ಬುಧವಾರ, ನವೆಂಬರ್ 4, 2015

ಕಣ್ಣಲ್ಲೇನೋ

ಹಸಿರ ಕಣ್ಣಲ್ಲೇನೋ ಹೊಸ ಸೆಳೆತವಿದೆ
ಉಸಿರು ಉಸಿರಿನಲ್ಲಿ ಹೊಸ ಹುಮ್ಮಸಿದೆ   
 
ಹೊಳಪು ತುಂಬಿದ ಮುಖ ಪೂರ್ಣ ಚಂದ್ರನಂತಿದೆ 
ಎಳೆಯ ಮುಂಗುರುಳು ಸೋಕಿ  ಅಲೆಗಳು ಎದ್ದಿವೆ   
ಹಳೆಯ ಕನಸು ಹೊತ್ತು ಕಪ್ಪು ಮೋಡ ಬಂದಿತೇ 
ಹೊಸ ಪ್ರೀತಿಗೆ ನವಿರಾದ ತಂಪು ಗಾಳಿ ಬೀಸಿದೆ 

ಮಧುರ ಮಾತು ಆಡಿದಂತೆ ಹನಿಯು ಉದುರಿತೆ 
ಮನಸು ಮಳೆಯಲ್ಲಿ ಮಿಂದು ಇಬ್ಬನಿ ಹಗುರವಾಗಿದೆ 
ನಲಿವ ನಿನ್ನ ಕಂಡು ಭುವಿಯು ತೊಯ್ದು ಹೋಯಿತೆ 
ಹೆಜ್ಜೆ ಗುರುತು ಹಿಂಬಾಲಿಸಿ ಬೀಜ ಮೊಳಕೆ ಒಡೆಯಿತೆ  

ಮೊದಲ ವಸುಗೆಗೆ ಮೈ ಅರಳಿದಂತೆ ಕುಸುಮ ಅರಳಿತೆ 
ಮಕರಂದ  ಹೀರಲು ಬಂದ ಚಿಟ್ಟೆ ದುಂಬಿ ಬಣ್ಣ ತುಂಬಿವೆ 
ಬಸಿರು ತುಂಬಿ ಭುವಿಯ ತುಂಬಾ ಕಾಯಿ ಪೀಚು ಸುರಿದಿವೆ 
ರಸಮಯ ಹಣ್ಣು ತುಟಿಗೆ ಹೊಸ ರುಚಿಯ ಹರುಷ ತಂದಿದೆ  
 
ಪ್ರೀತಿ ಉಕ್ಕಿ ಕೆರೆ, ತೊರೆ, ನದಿಯು ಮೈ ತುಂಬಿ ಹರಿದಿವೆ 
ಮೋಹ ತುಂಬಿದ ಮಿಲನದಂತೆ ನದಿಗಳು ಸಾಗರ ಸೇರಿವೆ 
ಸಾಗರದ ಅಂಚಿನಲ್ಲಿ ಹೊಳೆವ ಪುಟ್ಟ ಚಂದ್ರ ಉದಯಿಸುತಿದೆ 
ಮಧು ಚಂದ್ರದಇರುಳಿನಲಿ ಮತ್ತೆ  ಅಲೆಗಳು ಮೇಲೇಳುತಿವೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ