ಬುಧವಾರ, ನವೆಂಬರ್ 4, 2015

ಕಣ್ಣಲ್ಲೇನೋ

ಹಸಿರ ಕಣ್ಣಲ್ಲೇನೋ ಹೊಸ ಸೆಳೆತವಿದೆ
ಉಸಿರು ಉಸಿರಿನಲ್ಲಿ ಹೊಸ ಹುಮ್ಮಸಿದೆ   
 
ಹೊಳಪು ತುಂಬಿದ ಮುಖ ಪೂರ್ಣ ಚಂದ್ರನಂತಿದೆ 
ಎಳೆಯ ಮುಂಗುರುಳು ಸೋಕಿ  ಅಲೆಗಳು ಎದ್ದಿವೆ   
ಹಳೆಯ ಕನಸು ಹೊತ್ತು ಕಪ್ಪು ಮೋಡ ಬಂದಿತೇ 
ಹೊಸ ಪ್ರೀತಿಗೆ ನವಿರಾದ ತಂಪು ಗಾಳಿ ಬೀಸಿದೆ 

ಮಧುರ ಮಾತು ಆಡಿದಂತೆ ಹನಿಯು ಉದುರಿತೆ 
ಮನಸು ಮಳೆಯಲ್ಲಿ ಮಿಂದು ಇಬ್ಬನಿ ಹಗುರವಾಗಿದೆ 
ನಲಿವ ನಿನ್ನ ಕಂಡು ಭುವಿಯು ತೊಯ್ದು ಹೋಯಿತೆ 
ಹೆಜ್ಜೆ ಗುರುತು ಹಿಂಬಾಲಿಸಿ ಬೀಜ ಮೊಳಕೆ ಒಡೆಯಿತೆ  

ಮೊದಲ ವಸುಗೆಗೆ ಮೈ ಅರಳಿದಂತೆ ಕುಸುಮ ಅರಳಿತೆ 
ಮಕರಂದ  ಹೀರಲು ಬಂದ ಚಿಟ್ಟೆ ದುಂಬಿ ಬಣ್ಣ ತುಂಬಿವೆ 
ಬಸಿರು ತುಂಬಿ ಭುವಿಯ ತುಂಬಾ ಕಾಯಿ ಪೀಚು ಸುರಿದಿವೆ 
ರಸಮಯ ಹಣ್ಣು ತುಟಿಗೆ ಹೊಸ ರುಚಿಯ ಹರುಷ ತಂದಿದೆ  
 
ಪ್ರೀತಿ ಉಕ್ಕಿ ಕೆರೆ, ತೊರೆ, ನದಿಯು ಮೈ ತುಂಬಿ ಹರಿದಿವೆ 
ಮೋಹ ತುಂಬಿದ ಮಿಲನದಂತೆ ನದಿಗಳು ಸಾಗರ ಸೇರಿವೆ 
ಸಾಗರದ ಅಂಚಿನಲ್ಲಿ ಹೊಳೆವ ಪುಟ್ಟ ಚಂದ್ರ ಉದಯಿಸುತಿದೆ 
ಮಧು ಚಂದ್ರದಇರುಳಿನಲಿ ಮತ್ತೆ  ಅಲೆಗಳು ಮೇಲೇಳುತಿವೆ

ಮಂಗಳವಾರ, ಆಗಸ್ಟ್ 11, 2015

** ದೇಶ ಪ್ರೇಮಿಗಳಿವರು**


ಹಗಲಿರಿಳು  ಛಳಿ ಮಳೆ ಬಿಸಿಲಿನಲೂ 
ಹದ್ದಿನ ಕಣ್ಣಿಟ್ಟು ನಮ್ಮ ಕಾಯುವ ಸೈನಿಕರಿಹರು 
ಹುಟ್ಟಡಗಿಸಿ ಹೊಡೆದು ಉರುಳಿಸುವರು 
ಹೇಡಿಗಳ ಹೆಡೆಮುರಿ ಕಟ್ಟುವ ಧೀರ ಮನುಷ್ಯರಿವರು 

ಹರಿದು ತಂತಿಯ ನುಸುಳಿ ಬರುವ 
ಹೇಯ ಕೃತ್ಯವ ಹೆಣೆವ ಹೇಡಿ ಉಗ್ರರಿಹರು 
ಹಸಿರಾದ ಹುಲ್ಲಿನ ಅ ಬದಿಯಲ್ಲಿ ಅಡಗಿ 
ಹರಿಸಿ  ನೆತ್ತರ ಹೀರುವ  ಕ್ರೂರ ಮೃಗಗಳವರು 

ಪ್ರತಿದಾಳಿ ನಡಿಸಿ ಈ ಬದಿಯಿಂದ ಓಡಿಸಿ    
ಪ್ರೀತಿ  ತಾಯಿಯ ಮಾನ ರಕ್ಷಿಸುವವರಿವರು 
ಪ್ರಾಣ ತೆರುವರು ಕೆಚ್ಚದೆಯ ಒಡ್ಡಿ 
ಪ್ರತೀಕ್ಷಣದಲ್ಲಿ ಗಡಿಕಾಯುವ ದೇಶ ಪ್ರೇಮಿಗಳಿವರು !!!

ಗುರುವಾರ, ಜುಲೈ 16, 2015

***ಕಾಡುಕೆಡಿಸೋ ಮೊದಲು ***


ಒಣಗಿ ಹೋದ ಮರವು ಹಳೆಯ 
ಕಥೆಯ ಹೇಳಲು ಬಯಸಿದೆ  
ಕಮರಿ ಹೋದ ಆಸೆ ವ್ಯೆಥೆಯ 
ಕೇಳಲು ಯಾರಾದರು  ಬರುವರೆ?

ಹಸಿರ ತುಂಬಿ ಉಸಿರ ಕೊಡುವ  
ಹರುಷವು  ಮರೆತುಹೋಗಿದೆ 
ಹಣ್ಣು ಹೂಗೆ ದುಂಬಿ ಬಣ್ಣ ತುಂಬಿ 
ಹಕ್ಕಿ ಚಿಟ್ಟೆ ಇಲ್ಲದೆ ಬರಡಾಗಿದೆ 

ನೀರು ಇಲ್ಲದೆ ಬೆಳೆಯಲಾರೆವು 
ಎಂಬ ಸತ್ಯವು ನಮಗೆ ಅರಿವಿದೆ 
ನೀರು ನಿಲ್ಲಿಸಿ ಕತ್ತ  ಕೊಯ್ದರು 
ಕಣ್ಣೇರು  ಹಿನ್ನಿರಲಿ ಬೆರೆತಿದೆ 

ಅರ್ಧ ಸಾಯಿಸಿ ಹಿಂಸಿಸಿಹರು 
ಜೀವ ನಲುಗಿದೆ ಸಾಯಲಾರದೆ
ದೋಣಿಯಲ್ಲಿ  ತೇಲುವ ಜನ 
ದಾರಿಗಡ್ಡ  ಎಂದು ತೆಗಳುತಲೇ  !!

ಎಂದು ಏನೋ ಮುಕ್ತಿ ನಮಗೆ 
ಒಂದೂ ಕ್ಷಣ  ತಿಳಿಯದಾಗಿದೆ 
ಮುಂದೆ ಕಾಡುಕೆಡಿಸೋ ಮೊದಲು 
ಮುಂದಾಲೋಚನೆ ಬೇಕಾಗಿದೆ 

ಬುಧವಾರ, ಜುಲೈ 1, 2015

ಉಸಿರು ಉಸಿರಲ್ಲಿ

ಎಲ್ಲಿರುವೆ ನನ್ನ ಚಲುವೆ 
ಹೇಗಿರುವೆ ಓ ಒಲವೆ 

ಕಣ್ಣು ಕಣ್ಣಲ್ಲಿ ಸೇರಿಸಿ ನಕ್ಕು 
ಕಣ್ಣು ಹೊಡೆದು ನನ್ನ ಸೆಳೆದೆ 
ಕಣ್ಣು ಕುರುಡಾಗುವ ಮುಂಚೆ 
ಕಣ್ಣ ಎದುರಿಗೆ  ನೀ ಬಾ ಚಲುವೆ 

ನಿನ್ನ ನೋಡಲು ಕಣ್ಣು ದಿನವು ಕಾಯುತಿದೆ 
ಕಣ್ಣಲ್ಲಿ  ನಿನ್ನಬಿಂಬ ಮೂಡಿಸು ಓ ಒಲವೆ 

 
ಉಸಿರು ಉಸಿರಲ್ಲಿ ನೀನಿರುವೆ 
ಉಸಿರು ಏರಿಸುತ ನೀ ನಡೆದೆ 
ಉಸಿರು ಕೊನೆಯಾಗುವ ಮುಂಚೆ 
ಉಸಿರಲ್ಲಿ ಉಸಿರಾಗು ಬಾ ಚಲುವೆ 

ನೀ ಇಲ್ಲದೆ ಉಸಿರು ನಿಂತ ನೀರಾಗಿದೆ 
ಉಸಿರ ನೀಡಿ ಪ್ರೀತಿಸು  ಓ ಒಲವೆ 

ಹೃದಯ ಹೃದಯದಲ್ಲಿ ಸೇರಿಸುತ  
ಹೃದಯ ನೋವನ್ನೇ ಮರಿಸಿಬಿಡು 
ಹೃದಯ ಬಡಿತ ನಿಲ್ಲುವ ಮುಂಚೆ 
ಹೃದಯ ತುಂಬಿತ ಬಾ ಚಲುವೆ 

ನೀ ಇಲ್ಲದೆ ಹೃದಯ ತುಂಬಾ ಬರಿದಾಗಿದೆ 
ಹೃದಯ ಆವರಿಸಿ ಬದುಕಿಸು  ಓ ಒಲವೆ 

ಕನಸು ಕನಸಲ್ಲಿ ಬರುತಿರುವೆ 
ಕನಸು ಕಟ್ಟಿ ನಾ ಕುಳಿತಿರುವೆ 
ಕನಸು ಸರಿದು ಜಾರುವ ಮುಂಚೆ 
ಕನಸು ನನಸಾಗಿಸು ಓ ಚಲುವೆ 

ನೀ  ಇಲ್ಲದಾ ಕನಸು ಎಂದೂ ಬೇಡವಾಗಿದೆ 
ಕನಸಲ್ಲೂ ನನಸಲ್ಲು ಜೊತೆ ಬಾ ಒಲವೆ 

ಭಾನುವಾರ, ಜೂನ್ 21, 2015

ಜಾಗೃತ

ಪ್ರೇಮ ಪತ್ರವ ಬರೆದು ಹಾಳೆಯಲಿ ಸುತ್ತಿ 
ಪುಸ್ತಕದ ಮಧ್ಯಇಟ್ಟು ಗೊತ್ತಿರದಂತೆ ಮಾಡಿ 
ಮಸ್ತಕದಲಿ ನಿಜಪ್ರೀತಿ ತುಂಬಿಕೊಡಿದ್ದಾಗ 
ಮೈ ಕೈ ನಡುಗುವುದೇಕೆ? 

ಅವಳ ನೋಡಲು ಹಗಲಿರಿಳು ಊರೂರುಸುತ್ತಿ 
ಹೊಳೆವ ಕೆಂಗುಲಾಬಿಯ ಗುಚ್ಚವನು ಮಾಡಿ  
ಪ್ರೀತಿ ನಿವೇದನೆಗೆ ಮಂಡಿಯೂರಿ ಕುಳಿತಾಗ 
ಹೃದಯ ಬಡಿತ ಹೆಚ್ಚಾಗುವುದೇಕೆ?

ಪ್ರೀತಿ ಪ್ರೇಮವೆಂದು ಹೂದೋಟಗಳ ಸುತ್ತಿ 
ದಿನ ದಿನವೂ ಗಂಟೆಗಟ್ಟಲೆ ಹರಟೆಯ ಮಾಡಿ 
ಮುದ್ದುಗರೆಯಲು ಪ್ರೇಯಸಿ ಜೊತೆ ಇದ್ದಾಗ 
ಕಣ್ಣು ಮುಚ್ಚುವುದೇಕೆ?
ಒಳ ಮನಸು ಹೃದಯ ಕಣ್ಣ ಜಾಗೃತ 
ಗೊಳಿಸಿ ಸಂಭ್ರಮಿಸಲು ಸಾಕೆ !!

ಶುಕ್ರವಾರ, ಜೂನ್ 19, 2015

ಸಂಸ್ಕೃತಿ

ಎಲ್ಲಿಹುದೋ ಏನ್ತಿಹುದೋ ನಮ್ಮ ಸಂಸ್ಕೃತಿ ಇಂದು 
ಮುಂದಾದರು ಒಮ್ಮೆ ಮತ್ತೆ ಮರುಕಳಿಸಬಹುದೋ ?

ಬಳೆಗಳ ದನಿ ಇಲ್ಲ 
ಎಳೆದ ರಂಗೋಲಿ ಇಲ್ಲ 
ತಳಿರು ತೋರಣ ಹೂ ಬಾಗಿಲಿಗೆ ಕಟ್ಟಿಲ್ಲ 
ಹಳೆಯ ಪದ್ದತಿಗಳೆಲ್ಲ ನಿಂತು ಹೋಗಿಹುದಿಲ್ಲಿ 
ಚಿತ್ರದಲಿರುವ ಅಮ್ಮನೇ  ಬರಬೇಕು ಮತ್ತಿಲ್ಲಿ . 

ಗಾಳಿ ಬದಲಾಗಿಲ್ಲ 
ನೀರು ಬಣ್ಣಕ್ಕೆ ತಿರುಗಿಲ್ಲ 
ಮನೆಮುಂದಿನ ತುಳಿಸಿ ವಾಸನೆ ಬದಲಿಸಿಲ್ಲ 
ಎಲ್ಲವನು ಕೆಡೆಸುವ ಮನುಜರೇ ತುಂಬಿಹರಿಲ್ಲಿ 
ಕಪ್ಪಾಗುತಿದೆ ಬದುಕು ಮನಸಲೂ ವಿಷ ತುಂಬಿ. 

ಬುದ್ದಿ ಹೇಳುವರಿಲ್ಲ  
ಹೇಳಿದರೆ ಕೇಳುವರಿಲ್ಲ 
ಎಲ್ಲಿಗೆ ಓಡುತ್ತಿದ್ದೇವೆ ಎಂಬದೇ ಗೊತ್ತಿಲ್ಲ 
ಪಾಶ್ಚಾತ್ಯರ ಜೀವನಶೈಲಿ ಆವರಿಸಿಹುದಿಲ್ಲಿ 
ಬೃಂದಾವನದ ಕೃಷ್ಣನೇ ಮತ್ತೆ ಎದ್ದು ಬರಬೇಕಿಲ್ಲಿ 

ಶನಿವಾರ, ಮೇ 30, 2015

ಬೇಸಿಗೆ ಶಿಬಿರ

ಬಿಸಿಲಲಿ ಬೇಸಿಗೆ ಶಿಬಿರವು ಬಂದಿತು ತುಸು ಬದಲಾವಣೆ ನಮಗಿಲ್ಲಿ ಹೊಸ ಗೆಳೆಯರ ಹೊತ್ತು ತಂದಿತು ಹುಸಿಯಾಟ ಆಡಲು ಜೊತೆಯಲ್ಲಿ ಬಣ್ಣವ ಹಚ್ಚಿ ಬೆತ್ತದ ಗೊಂಬೆಗೆ ಕಣ್ಣು ಹುಬ್ಬುಮೂಗು ತೀಡುತಲಿ ಚಿನ್ನಿಕೋಲು ಬುಗುರೀ ಗೋಲಿ ಚೆನ್ನಾಗಿ ಆಡುತ ಜೊತೆಯಲ್ಲಿ ಬುರುಗಿನ ನೀರಲಿ ಗಾಳಿಯ ಊದಿ ಹಾರಿಸಿ ನಲಿಯುತ ಹರುಷದಲಿ ನೀರಿನ ಗುಳ್ಳೆಯು ಹೊಳೆಯುತ ಸಾಗಿವೆ ತೋರುತ ನಗುಮುಖ ಜೊತೆಯಲ್ಲಿ ಗುಳ್ಳೆಯು ಹಾರುತ ಹಾರುತ ಒಡೆಯಿತು ಒಳ್ಳೆಜೀವನ ಪಾಠ ಕಲಿಸುತಲಿ ಬಣ್ಣವು ಅಳಿಸಿತು ಬಗುರಿಯು ಮುರಿಯಿತು ಚಿಣ್ಣರ ಶಿಬಿರವು ಮುಗಿಯುತಲಿ

ಶನಿವಾರ, ಮೇ 16, 2015

ಅಭಿಸಾರಿಕೆ


ಕಳೆದೊಂದು ವರುಷದ ಹಿಂದೆ 
ಬಳಕುವಾ ಬೆಡಗಿಯ ಕಂಡೆ 
ಬೆಳೆದು ನಿಂತಾ ಅಭಿಸಾರಿಕೆಯ  
ಹೊಳೆವ ಹೂ ಕಂಗಳ ಕಂಡೆ 

ಮುದ್ದು ಗರೆಯುವ ಮುಖದಲ್ಲಿ
ತಿದ್ದಿ ತೀಡಿದ ಹುಬ್ಬನು ಕಂಡೆ 
ಬಿದ್ದು ಹೋದೆ ಅವಳಿಗೆ ಸೋತು 
ಎದ್ದು ಬರುವ ದಾರಿಯು ಹುಡುಕುತಿಹೆ   

ಪ್ರೇಮ ನಿವೇದನೆಗೆಂದು ಗುಲಾಬಿ ಹೂವನು ತಂದೆ 
ಪ್ರೀತಿ ಪತ್ರವ ಕೊಡಲು ಪದಗಳನು ಹುಡುಕುತಲಿರುವೆ 
ಪ್ರತೀ ಪುಟವನ್ನು ತೆರೆದು ಪದಗಳ ಹೆಕ್ಕಿ ತೆಗದೇ 
ಪ್ರಭುದ್ದ  ಕವನವನು  ಗೀಚುತ ಮೈಮೆರೆತುಹೋದೆ 

ಒಂದೊಂದು ಸಾಲಿನಲ್ಲಿ ಹೊಸ ಪ್ರೀತಿ ತುಂಬಿಸಿ ಇಟ್ಟೆ 
ಚಂದದ ಅರ್ಥಕೆ ಸೋತು ಗುಲಾಬಿ ದಳ ಎಲೆಗಳು ಬಿತ್ತೇ 
ಅಂದಗೊಳಿಸಿ ಮುಗಿಸುತಲಿ  ಸಮಯ ಬಹಳ ಸರಿದಿತ್ತೆ! 
ಇಂದು ಪತ್ರ ಕೊಡುವುದರೊಳಗೆ ಅವಳಿಗೆ ತಾಳಿ ಬಿದ್ದೈತೆ !!! 

ಮಂಗಳವಾರ, ಮೇ 5, 2015

ಸೈಕಲ್ ಮೇಲೆ.

ಬಣ್ಣ ಬಣ್ಣದ ಬಲೂನಲ್ಲಿ 
ಸಣ್ಣ ರಂದ್ರದಿ ಗಾಳಿ ತುಂಬಿ 
ಅಣ್ಣ ಹಿಡಿದು ಹೊರಟಿದ್ದಾನೆ ಸೈಕಲ್ ಮೇಲೆ.

ದುಂಡು ಮೊಗದ ಬಲೂನಲ್ಲಿ 
ಚಂದದ ಕಣ್ಣು ಮೂಗು ಬರೆದು 
ಅಂದ ಹೆಚ್ಹಿಸಿ ಹೊರಟಿದ್ದಾನೆ ಸೈಕಲ್ ಮೇಲೆ 

ಕೆಂಪು ಹಳದಿ ನೀಲಿ ಹಸಿರು 
ತಂಪು ಗಾಳಿ ಒಳಗೆ ಉಸಿರು 
ಗುಂಪು ಕಟ್ಟಿ ಹೊರಟಿದ್ದೇವೆ ಸೈಕಲ್ ಮೇಲೆ 

ಹಗಲು ಸಂಜೆ ಇರುಳಿನಲ್ಲಿ 
ನಗುತ ನಲಿಯುತ ದಾರಿಯಲ್ಲಿ    
ಹೋಗಿ ಕೊನೆಗೆ ಸೇರುವುದೆಲ್ಲೋ ಸೈಕಲ್ ಮೇಲೆ 

ದಡವ ಸೇರಿಸುವ ಮಾಲಿಕನಿಗೆ 
ದುಡಿದು ಕೊಳ್ಳುವ ಗ್ರಾಹಕರಿಗೆ 
ಕೊಡತ ಪ್ರೀತಿ ಸಾಗುವೆವು ನಾವು ಸೈಕಲ್ ಮೇಲೆ 

ಮಂಗಳವಾರ, ಏಪ್ರಿಲ್ 21, 2015

ಕುಟ್ಟಿ ಹಾಕುವೆ ನಾನು

ಕುಟ್ಟಿ ಹಾಕುವೆ ನಾನು ತುಟ್ಟಿ ಯಾಗಿದೆ ಬದುಕು 
ಕಟ್ಟಡಗಳು ಏಳುತಿವೆ ನಮ್ಮಗಳ  ಚಟ್ಟ ಕಟ್ಟಿ    
ಬಿಟ್ಟು ಹೋದರು ಅಪ್ಪ ಅಮ್ಮ ಅರಿಯಲಾರದೆ 
ಕಷ್ಟ  ಎಸ್ಟೆಎಂದು ವರ್ಣಿಸಲಿ ನಮ್ಮ ಬದುಕು 

ಹಗಲಿಲ್ಲ ಇರುಳಿಲ್ಲ ಕುಟ್ಟುವುದು ನಿಂತಿಲ್ಲಾ 
ಹೆಗಲ ಮೇಲೆ ಕೂಡಿಸಿ ಓಡಾಡಿಸುವರಿಲ್ಲ 
ಹಗಲು ಕನಸಾಗಿದೆ ಆಟ ಅಡುಬೇಕೆಂಬುದು 
ಹೋಗಲು ಬಿಡಲೊಲ್ಲರು ನಾನು ಜೀತದಾಳು 

ಜಾರಿಹೋಗಿದೆ ಜೀವ ಹೇಳಿ ಕೆಳುವವರಾರಿಲ್ಲ 
ಹರಿದ ಛತ್ರಿಯಾಗಿದೆ ತೊರೆದ ನಮ್ಮ ಬದುಕು 
ಉರಿದು ಹೋಗಿದೆ ಜೀವ ಉರಿವ ಬಿಸಿಲಲ್ಲಿ 
ಬರಿದಾಗಿದೆ ಬದುಕು ಈ ಬೋಕಿ ಬಿಲ್ಲಿಯಂತೆ 

ಹೊತ್ತು ಮುಳುಗದಿರಲಿ ರಾತ್ರಿ ಉಳಿಯುವುದೆಲ್ಲಿ 
ತುತ್ತು ಇಡುವವರಿಲ್ಲ ಅಳಲು ಸಮಯಬಾರದಿರಲಿ
ಗೊತ್ತಿಲ್ಲ  ಬಾಲಕಾರ್ಮಿಕ ಇಲಾಖೆ ಇರುವುದೆಲ್ಲಿ 
ಇತ್ತಾದರೂ ಬವಣೆಬಿದಿಸುವರೇ? ಬೆಳಕು ಚಲ್ಲಿ ?

ಗುರುವಾರ, ಏಪ್ರಿಲ್ 2, 2015

ಹೊಸ ಗೂಡು

ಬೇಸಿಗೆ ಬಂದಿದೆ ಮರ ಗಿಡ ಒಣಗಿದೆ
ಕಟ್ಟಿದ ಗೂಡು ಎಲ್ಲರಿಗೂ ಕಾಣುತಿದೆ 
ಇಟ್ಟರೆ ಮೊಟ್ಟೆ ಕುಕ್ಕದೆ ಬಿಡುವರೇ 
ಬದ್ದ ವೈರಿಗಳು ದಿನ ಕಾಯುತಿವೆ 

ಕಡು ಬೇಸಿಗೆಯಲಿ ಸುಡುತಿದೆ ಬಿಸಿಲು 
ಮರೆ ಮಾಚಲು ನೆರಳಿನ ಜಾಗ ಸಿಗದೇ 
ಕಟ್ಟಡದಡವಿಯಲು ದಟ್ಟಡವಿಯಲು   
ತಂಪಿರುವ  ಜಾಗವ  ಹುಡುಕುತಿಹೆ 

ಕಲ್ಲಿನ ಮಂಟಪದ ಮೂಲೆಯಲೊಂದು 
ಚಲ್ವಿನ ಪೊಟರೆಯು ಕೈಬೀಸಿ ಕರೆಯುತಿದೆ 
ಹುಲ್ಲನು ಹುಡುಕಿ ಹೊಸ ಗೂಡನು ಕಟ್ಟದೇ 
ಮೆಲ್ಲಗೆ ಒಳಗೆ ಸೇರಲು ಕಾಯುತಿಹೆ !!

ದಲ್ಲಾಳಿ ಇಲ್ಲದೆ ಹುಡುಕಿದ ಮನೆಗೆ 
ನಲ್ಲೆಯ ಜೊತೆ ಮರಿಗಳ ಕರೆತರುವೆ 
ಗಲ್ಲವ ತಿರುಗಿಸಿ ಚಿಂವ್ ಚಿಂವ್ ಹಾಡಿ 
ಎಲ್ಲರ ಮೃದು ಮನಸಿಗೆ ಮುದಕೊದುವೆ 

ಮಂಗಳವಾರ, ಮಾರ್ಚ್ 31, 2015

***ಸೋಲು ಗೆಲವು***

ಛಳಿಯ ಗಾಳಿಯ ಮಧ್ಯ
ಹೊಳೆವ ನೀಲಿ ಬಣ್ಣದ ಬಟ್ಟೆ
ಹಸಿರ ಹಾಸಿನ ಅಂಗಳದ ನಡುವೆ
ಹೊಸ ಚಂಡು ದಂಡಿನಾಟದ ಸೊಬಗು

ಎರೆಡು  ಗುಂಪುಗಳ ಕರೆದು
ಬೆರಳಿನಲಿ ತೋರಿ ಚುಮ್ಮಿಸಿದ
ಬಿದ್ದ ಬಿಲ್ಲೆಯ ಮೆಲ್ಪಕ್ಕ ರಾಣಿಎಂದು
ಗೆದ್ದವರು ಆಡಿದರು ಮೊದಲು ಬಂದು

ಓಡಿ ಬಂದು ಎಸೆದ ಚಂಡು
ಹೊಡೆದರು ಗೆರೆಯ ದಾಟಿ  ಆರು
ಓಟದ ಎಣಿಕೆ ಏರುತ ಪಂದ್ಯ
ಎಟುಕದ ಪರ್ವತದಂತೆ ಬೆಳೆದು

ಸುತ್ತಲಿದ್ದ ಜನ ಸಾಗರ ಎದ್ದು
ಮತ್ತೆ ಮತ್ತೆ ಚಪ್ಪಾಳೆ ಹೊಡೆದು
ಹುರಿದುಂಬಿಸಿದರು ಗೆಲ್ಲಲು ಆದರೆ
ಕರೆಯಿತು ಕೈ ಬೀಸಿ ಪಂದ್ಯ ಸೋಲು

ಅತ್ತವರು ಅಲ್ಲಿ ನಗು ಬೀರುತ್ತಿದರೆ
ಇತ್ತಲಿದ್ದವರು ಕೈ ಕುಲುಕಿ ಕುಣಿದರು
ಎತ್ತ ನೋಡಿದರು ಬಿರಿಸು ಬಾಣವೇ
ಚತ್ತ ಎಲ್ಲರದು ಅವಳ ಮುಖದ ಮೇಲೆ

ಅವಳು ಬರದಿದ್ದರೆ ಅವನು ಆಡುತ್ತಿದ್ದ
ಬೆವರಿಳಿಸಿದರೂ ಟೀಕೆಗಳ ಸುರಿಮಳೆ
ಸೋಲು ಗೆಲವುಗಳು ಹಲವು ಸಮಪಾಲು
ಆದರೆ ನಮ್ಮ ಜನಗಳದು ಅದೇ ಗೋಳು

ಶನಿವಾರ, ಮಾರ್ಚ್ 28, 2015

ರಾಮಾಯಣ

ಗಜವದನನ ಪಾದಾಂಬುಜಕೆರಗಿ  ಪೇಳುವೆ 
ನಿಜ ಗುಣನಿಲಯನ  ಕಥೆಯ
ತ್ರಿಜಗ ವಂದಿತ ರಘುರಾಮರ ಅನುದಿನ 
ಭಜಿಪ ಹಡಗಲಿ ಹನುಮನ ನೆನೆಯುತಲಿ  

ಋಷಿಶ್ರುಂಗರೊಡನೆ ಸರೆಯು ನದಿದಡದಲ್ಲಿ 
ಧಶರಥ ಪುತ್ರಕಾಮೇಷ್ಥಿ ಯಾಗ ಮಾಡುತಲಿ 
ವಿಶೇಷ ಪಾಯಿಸ ಬರಲು ಹಂಚಿದ ರಾಜ      
ಕೌಶಲ್ಯ, ಸುಮಿತ್ರ  ಕೈಕೆಯೇಯಾರಲ್ಲಿ 

ಹೊಳೆವ ಶುದ್ದನವಮಿ ಕೌಸಲ್ಯಯಲಿ ಶ್ರೀರಾಮ
ಉಳಿದವರಲ್ಲಿ ಲಕ್ಷ್ಮಣ ಭರತ ಶತ್ರುಗ್ನ ಜನಿಸಿದರು 
ಹೊರಟರು ಯಜ್ಞ ರಕ್ಷಸಲು ವಿಶ್ವಾಮಿತ್ರರ ಸಹಿತ 
ಶ್ರೀರಾಮ ಲಕ್ಷ್ಮಣರು  ವಷಿಸ್ಥರ ಅಪೇಕ್ಷೆಯಂತೆ

ತಾಟಕ ವಧಿಸಿ  ಸುಬಾಹುವನೆ ಕೊಂದು 
ರಕ್ಕಸ  ಮಾರೀಚನ ಹೊಡೆದೊಡಿಸಿದರು   
ಗಂಗಾ ತಟದಲ್ಲಿ ಅಹಲ್ಯಾಯ ಹೆಣ್ನಾಗಿಸಿ 
ಮುಂದೆ ನಡೆದರು  ಜನಕರಾಜನಾಸ್ಥಾನಕೆ 

ಮುರಿದು ಶಿವ ಧನಸ್ಸನ್ನು ಎತ್ತಿ  ಆಯಾಸವಿಲ್ಲದೆ 
ವರಸಿದ ಸುಂದರಿ ಜಾನಕಿಯ ಸ್ವಯಂವರದಿ  
ಪರಶುರಾಮರ ಯುದ್ದದ ವಿಡಂಬನೆಯಮಾಡಿ    
ತರಿದು ಅತುಲನ ತುಳಿದು ಅಯೋಧ್ಯ ಸೇರಿದಾರು    

ಕರೆದನು ದಶರಥ ಮಂತ್ರಿ ಸುಮಂತ್ರರನ್ನು 
ಶ್ರೀರಾಮರ ಯುವ ಪಟ್ಟ ಕಟ್ಟಲು ನಿರ್ಧರಿಸುತಲಿ 
ಕೇಳಿ ಮಂಥರೆ ಮಾತು  ಕೈಕೆಯು ವರಬೇಡಿ 
ಕಳೆಸಿದಾರು ಶ್ರೀ ಸೀತಾರಾಮ ಲಕ್ಷಣರ ಅಡವಿಗೆ 

ಕಾಂತಿಇಂದ ಹೊಳೆವೋ ಸುಂದರ ವನದಲ್ಲಿ   
ಜಿಂಕೆ ಮೊಲ ಮೃಗಗಳು ಸೇವೆ ಮಾಡುತಿರಲು 
ಬಂದು ಲಂಕಿಣಿ ಮದುವೆ ಮಾಡಿಕೊ ಎನ್ನಲು ಅ_
ಹಂಕಾರದ ಕಿವಿ ಮೂಗು ಕತ್ತರಿಸಿ ಕಳುಹಿಸಿದನು 

ಹರಿವ ಗೋದಾವರಿ ತಟದ ಪಂಚವಟಿಯಲ್ಲಿ 
ತರಿದು ನಿಗ್ರಹಿಸಿದನು ಅನೇಕ ರಾಕ್ಷಸರ   
ಬಂದು ಶಬರಿಗೆ  ದರುಶನವಿತ್ತು  ಕೊಟ್ಟ 
ಎಂಜಲು ಬಾರೆ ಹಣ್ಣು ತಿಂದು ಹರಸಿದನು 

ಚಲುವ ಮಾಯಾ ಜಿಂಕೆಗೆ ಬೇಕೆನಲು  ಸೀತಾ 
ಬಿಲ್ಲು ಹಿಡಿದು  ಹೋದರು ರಾಮ ಲಕ್ಷ್ಮಣರು 
ಲಕ್ಷ್ಮಣ ಗೆರೆಯಾ ದಾಟಿ ಭಿಕ್ಷೆ ಕೇಳಿದ ರಾವಣ  
ತಕ್ಷಣ ಅಪಹರಿಸಿ  ಹೊತ್ತು ಲಂಕೆಗೆ ನೆಡೆದಾನು 

ಪುಷ್ಪಕ ವಿಮಾನವ  ಮಾರ್ಗ ಮಧ್ಯ  ತಡೆದ 
ಪಕ್ಷಿ ಜಟಾಯು  ಕಳೆದು ಕೊಂಡ ಪಕ್ಕೆ ರೆಕ್ಕೆಗಳ 
ಕಿಷ್ಕಿಂದ ಪರ್ವತ ದಾಟಿ ಚಲಿಸಲು ವಿಮಾನ 
ವಿಷಯ ತಿಳಿಸಲು ಸೀತಾ ಸೆರಗ ಚಲ್ಲಿದಾಳು  

ಸೀತೆಯ ಹುಡುಕುತ ಬಂದ ರಾಮ ಲಕ್ಷಮನರು 
ಕೋತಿಗಳ ಕಂಡರು ತುಂಗಭದ್ರ ತೀರದಲ್ಲಿ 
ವಾಲೀಯ ವಧಿಸಿ  ಸುಗ್ರೀವನ ಅನುಗ್ರಹಿಸಿ 
ನೆಲಸಿ ಕಿಷ್ಕಿಂದಯಲಿ ವಾನರಸೇನೆ ಕಟ್ಟಿದರು 

ಉಂಗುರ ಹಿಡಿದು ಸಮುದ್ರ ಲಂಘನ ಮಾಡಿ 
ಲಂಕೆಯ ಅಶೋಕವಕೆ  ಹನುಮಂತ ಸೇರಿದನು 
ಜಾನಕಿಗೆ ಮುದ್ರಿಕೆ ಕೊಟ್ಟು ಚೂಡಾಮಣಿ ಪಡೆದು 
ಲಂಕಾಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದನು 

ಶರಣಾದ ವಿಭಿಷಣನ ವಾನರ ಸೈನ್ಯ  ಸಹಿತ 
ರುದ್ರನನು ಪೂಜಿಸಿ ಸೇತುವನ್ನು ಕಟ್ಟಿದರು 
ನಿದ್ರೆಇಂದೆದ್ದ  ಕುಂಭಕರ್ಣ, ಇಂದ್ರಜಿತುವನ್ನು 
ಧರೆಗೆ ಉರುಳಿಸಿದನು ಯುದ್ದದಿ ದಶಕಂಠನ

ಶ್ರೀರಾಮ ಸೀತಾ  ಲಕ್ಷ್ಮಣ ಸಹಿತಾನಾಗಿ 
ಮಾರುತಿ  ಭುಜವೆರಿ ಅಯೋಧ್ಯ ಸೇರಿದನು 
ತನ್ನ ಬಾಹುಗಳಿಂದ ಅಭಿಮಾನದಿಂದ ಕರೆದು 
ಹನುಮಂತನಿಗೆ ಆಲಿಂಗನನು ನೀಡಿದಾನು 

ಸಭೆಯಲ್ಲಿ ಶ್ರೀ ರಾಮರ ಪಟ್ಟಾಭಿಷೇಕ ನಡೆಯಲು 
ಸಭಿಕರು ಪಾರಾಕು ಘೋಷಣೆಗಳು ಮೊಳಗಿಸಿದರು 
ದೇವ ದೇವನ ಕಂಡು ಜನರು ಮಂತ್ರಿ ಮಾಘದರು, 
ದೇವತೆಗಳೇ ಬಂದು ಪುಷ್ಪ ವೃಷ್ಟಿ ಸುರಿಸಿದಾರು   

ಈ ಚರಿತೆಯ ಹೇಳಿ ಕೇಳಿದವರಿಗೆ ವರವೀವ 
ಪ್ರಭಂಜನನ  ಹೃದಯೇಶ್ವರ  ಶ್ರೀ ರಾಮ  
ಧನ ಧನ್ಯ ವಿದ್ಯೆ  ಸಂತಾನ ಸುಭಿಕ್ಷವು 
ಅನುಗ್ರಹಿಸಿ ಇಡುವನು  ಮುಕ್ತಿ ಮಾರ್ಗದಲಿ 

ಸೋಮವಾರ, ಮಾರ್ಚ್ 16, 2015

ಹೋಳಿ


ಹಾಕಿಬಿಡು ಬಣ್ಣಗಳ
ರಾಶಿ ಎಲ್ಲೆಲ್ಲೂ 
ಚಲುವ ಅಳಿದು ಹಾಕಿ  
ಗೆಲವು  ಎಲ್ಲೆಲ್ಲೂ ನಲಿವು 

ಚಂದಿರನ ಪ್ರಭೆಯಲ್ಲಿ
ಹಾಲಿನಂತಹ ಬಿಳಿ ಬಣ್ಣ
ಸೂರ್ಯನಲ್ಲಿ ನಸುಗಂಪು 
ಮನಸೆಳೆಯುತಿದೆ ನೋಡಣ್ಣ 

ಚಿಗುರಿನಲಿ ಹಸಿರ ಎಲೆ 
ಹೂವಿನೊಳಗೊಂದು ಬಣ್ಣ 
ಕಾಯಿ ಹಣ್ಣಾದಂತೆ ಬಣ್ಣ 
ಬದಲಿಸಿ ಮನಸೆಳೆವುದು ನೋಡಣ್ಣ 

ಪ್ರಕೃತಿ ತುಂಬಾ ತುಂಬಿದೆ 
ಬಣ್ಣಗಳ ಚಲುವ ಚಿತ್ತಾರ 
ಕಾಮ ನಿಗ್ರಹ ಸಂಕೇತ
ಹೋಳಿ ಹಬ್ಬದಾ ಸಾರ  
 
ಆಡಿಬಿಡು ಬಣ್ಣಗಳ
ಜೊತೆ ಪ್ರೀತಿಯ ಚಲ್ಲಟ,
ಒಳ ಕಣ್ಣ ತೆರೆದು ಜೀವಿಸು 
ತುಂಬಿ ಬಣ್ಣಗಳ ನೋಟ

-ಪ್ರಭಂಜನ. 

ಬುಧವಾರ, ಫೆಬ್ರವರಿ 4, 2015

ಪ್ರಣತಿ


ಹೊಳೆಯ ಮಣ್ಣನು ತಂದು
ತುಳಿದು ಹದಮಾಡಿ ಹಿಡಿದು 
ಬೆಳೆದನು ಕಂಬಾರ  ಪ್ರಣತಿ ಹಲವು

ತಳಿರು ತೋರಣವ ಹಚ್ಚಿ
ಬಳಿದು ಹೊಸ ಬಣ್ಣಗಳನು
ಬೆಳಗಿಸಿದರು  ದೀಪ ಹರಿಸಿ ಹೊನಲು

ಎಳೆದು ಹಾಕಿದರು ನಮ್ಮ 
ಕಳೆದ ಹಬ್ಬದ ಮರುದಿನ 
ಹಳೆಯ ಹೊರಗಿನ ಗೂಡಿನೊಳಗೆ   

ಎಳ್ಳ ಎಣ್ಣೆಯಲಿ ಮಿಂದು
ಹೊಳೆವುದೆನ್ನಯ ಮೊಗವು 
ಕಳೆಗುಂದಿದ ಹಲವು ನೆಂಟರೋಳಗೆ 

ಬೆಳಗಿ ಮನೆ ಮನದಂಗಳದಿ 
ಕಳಿತು ಮಳೆಯಲಿ ದಿನ ದಿನದಿ 
ಹಳ್ಳಕೊಳ್ಳದಲಿ ಹರಿದು ಸೇರಿ ಹೊಳೆಗೆ 

ಗುರುವಾರ, ಜನವರಿ 29, 2015

ನಂಟು

ಋತು ಚಕ್ರದ ಹಾಗೆ 
ಜನನ ಮರಣದ ನಂಟು 
ಹೆಣವಾಗಿ ಹೋದರು  
ಹರಿಯಲಿಲ್ಲ ಋಣದ ಗಂಟು 

ಮಾಡಿದ ಪುಣ್ಯದ ಕೊಡವ 
ವಡೆವರು  ಅಪ್ರದಕ್ಷಣೆಯಲಿ 
ಇಡುವರು ಪಾಪದ ಬುತ್ತಿ(ಬೆಂಕಿ)
ಬಿಡದದು ಬೆನ್ನ ದೇಹಸುಟ್ಟರೂ 

ಉಚ್ಚ ನೀಚಗಳ ನಂಟಿಲ್ಲ 
ತುಚ್ಚವಾಗಿ ಕಾಣದೀ ಅಗ್ನಿ 
ಹೆಚ್ಹು ನೆಂಟರು ಸುತ್ತಲು ನಿಂತರು 
ಬಿಚ್ಚಿಹಾಕುವುದು ಇಹದನಂಟು

ಉಳಿಸಿ

ಹಸಿರ ಕಣ್ಣಲಿ ತುಂಬಿ  
ಉಸಿರ ದೇಹದಿ  ತುಂಬಿ   
ತುಸು ಮೌನದಲಿ ಅಳುತ್ತಿದೆ 
ಬೇಸರ ತೋರಿಸದೆ ಒಳಗೊಳಗೇ 

ಕಿತ್ತರು ಪತ್ರಂಬೆಗಳನು 
ಚಿತ್ತದಲಿಲ್ಲ ನೋವುದೆಂದು
ಕತ್ತುಹಿಸುಕಿ ಕೊಲ್ಲುವರು ದಿನ
ಬೆತ್ತಲೆ ಮಾಡುತ ಬೀದಿಯೊಳಗೆ  

ಅರೆಬೆತ್ತಲಾದರೆ ಏನು 
ಕರೆದು ಎದೆಹಾಲು ನೀಡುವಳಂತೆ 
ಗಾರೆ ಊರ ತುಂಬಿದರೆ ಏನು 
ತರುವೆ ಹಸಿರು  ಪ್ರಕೃತಿಯೊಳಗೆ 

ಹಣ್ಣೆಲೆ ಉದಿರಿಸಿ ಶಶಿರದಲ್ಲಿ 
ಬಣ್ಣದ ಚಿಗುರೆಲೆಗಳ  ಬಿಡುವೆ 
ಸಣ್ಣ ವರವಿದೆ ಕಡಿಯದಿರಿ 
ಹಣ್ಣು ಹೂ ಕೊಡುವೆ ಭುವಿಯೊಳಗೆ  
ಅರಿತು ಉಳಿಸಿ ನವ ಪೀಳಿಗೆಗೆ 

ಮಂಗಳವಾರ, ಜನವರಿ 20, 2015

ಕ್ಷಿತಿಜ

ಹಸಿರ ಸೀರೆಯನುಟ್ಟವಳ  
ಸರೆಗನೆಳೆಯಲು ಹೋದೆ 
ಅರೆಕ್ಷಣದಿ ಹಿಡಿದು ನಕ್ಕಳು 
ಬರಸೆಳೆದು ಮುತ್ತಿಕ್ಕುತ

ಎರೆಡು  ಕೆನ್ನೆಯ ಹಿಂಡಿ
ಹಿರಿ ಹಿರಿ ಹೆಗ್ಗುತ ಎತ್ತಿ
ತೂರಿ ಹಿಡಿದು ಅಡಿಸುವಳು
ಕರದಲ್ಲಿ ಅಪ್ಪಿ ಮುತ್ತಿಕ್ಕುತ 

ಅಕ್ಕರದಿ ಕರೆದು ಕೂಡಿಸಿ
ಚಕ್ಕುಲಿ ಗಿಲಗಂಚಿಯ ಕೊಟ್ಟು
ಸಕ್ಕರೆಯ ಸಿಹಿ ತಿನಿಸುವಳು 
ಪಕ್ಕದಲಿ ಕುಳಿತು 
ಮುತ್ತಿಕ್ಕುತ 

ಅಮ್ಮನ ಪ್ರೀತಿಯಲಿ ಮುಳುಗಿ
ಸುಮ್ಮನೆ  ಕುಳಿತು ಬಿಟ್ಟೆ
ಹೆಮ್ಮಯಿಂದ ಹರಸಿ ಕಳುಹಿದಳು
ಹುಣ್ಣಿಮೆಯಲಿ ತಪ್ಪದೆ ಬಾರೆನ್ನುತ