನಿನ್ನ ಸೂಜಿ ನಾ ಬಲ್ಲೆ !!

ಗುಯ್  ಗುಯ್  ಗುಟ್ಟಿ ಹಾರೋ ನೀನು 
ಸುಯ್ ಸುಯ್  ರಾಗ ಹಾಡೋ  ನೀನು 
ತಟ್ಟಿಸಿ ಚಪ್ಪಾಳೆ  ನೋಡಿ ನಗುವೇ ಏನೋ 
ಕಾಟಕ್ಕೆ ಸೋತು ಹೋಗಿರುವೆ ನಾನು 

ತೆರೆದ ನೀರಲಿ ಹುಟ್ಟಿ ಬರುವೆ ನೀನು 
ವಾರದೊಳಗೆ ಮತ್ತೆ ಮೊಟ್ಟೆ ಇಡುವೆ  
ಹರಡುವೆ ಡೆಂಗು ಚಿಕನ್ಗುನ್ಯ ಮಲೇರಿಯ 
ಕರೆಯದೆ ಬರುವ ಮನೆಯ ಅತಿಥಿ ನೀನು  

ಸೊಳ್ಳೆ ಬತ್ತಿ ಹಚ್ಚಿದೆ  ನಾನು 
ತಾಳಿಕೊಂಡು  ಮತ್ತೆ ಬಂದೆ ನೀನು 
ಕುಳಿತು ಕಚ್ಚಿದೆ ಕೈ ಸಿಕ್ಕಿತೆ ಜೇನು 
ಎಳೆದೆ ರಕ್ತ ಪೀಪಾಸು ನೀನು .. ಸೊಳ್ಳೆ 

ಸೊಳ್ಳೆ ಪರೆದೆ ಕಟ್ಟಿದೆ  ನಾನು 
ಕಳ್ಳ ದಾರಿಯಲಿ ಒಳ ಬಂದೆ ನೀನು 
ಆಲ್ ಔಟ್ ಹಚ್ಚಿ ಮಲಗಿದೆ ನಾನು 
ಸೋಲ್ ಒಪ್ಪದೇ ಬಂದು ಕಚ್ಚಿದೆ ನೀನು 

ಬ್ಯಾಟ್ ಹಿಡಿದು ಹೊಡೆದೆ ನಾನು 
ಶಾಟ್ ಸೂಪರ್ ಎಂದು ಓಡಿದೆ ನೀನು 
ಸಂಬ್ರಾಣಿ ಹೋಗೆ ಹಾಕಿದೆ ನಾನು 
ಟಾಂ ಟಾಂ ಹೊಡೆದು ಹೋದೆ ನೀನು 
ಕಟ್ಟ ಕಡೆಗೆ ಸೊಳ್ಳೆ ಕಾಗದ ಹಚ್ಚಿ ನಾನು  
ಬಿಟ್ಟು ಓಡಿ ಹೋದೆ ಅ ವಾಸನೆಗೆ ನಾನೇ! 
ಎಂಟೆದೆಯ ಗಟ್ಟಿ ಬಂಟನಾದರು ಏನು 
ಪಂಟ ಸೊಳ್ಳ ನಿನಗೆ ಸೋತೆ ನಾನು !

ಶುಕ್ರವಾರ, ಜುಲೈ 11, 2014

ನಿನ್ನೊಲುಮೆ

ನಿನ್ನೊಲುಮೆ ಉಸಿರಾಗಿ
ಹಸಿರಾಗಿ  ಬಂದಂತೆ
ಬಂದು ಬಿಡು ನೀ
ಮುಂಜಾನೆಯ ಇಬ್ಬನಿಯಂತೆ  

ತೀರ ಬೇರೆಯಾದರೂ ನದಿ ಒಂದೇ ಎಂಬಂತೆ  
ದೂರ ವಿದ್ದರು ಮನಸು ಪ್ರೀತಿಗೆ ತುಡಿವಂತೆ
ನೀ ನೋಲಿದು ಬಾ ಜೊತೆಗೆ ಜೀವ ಜಲದಂತೆ

ಹಗಲು ಇರಿಳು ಸರಿದರೂ ಸೂರ್ಯನೇ ಬರುವಂತೆ
ಬಾನು ಬೇರೆಯಾದರೂ ಚಂದಿರನು ಒಬ್ಬನಂತೆ
ನೀ ನಗುತ ಬಾ ತುಂಬಿದ ಹುಣ್ಣಿಮೆ ಬೆಳಕಂತೆ  

ದೇಹ ಬದಲಾದರು ಹೃದಯಗಳು ಸೇರಿ ಮಿಡಿವಂತೆ
ಭಾವ ಬೇರೆಯಾದರೂ  ಭಾವನೆಗಳು ಬೆರೆತಂತೆ  
ಬೇರೆಯೋಣ ಬಾ ಪ್ರೀತಿಸಾಗರದಲಿ ನದಿ ಸೇರಿದಂತೆ

ಸೋಮವಾರ, ಜೂನ್ 23, 2014

ನೀಲಾಂಬರಿ

ಅಂಬರದಿಂದ ಇಳಿದು ಬಂದಿರುವ 
--ನೀಲಾಂಬರಿ ನೀನೆ ನಾ
ಚುಂಬಕ ಮೋಹಕ ಕಣ್ಣುಗಳರಳಿಸಿ 
-- ನೋಡುತಿರುವೆ ನೀ ಏನನ್ನ 

ಬೊಂಬೆಯ ತರದಿ ತಿಡಿದ ಮುಖವಿದು  
-- ಬೊಮ್ಮನ ಸೃಷ್ಟಿಯು ನೀನೆ ನಾ 
ಇಂಬು ಕೂಡುವಂತ ನಿನ್ನಯ ರೂಪಕೆ 
-ಮನಸೋತು ಕೊಡಲಿ ನಾ ಏನನ್ನ 

ಕೊಂಬೆಯು ನಗುತಿದೆ ಸುಂದರಿ ಸ್ಪರ್ಶಕೆ 
 ---ನಗುವಲ್ಲಿಯ ಮದಿರೆ ನೀನೆ ನಾ  
ರಂಭೆಯ  ಹೋಲುವ ನಿನ್ನಯ ಅಂದಕೆ 
-- ತೊಡಿಸಲೇ ಬಂಗಾರದ ಸರವನ್ನ 

ದುಂಬಿಯು ಹಾಡುತ ಹತ್ತಿರ ಬರುತಿದೆ 
-- ಜೇನಿನ ಹನಿಯು ನೀನೆ ನಾ 
ಬಿಂಬವು ಮೂಡಲು ನನ್ನಯ  ಮನಸಲಿ 
--ಗೀಚಿದೆ  ಕವನದ ಸಾಲೊಂದನ್ನ  

ಸೋಮವಾರ, ಜೂನ್ 16, 2014

ಕಾಯುತಿರುವೆ

ಕಣ್ಣಲಿ ಕಣ್ಣು ಸೇರಿಸಿ  ನೋಡಿರುವೆ  ಸೊಗಸಾಗಿ
ಮನಸು ಮನಸಲಿ ಇಳಿದು ಕುಲಿತುರುವೆ ಹಾಯಾಗಿ
ಹಸಿವಿಲ್ಲದೆ ನಿದಿರೆ ಇಲ್ಲದೆ ನಿನಗಾಗಿ  ಕಾಯುತಿರುವೆ

ಉಸಿರು ಉಸಿರಲಿ  ಬೆರೆತು ನಗುತಲಿವೆ ನವಿರಾಗಿ
ಹೃದಯದಿ ಹ್ರದಯ ಅವಿತು ನುಡಿಯುತಿವೆ ಜೊತೆಯಾಗಿ  
ನನ್ನಲಿಯ ಉಸಿರಲ್ಲಿಯು ನಿನಗಾಗಿ ಕಾಯುತಿರುವೆ

ಕನಸಲಿ ಕನಸು ಬೆರೆತು ಸಾಗುತಿವೆ ಹಿತವಾಗಿ
ಬೆರಳಲಿ ಬೆರೆಳು ಕಲೆತು ಆಡುತಿವೆ ನಯವಾಗಿ
ಕನಸಲ್ಲಿಯು ನನಸಲ್ಲಿಯು ನಿನಗಾಗಿ ಕಾಯುತಿರುವ

ತುಟಿಯಲಿ ತುಟಿಯ ಸೇರಿಸಿ ಗುಣುಗುತಿರು ಹಾಡಾಗಿ
ಕಿವಿಯಲಿ ಪ್ರೀತಿಯ ಗುಟ್ಟನು ಹೇಳಿಬಿಡು  ನನಗಾಗಿ
ಆ ಪ್ರೀತಿಯ ಸವಿ ಮಾತಿಗೆ ನಿನಗಾಗಿ ಕಾಯುತಿರುವೆ

ಭಾನುವಾರ, ಜೂನ್ 15, 2014

ಪುಟ್ಟ ಮಗುವೆ

ಪುಟ್ಟ ಮಗುವೆ ಪುಟ್ಟ ಮಗುವೆ 
ಹೀಗೆ  ದೂರ ಓದುವುದು ಸರಿಯೇ 
ನಗುತ ನಗುತ ಬಾರೆ ಮಗುವೆ 
ಹಿಡಿಯಲು ಸೋತು ಹೋಗಿರುವೆ  

ಒಂದು ತುತ್ತಿಗೆ ಒಂದು ಮುತ್ತು 
ಕೊಡುವೆ ಬಾ ನನ್ನ ಮುತ್ತು  
ಕಾಡಿಸದಿರು ಹೆಚ್ಹು ಹೋತ್ತು 
ಓಡಿಬಾ  ಪುಟ್ಟ ಹೆಜ್ಜೆ ಇಟ್ಟು 

ಚಂದ ಮಾಮ ನಗುತ ಬಂದು 
ತುತ್ತು ಕಸಿದು ಹೋಗುವ ಇಂದು  
ಬೇಗ ಉಟ  ಮಾಡು ಬಂದು 
ಅವನ  ಕೈ ಹಿಡಿದು ಬಿಡುವ ಇಂದು   

ತಲೆಯ ಮೇಲೆ ಕೂಡಿಸಿಕೊಂಡು 
ತೋರಿಸುವೆ ಗುಬ್ಬಿ ಪಕ್ಷಿ ಹಿಂಡು 
ಹಾಡುವುದು ಪುಟ್ಟ ಗಿಳಿಯು ಬಂದು 
ಮಲಗು ಉಟ ಮುಗಿಸಿ ಕೊಂಡು 

ಶುಕ್ರವಾರ, ಏಪ್ರಿಲ್ 11, 2014

ಮಧುರ ನೆನಪು

ಎದುರಿಗೆ ಇರದೇ ಹೋದರೂ 
ಮಧುರ ನೆನಪು ಕಾದಿತೂ 

ವಜ್ರದಂತೆ ಹೊಳೆವ ಕಣ್ಣು
ಛಿದ್ರಗೊಳಿಸುವೆ ಬೇಸವವನ್ನು
ಕಂಡು ವಿವಿದ ನೋಟವನ್ನು
ಉಲ್ಲಾಸ ತುಂಬಿದೇ ಮನಸಿಗಿನ್ನು 
 
ಬಳ್ಳಿಯಂತೆ ಬಳುಕುವೆ ನೀನು
ನಾಟ್ಯ  ಹೇಳಿ ಕೊಡುವೆ ಏನೋ 
ಕೈ ಬೆರಳುಗಳ ಸೇರಿಸಿ ನೀನು  
ಹಸ್ತ ಮುದ್ರಾ ಪ್ರದರ್ಶನವೇನೋ 
 
ಒಂದು ಕೆನ್ನೆಗೆ ಎರೆದು ಮುತ್ತು 
ಕೊಟ್ಟಾಗ ಕ್ಷಣ ಏರಿತು ಮತ್ತು 
ಹೀಗೊಂದು ಹಗಲ ಕನಸ ಬಿತ್ತು 
ಎದ್ದಾಗ ಪಕ್ಕದಲ್ಲಿ ನಿನ್ನ ಚಿತ್ರವಿತ್ತು 

ಶನಿವಾರ, ಮಾರ್ಚ್ 29, 2014

ಕಾಯುವೆ

ಉಲ್ಲಾಸ ಗೊಂಡಿತ್ತು ಮನಸು ನಿನ್ನೊಲುಮೆಯಿಂದ 
ಘಾಸಿ ಗೊಳಿಸಿದೆ ನೀನು ಅತಿ ಸಲುಗೆಯಿಂದ 

ನಿನ್ನೊಲವ ಬಯಸಿ ಮಾತಾಡಿದೆ ಮಧುರ ಕನಸಿನಿಂದ 
ಕನಸು ಮುರಿದು ಹೃದಯ ಚೂರಾಯಿತು ನಿನ್ನಿಂದ 

ಮನಸು ಕೊರಗುತಿದೆ ಹಿತವಾದ ನಿನ್ನ ನೆನಪಿಂದ 
ಪಥ್ಯವಾಗದ  ಸತ್ಯ ನೀ ತಿಳಿ  ಒಳಗಣ್ಣಿನಿಂದ 

ಅರಿತು ಬರುವೆ ನನ್ನಲಿ  ನೀನು ಮಾಡಿದ ತಪ್ಪಿನಿಂದ 
ಬರುವುದೆಲ್ಲ ಬರಲಿ ಕಾಯುವೆ ನಿನಗಾಗಿ ಪ್ರೀತಿಯಿಂದ 

ಸುಕೃತಿ

ಯಾವ ಲೋಕದ ಚಲುವೆ ನೀನು 
ಕಣ್ಣ ನೋಟದಲ್ಲೇ ಕೊಲ್ಲುವೇ  
ಸ್ವರ್ಗ ರಾಜನ ಮಗಳೇ ನೀನು 
ಚಿನ್ನ ಮಾತಿನಲ್ಲೇ ಗೆಲ್ಲುವೆ 

ಹೊಳೆಯುವ ಕಂಗಳಿಗೆ ಹರಣಿ ಎಂದು ಹೆಸರಿಡಲೇ  
ಅಳುಕದೆ ಬಳುಕುವೆ  ಜಾನ್ಹವಿ  ಎನ್ನಲೇ 
ತಿಳಿ ಗಗನ ನಿನಗೆ ಅಭಿಜ್ಞ ಎಂದು ಕರೆಯಲೇ 
ಬಿಳಿದಾದ  ತಾವರೆ ಮುಖದವಳೇ !

ಸುಪ್ರಮತಿ ನಿನಗೆ  ಪ್ರಮಿತ ಎಂದು ಹೆಸರಿಡಲೇ 
ಸುಪ್ರೇಮ ಕೊಡುವ ನಿನಗೆ ಸುಪ್ರೀತ ಎನ್ನಲೇ 
ಅಪ್ರತಿಮ ಸುಂದರಿ ಪ್ರಣೀತ ಎಂದು ಕರೆಯಲೇ 
ಅಪ್ರಮೇಯನ ಹೋಲುವ ಮುಖದವಳೇ!

ವಾಯುದೇವನ ರಾಣಿ ಭಾರತಿ ಎಂದು ಹೆಸರಿದಲೇ 
ಲಯ ಕಾರಕನ  ರಾಣಿ ಗೌರಿ ನೀ  ಎನ್ನಲೇ 
ಕಾಯುವ ಗುಣಕ್ಕೆ ಗುಣನಿಧಿ ಎಂದು ಕರೆಯಲೇ
ಛಾಯೇ ಚಂದ್ರನ ಕಾಂತಿ ಇರುವವಳೇ!

ಚಂದ್ರನ  ಮುಖಕೆ  ಚಂದ್ರಿಕಾ ಎಂದು ಹೆಸರಿಡಲೇ 
ಇಂದ್ರನ ಲೋಕದ ನಿನಗೆ ಪಾರಿಜಾತ ಎನ್ನಲೇ 
ಕೃತ್ತಿ  ವಾಸನ ರಾಣಿ ಸುಕೃತಿ ಎಂದು ಕರೆಯಲೇ 
ಚಕ್ರ ಧರನ  ಎದೆಯಲಿ ಇರುವವಳೇ !

ಶುಕ್ರವಾರ, ಫೆಬ್ರವರಿ 28, 2014

ತಂಗಾಳಿ

ತಂಗಾಳಿ ಬೀಸುತಿದೆ ನಿನ್ನ ನೆನಪು ಕಾಡುತಿದೆ    
ಮುದ್ದು ಮಾಡುವ ಬಾ  ಓ ನನ್ನ ನಲ್ಲೆ 
ಕಾಯುವೆ ನಿನಗಾಗಿ ಈ ನದಿ ಅಂಚಿನಲ್ಲೆ  

ಹಾರಿ ಬಾ ಹಕ್ಕಿಯಂತೆ ರೆಕ್ಕೆ ಕಟ್ಟಿ ನಾ ಇರುವಲ್ಲಿಗೆ  
ಕೂಡುವ ಜೊತೆಯಾಗಿ ಬಾ ಓ ನನ್ನ ನಲ್ಲೆ 
ಸಹಿಹಕ್ಕೆ ಹಾತೊರೆದು ಕೊತಿರುವೆ ಇಲ್ಲೇ 

ಆಕಾಶ ತುಂಬಾ ನಕ್ಷತ್ರಗಳು   ಪೂರ್ಣ ಚಂದಿರನು 
ಕದ್ದು ನಮ್ಮ ನೋಡುವರು ಬಾ ಓ  ನನ್ನ ನಲ್ಲೆ 
ಕದ್ದು ಮುದ್ದುಸಿ ಅವರ ಕಾಡಿಸುವುದು ನಾ ಬಲ್ಲೆ 

ತೋಟದಲ್ಲಿರುವ  ಗುಲಾಬಿ ನಗುತಿದೆ ನನ್ನ ನೋಡಿ    
ಬೇಗ ಬಳ್ಳಿಯಂತೆ ಬಳಕುತ ಬಾ ಓ  ನನ್ನ ನಲ್ಲೆ 
ಗುಲಾಬಿ ಮುಡಿಯಲ್ಲಿ ಇಟ್ಟು ನಿನ್ನ ವರಿಸುವೆ ಇಲ್ಲೇ   

ಗುರುವಾರ, ಫೆಬ್ರವರಿ 20, 2014

ಬಡಿತ

ಏನ್ ಹೇಳಲಿ ಪ್ರಿಯೆ ನೀನು ಇರುವೆ ಅಸ್ಟು ದೂರ 
ಹೃದಯದ ಬಡಿತ ಬೆರೆತಿದೆ ಅದ ನೋಡು ಬಾರಾ 

ನಿನ್ನ ಜೊತೆ ಇರುವಾಸೆ ಉರು ಸುತ್ತುವ ಆಸೆ
ಹೊಸ ಬಟ್ಟೆ ಗಳ ಕೊಡಿಸಿ ಹಾಕಿ ನೋಡುವ ಅಸೆ
ಬಂದರೆ ಸುಮ್ಮ್ಮನೆ ಬಿಡುವರೇ  ನಿಮ್ಮ  ಅಮ್ಮ
ಹೊರ ಹಾಕುವರು ಹಿಡಿದು ಕೊಟ್ಟು ಒಂದು ಗುಮ್ಮ 

ಸಂಜೆ ಸಮುದ್ರದ ದಡದಿ ಕೈ ಹಿಡಿದು ನಡೆವಾಗ , 
ಏರುವ ಅಲೆ ಬಂದು ನಿನ್ನ ಕಾಲು ಚುಂಬಿಸಿದಾಗ, 
ಹೊಡಿಯ ಹೋದೆ ಹುಡುಕಿ ಅದನ್ನು ಬರೆ ಕೈ ಇಂದ 
ಓಡಿ  ಹೋಯಿತು  ನನ್ನ ಕೆಣಕಿ ಒಂದು ಕಡೆಯಿಂದ !.

 ಕನಸು ಕಾಣುವುದೇನು ಇಂದು ಮೊನ್ನೆಯದಲ್ಲ,
 ನನಸು ಆಗುವುದು ಕೂಡ ನಮ್ಮ ಕೈಯಲಿ ಇಲ್ಲ, 
 ಬೇಡಿಕೊಳ್ಳುವ ಬಾ ದಿವಸ ನಾವು ಜೊತೆಯಾಗಿ, 
 ಹರಸಿದರೆ ನಡೆಸುವ ಸಹಜ ಜೀವನ ಹಿತವಾಗಿ .

ಮುಂಗುರುಳು

ಮುಂಗುರುಳು  ಹಾರುತಿವೆ ನಿನ್ನ ಕಂಗಳ ನೋಡಿ 
ಚಂಗನೆ ಹಾರುತಿದೆ ಹೃದಯ ನಿನ್ನ ಮುಂಗುರುಳು  ಕಾಡಿ  

ತಿಲಿಹಾಲಿನಂತೆ ಸೊಬಗ ಸುರಿಸುತಿಹೆ ನೀನು 
ಆ ಜೀನಿನಂತೆ ಸಿಹಿಯ  ಹೀರಲು ಬರುವೆ ನಾನು 

ಮುಗುಳ್ನಗೆ ತುಂಬಿದ ನಿಶ್ಚಲ ಸಮುದ್ರ ನೀನು 
ಚಂಚಲ ಮನಸಿನ ಸಾಗರದ ಅಲೆಗಳಂತೆ ನಾನು 

ಮಧುರ ತಂಗಾಳಿ ಬೀಸುತಿದೆ ವರುಣನ ಮಗಳೇ ನೀನು 
ಅದರ ತಂಪಿನಲಿ ಮಿಂದು ಸೇರಬಯಸುವೆ ನಿನ್ನಲ್ಲಿ ನಾನು 

ಶುಕ್ರವಾರ, ಜನವರಿ 31, 2014

ಅಳದಿರು ಕಂದಮ್ಮ

ಅಳದಿರು ಕಂದಮ್ಮ ಚಂದ ಮಾಮ ನಗುತಿಹನು 
ಬೆಳದಿಂಗಳ ತಂಪಿನಲಿ ನಿದ್ದೆಮಾಡು .
-ಮಗುವೆ ನಿದ್ದೆಮಾಡು 

ಚಲಿಗಾಲ ಬರುತಿಹುದು ಬೆಚ್ಚಗೆ ಹೊದಿಸುವೆನು 
ಹಳೇ ಜೋಗುಳ ಹಾಡುವೆನು ನಿದ್ದೆಮಾಡು 

ಬೆಳ್ಳಗಿನ ಮುಖ ನೋಡಿ  ಕಣ್ಣು  ಬಿಟ್ಟಿಹರೆನೋ 
ಇಳೆ ತೆಗೆದು ಮಲಗಿಸುವೆ ನಿದ್ದೆಮಾಡು 

ಇಳಿ ರಾತ್ರಿಯ ಗುಮ್ಮ ಹೆದರಿಸಲು ಬಂದಿಹನು 
ಕೊಳ್ಳಿ ಹಿಡಿದು  ಓಡಿಸುವೆ ನಿದ್ದೆಮಾಡು 

ಕಳ್ಳಾಟವ  ಆಡದಿರು ಮಳ್ಳಿ ಎಂಬುದ ಬಲ್ಲೆ 
ಚಳ್ಳೆ ಹಣ್ಣು ತಿನ್ನಿಸದೆ  ನಿದ್ದೆಮಾಡು 
- ಮುದ್ದು ನಿದ್ದೆಮಾಡು