ಗುರುವಾರ, ಡಿಸೆಂಬರ್ 15, 2016

ತೆಕ್ಕೆಗೆ ಬೀಳಬಾರದೇ

ತುಂತುರು ಮಳೆ ಬಂದಿತು 
ಸುಂಟರಗಾಳಿ ಬರುವ ಸೂಚನೆ 
ತಂಗಾಳಿ ಚಳಿಯಲಿ ಬೀಸಿತು 
ತುಂಟ ಮನಸಿಗೆ ಬಿಸಿ ಯೋಚನೆ 

ಹಳೆಯ ಮಳೆಗೆ  ಕಾದಿರುವೆನು 
ಹೇಳಲು ಮನಸಿನ ಭಾವನೆ 
ಬೆಳೆಯಲು ಸಾಧ್ಯವೇ ಬರದಲಿ  
ಕಾಳನು ಭುವಿಗೆ ಬಿತ್ತದೆ 

ಕಲ್ಲನು ಎಸೆಯುತ ಇರುವೆನು 
ಚಲ್ಲಿದ ಕರಿ ಮೋಡಕೆ 
ಮೆಲ್ಲನೆ ಮಳೆಸುರಿಸಿ ಪ್ರೀತಿಯ 
ಹುಲ್ಲು ಹುಟ್ಟಿಸಬಾರದೇ 

ಕಳೆಯನು ತೆಗಿಯುತಿರುವೆನು 
ಬೆಳೆಯಲಿ ಬೇರು ಗಿಡ ಗಟ್ಟಿಗೆ  
ಹೊಳೆವ ಹೂ ಹಾಗೆ ಮೋಹಿಸಿ 
ಕಳೆತ ಹಣ್ಣಾಗಿ ತೆಕ್ಕೆಗೆ ಬೀಳಬಾರದೇ   

ಗುರುವಾರ, ನವೆಂಬರ್ 17, 2016

ಗೋವಿಂದ

ಕೃಷ್ಣ ನಿನ್ನ ಕಣ್ಣ ನೋಟ 
ನೋಡಲೆಷ್ಟು ಅಂದ   .... ಪ 
ಸಣ್ಣ ಕೊಳಲನೂದುತ 
ಕಣ್ಣು ಹೊರಳಿಸುವುದೇ ಚಂದ --- ಆ ಪಲ್ಲ 

ಅಂಬೆಗಾಲು ಇಡುತ ಬರುವ 
ಮಂದಹಾಸ ವೆಷ್ಟು ಚಂದಾ 
ನೊಂದ ಮನಸುಗಳಿಗೂ ನೀ  ಆ-
ನಂದ ತರುವೇ  ನಗುವಿಂದಾ  

ಹಾಲು ಮೊಸರು ಬೆಣ್ಣೆ ಕದ್ದು 
ಕಾಲುಕಿತ್ತಿದೆ ಮನೆಯಿಂದ 
ಬಾಲ ಲೀಲೆಗಳ ಬಣ್ಣಿಸಲಾರೆ 
ಆಲಯದೊಳು ಬಾ ಗೋವಿಂದಾ   

ಗೋವರ್ಧನ ಗಿರಿಯನೇ ಎತ್ತಿ 
ಹಾವು ಹೆಡೆಮುರಿದೆ ಕಾಳಿಂಗಾ     
ಮಾವು ತೋಟದಲಿ ಹಾಲು ಕುಡಿದು 
ಜೀವ ಹೀರಿದೆ ಪೂತನಿ ಎದೆಯಿಂದ   

ಕರೆದು ಗೋಪಿಯರ ಕೈಯ ಹಿಡಿದು 
ಮರೆಸಿ ಆವರಿಸಿದೆ ಮೋಹದಿಂದ 
ಸೆರೆಗ ಎಳೆಯುತಾ ಮಡಿಕೆ ಒಡೆಯುತಾ 
ತೋರುತಿಹೆ ಆಟ  ಮುದದಿಂದಾ  
 
ಪ್ರೀತಿಯಿಂದ ಬೇಡಿಕೊಂಬೆ ಬಾ 
ಪ್ರಭಂಜನನ ಹೃದಯದೊಳಗಿಂದ 
ಪ್ರತೀದಿನವೂ ನಿನ್ನಾರಾಧಿಸಿ  
ಪ್ರಾರ್ಥಿಸುವೆ ಸಲಹೋ ದಯದಿಂದ

ಭಾನುವಾರ, ನವೆಂಬರ್ 13, 2016

** ಜಲವಿಲ್ಲದೆ***


ಜಲವೇ  ಜೀವದ ನಿಜವಾದ ಉಸಿರು 
ಜಲವಿಲ್ಲದೆ  ಉಳಿಯುವುದೇ ಭೂಮಿಯ ಹಸಿರು  

ಭಗೀರಥನ ಪ್ರಾರ್ಥನೆಗೆ ಭೂಮಿಗೆ ಇಳಿದಿ 
ಗಂಗಾದಿ ಸಕಲ ನದಿ ತೀರ್ಥಗಳಾಗಿ ಹರಿದೀ 
ಅಗಸ್ತ್ಯರ ಅನುಗ್ರಹದಿ ಸಾಗರವಾಗಿ ಮೆರೆದಿ 
ಬಗೆಬೆಗೆಯ ಜೀವಸಂಕುಲದ ಮನೆಯಾಗಿರಿವಿಯೊ  

ಹುಟ್ಟಿದ ತಕ್ಷಣ ದೇಹ ಶುಚಿ ಮಾಡಿಸುವಿ 
ಸುಟ್ಟದೇಹದ ಬೂದಿಗೆ ಸಾರ್ಥಕತೆ ಕೊಡುವಿ 
ಊಟ, ತೀರ್ಥ, ಸ್ನಾನ,ತರ್ಪಣದಿ ನೀ ಇರುವಿ 
ಕಟ್ಟ ಕಡೆಯ ಕೊಳೆಯನ್ನು ತೊಳೆದುಬಿಡುವಿಯೋ  

ಜಡ ಪ್ರಾಣಿ ಸಮೂಹದ ದಾಹವ ತಣಿಸುವಿ 
ಕಡಿದಾದ ದಾರಿಲಿ ಜಲಪಾತವಾಗಿ ಧುಮುಕುವಿ 
ಒಡೆಯನೇ ನಾನೆಂದು ಒಣ ಜಗಳ ಹಚ್ಚುಸುವಿ 
ಅಡಿಅಡಿಗಳಲ್ಲಿ ಅಳೆದು ನಿನ್ನ ಅಳಿಸಿಕೊಳ್ಳುವಿಯೋ 

ದೇವ ಪೂಜೆಯಲ್ಲಿ ನೀನೇ  ಮೊದಲಾಗಿರುವಿ 
ಭಾವಿ ಕೆರೆ ತೊರೆ ಹಳ್ಳಕೆ ಹೊಸರೂಪ ನೀಡುವಿ 
ಭುವಿಗೆ ಹಚ್ಚ ಹಸಿರ ಸೀರೆ ಉಡಿಸಿ ನಗುವಿ 
ಭಾವನೆಗಳ ಬಿತ್ತಿ ಎಲ್ಲರ ಮನತಣಿಸುವಿಯೋ 

ಎಲ್ಲವನು ಕೊಟ್ಟು ನೀ ಉದಾರಿಯಾಗಿರುವಿ 
ಕೊಲ್ಲುತಿರುವೆವು ನಾವು ನಿನ್ನ ಮಲಿನಗೊಳಿಸಿ 
ಸಲ್ಲಿಸಿ ಗೌರವ ಪರಿಸರ ಕಾಪಾಡಿಕೊಳ್ಳದೆ ಹೋದರೆ 
ವಲ್ಲದ ಮನಸಿಂದ ಜೀವ ತೆಗೆದುಬಿಡುವಿಯೋ 

ಬುಧವಾರ, ಅಕ್ಟೋಬರ್ 19, 2016

** ಹಿಂದಿನಂತೆ **



ಹತ್ತುತಲೆಯ ರಾವಣನೇ 
ಒತ್ತಾಸೆಯ ನೀನು ಹೇರಲಾರೆ 
ಕತ್ತು ಸೀಳಿಸಿ ಹೂವನು ಸುರಿಸಿದರೆ 
ಚಿತ್ತ ಗೆಲ್ಲಲಾರೆ, ಸೀತಾ ಹೃದಯ ಪಡಿಯಲಾರೆ 

ಪ್ರೀತಿಯ ಮದದಲ್ಲಿ ಭಂದಿಸಿ ಕರೆತಂದೆ 
ಪ್ರತೀಕ್ಷಿಸುತಿಹೆ ಬರುವನು ರಾಮ ಮುಂದೆ 
ಪ್ರೇಮಾಯಣದಾ ಗಾಯಕಿ ನಾ ಅಂದುಕೊಂಡೆ 
ಪ್ರಾಯಶ್ಚಿತ್ತಕೂ ಬದುಕಿರದೆ ಸಾಯುವೆ ಕಣ್ಣಮುಂದೆ 

ಯುಗ ಯುಗಗಳು ಬಂದು ಸರಿದರೇನು 
ಯುವ ಸಮೂಹ ತೋರುತ್ತಿದೆ ರಾವಣನಂತೆ 
ಯಾವ ಸನ್ಯಾಸಿಯೂ  ಕಾಮವ  ಗೆಲ್ಲದಂತೆ 
ಯಾಕಾಗಿದೆ ಈ ರೀತಿ ಬರುವನೇ ರಾಮ ಹಿಂದಿನಂತೆ !!! 

ಬುಧವಾರ, ಅಕ್ಟೋಬರ್ 12, 2016

ಮೊಗತುಂಬಾ

ಹೆರಳಿನ ಮಧ್ಯದ ಕುಂಕುಮ ಚಂದ 
ಹಣೆಯ ಮಧ್ಯದ ಬಿಂದಿಯು  ಚಂದ್ರ 
ಹೊಳೆವ ತುಟಿಯ ಕೆಂಪಿನ ಅಂದ 
ಹೊಸ ಸೀರೆ ಸೆರಗಿದೆ ಕೆಂಬಣ್ಣದಿಂದ 

ಹುಬ್ಬು ಡೊಂಕಾಗಿದೆ ಬೀದಿಗೆ ಚಂದ್ರ 
ಹೆರಳಿಲ್ಲದ ಮುಂಗುರುಳ ಮುಖಾರವಿಂದ 
ಹಳದಿ ಲೋಹ ಆವರಿಸಿ ಮೊಗತುಂಬಾ 
ಹಿತವಾಗಿ ಮುಚ್ಚಿದೆ ರೆಪ್ಪೆ ನಾಚಿಕೆಯಿಂದ 

ಹೆಣ್ಣೆನುವೆ  ನಾನು ತುಸು ಗರ್ವದಿಂದ 
ಹಣ್ಣು ದೊರೆಯದು ಹೊಗಳಿಕೆಯಿಂದ 
ಹಲವು ರೀತಿ ಗೆಲ್ಲು ನನ್ನ ಪ್ರೀತಿಯಿಂದ 
ಹಗಲಿರಿಳು ಜೊತೆಇರುವ ಆನಂದದಿಂದ  

ಸೋಮವಾರ, ಅಕ್ಟೋಬರ್ 3, 2016

ನೆನಪಿನ ಪತ್ರ

ಖುಷಿಯಾಗಿದೆ ಪತ್ರವ ನೋಡಿ 
ಹುಸಿ ಇಲ್ಲದ ಕಿರುನಗೆಯು ಮೂಡಿ 
ರಸಿಕತೆಯ ಆ ದಿನಗಳು ಕಾಡಿ  
ಬಿಸಿಯಾಗಿದೆ ಮೈ ಏನು ಮಾಡ್ಲಿ 

ಹಸಿರು ತುಂಬಿದ ತೋಟಕೆ ಹೋಗಿ 
ಉಸಿರು ಉಸಿರಲಿ ಬೆರೆತೆ ನನಗಾಗಿ  
ಬೆಸೆತು ಹೃದಯಗಳ ಸೊಗಸಾಗಿ 
ಹೊಸತು ಹಾಡನು ಹಾಡಿದೆ ಹಿತವಾಗಿ 

ತಾಸಿಗೊಂದು ಈ ನೆನಪಿನ ಪತ್ರ 
ವಾಸಿ ಮಾಡುತಿದೆ ಹಳೆ ಗಾಯ ಮಿತ್ರ 
ತುಸು ಯೋಚಿಸದೆ ಬಂದ್ಬಿಡು  ಹತ್ರ 
ವಾಸ ಮಾಡುವ ನಲಿಯುತ ಸರ್ವತ್ರ.

ಬುಧವಾರ, ಸೆಪ್ಟೆಂಬರ್ 28, 2016

ನೀರಾಗದಿರು

ತಿದ್ದಿ ತೀಡಿದ ಹುಬ್ಬು ನಗುತಾ 
ಮುದ್ದು ಮುಖ ಕಮಲದಂತೆ 
ಎದ್ದು ಹೊಳೆಯುತಿದೆ ಕುಂಕುಮ 
ಉದ್ದ ಮುಗು ಸಂಪಿಗೆಯಂತೆ 

ಉಸಿರು ಏರುತಿದೆ ನೀರೇ 
ಹಸಿರಲಿ ಹೊಸತು ಕಂಡಂತೆ 
ಹೆಸರು ಹೇಳಿಬಿಡು ಬಾರೆ 
ಹೊಸ ರಾಗವ ನುಡಿಸಿದಂತೆ 

ಹಾಡು ಬೇಗ ಪಿಸುಗುಟ್ಟದಲೇ  
ಮಡಿದ ಹೂ ಬಾಡುವ ಮುಂಚೆ 
ಒಡನೆ ನಾಚಿ ನೀರಾಗದಿರು, ನಾ 
ಹಿಡಿದು ಕೈ ಕಳೆದುಹೋಗುವಂತೆ 

ಮಂಗಳವಾರ, ಸೆಪ್ಟೆಂಬರ್ 27, 2016

ಬರದೇ

ಕಡಲಂಚಲಿ ಕುಳಿತುರು ಹೀಗೆ 
ಕಡೆವರೆಗೂ ನೋಡುತ ಹಾಗೆ 
ಒಡಲಾಳದ ಪ್ರೀತಿ ಉಕ್ಕಿ ಬರದೇ 

ಓಡುವ ನಕ್ಷತ್ರಗಳ ಹಿಂಡು 
ಹಾಡುವ ಹಕ್ಕಿಗಳು ಬಂದು 
ಕಾಡುವ ಪ್ರೀತಿ ಮಳೆಯು ಬರದೇ 

ಆಸರೆ ಹೆಗಲನ್ನು ಕೊಟ್ಟು 
ಆಸೆಗಳ ಕನಸಗಳನ್ನ ಬಿತ್ತು ಸ- 
ರಸಮಯ ಪ್ರೀತಿ ಇರಿಳು ಬರದೇ 

ಹಸಿರಿನ ಕೈ ಬಳೆ  ತೊಟ್ಟು 
ಹಸಿ ಕುಂಕುಮ ತಿಲಕವ ಇಟ್ಟು 
ಬಿಸಿ ಹಾಲಿನ ಪ್ರೀತಿ ರಾತ್ರಿ  ಬರದೇ  

ಶುಕ್ರವಾರ, ಸೆಪ್ಟೆಂಬರ್ 23, 2016

ಗೋಲಿ ಹೊಡೆದ ಜಾಣರು


ನೆನಪು ಮರುಕಳಿಸಿದೆ ಮೆಲ್ಲಗೆ 
ಕನಸಂತೆ ಜಾರಿದೆ ಆ ಲೋಕಕೆ   -- ಪ 

ಕಣ್ಣು ತುಂಬಿದೆ ಆ ಗುರಿಯ ನೋಟವು 
ಬಣ್ಣ ಬಣ್ಣದ ದುಂಡು  ಗೋಲಿ ಆಟವು 
ಮಣ್ಣು ಮುಟ್ಟುತ್ತಾ ಗೋಲಿ ಹೊಡೆದೆವು 
ಬಕುಣ ತುಂಬಿಸಿ  ಗೋಡೆಯ ಹಾರುತ  

ಕೋಲು ಎಸೆಯುತ ಮರ ಕೋತಿ ಆದೆವು 
ಬಾಲ ಇಲ್ಲದೆಯೂ ತೆಂಗಿನಮರವೇರುತ 
ಕಾಲು ಕೈ ತುಂಬಾ ಕೊಳೆಯು ತುಂಬಲು 
ಕಾಲ ಕಾಲಕೆ ಮನೇಲಿ ಪೂಜೆ ಖಂಡಿತ  

ಏನೆ ಇದ್ದರು ಮರಳಿಬಾರವು ಆ ದಿನಗಳು 
ಏನೆ ಆದರೂ ಬಾಲ್ಯದ ನೆನಪೇ ಮಧುರವು 
ಬನ್ನಿ ಗೆಳೆಯರೆಲ್ಲ ಗೋಲಿ ಹೊಡೆದ ಜಾಣರು 
ನಿನ್ನೆ ಸಮಯವೂ ಬದುಕಲಿ ಎಂದು ಬಾರದು

ಮಂಗಳವಾರ, ಸೆಪ್ಟೆಂಬರ್ 20, 2016

ಅಪ್ಪೋತನಕ

ಏನೋ ಒಂದು ತವಕ 
ನಲ್ಲ ನಿನ್ನೆದೆ ಅಪ್ಪೋತನಕ  ... ಪ 
ದುಗುಡ ಮುಗಿಲ ತನಕ 
ಚಲ್ಲಿ ಈಗ ಮನಸು ಭಾವುಕ  .. ಆ ಪ 

ಅಪ್ಪ ಅಮ್ಮನೆಲ್ಲ ನಾ ಬಿಟ್ಟು ಬಂದೆನಲ್ಲ 
ಒಪ್ಪುವರೇ ನಿಮ್ಮ ಮನೆಯ ಮಂದಿಯಲ್ಲ 
ಹೆಪ್ಪುಗಟ್ಟಿದೆ ಹೃದಯ ಬಡಿಯುತಾನೆಯಿಲ್ಲ 
ತಪ್ಪು ಆಯಿತೇನೋ ಒಂದು ಗೊತ್ತಾಗುತ್ತಿಲ್ಲ  

ಹೆದರಬೇಡ ಚಿನ್ನ ಎಲ್ಲ ಒಳಿತು ಆಗುವುದಿನ್ನಾ 
ಎದೆಯೋಳು ಸೇರಿಹೋದೆ ನೀ ನನ್ನವಳಿನ್ನ 
ಹೃದಯ ಕಾಯುತಿತ್ತು ನೀ ಇಲ್ಲಿ ಬರುವಮುನ್ನ 
ಮೊದಲು ಒಪ್ಪಿಸುವೆ ಬಾ  ಅಪ್ಪ ಅಮ್ಮನನ್ನ 
  
ಏನು ಬೇಡ ನನಗೆ ನಿನ್ನ ಹೃದಯ ಒಂದುಬಿಟ್ಟು 
ತನು ಬಂದಿಸಿರು  ಜೀವನ ಪೂರ್ತಿ ಪ್ರೀತಿಇಟ್ಟು  
ಬಾನು ಭೂಮಿ ಬೇರೆ ಅದರೂನು ಬಿಡದಿರು ಪಟ್ಟು  
ಅನುಕೂಲ ಮಾಡಿಕೊಂಡು ತಾಳಿಯೊಂದು ಕಟ್ಟು 

ಮಂಗಳವಾರ, ಜುಲೈ 26, 2016

ರಂಭೆ ನೆನಪಾಯ್ತು

ಚಿತ್ರಗಳ  ಬಿಡಿಸಿ ಒತ್ತಾಗಿ ಅಲಂಕರಿಸಿ
ರಾತ್ರಿ  ಬಣ್ಣಗಳ ಚಲ್ಲಿ  ಗೆಜ್ಜೆ ಕುಣಿಸುತಲಿ
ಪಾತ್ರೆ ಪೊಡಗವ ತುಂಬಿ ಬೀಗುತಲಿ
ಜಾತ್ರೆಗೆ ಹೋಗಿದ್ದೆ ಎತ್ತಿನ ಬಂಡೆಯಲಿ

ಊರ ಜಾತ್ರೆಗೆ ಬಂಡಿ ಸಿಗರಿಸಿಕೊಂಡಿತ್ತು  
ಹಾರಿ ಬಣ್ಣ ಬಣ್ಣದ ಚಿಟ್ಟೆಗಳು ಬರುತಿತ್ತು
ಹರಿ  ಹಳ್ಳದ ನೀರಿನ ಸಡ್ಡಿನ  ಮುದವಿತ್ತು
ದಾರಿಯಲಿ ಹಕ್ಕಿಗಳ ಚಿಲಿಪಿಲಿ ಕಲರವವಿತ್ತು

ಹೊಂಬಣ್ಣದ ಹೋರಿಗಳು ಹಾರಿ ಓಡುತ್ತಿತ್ತು
ಹೊಂಬಾಳೆ ಕಟ್ಟಿದಾ ಗಾಡಿಯ ಎಳೆಯುತ್ತ
ರಂಭೆಯೊಬ್ಬಳ ನೋಡಿ ನಾ ಕಲ್ಲು ಹತ್ತಿಸಿದಾಗ 
ಕೆಮ್ಮಣ್ಣಲಿ ಹುದುಗಿತು ಬಂಡಿ ಗಾಲಿ ಮುರಿದು

ತಲೆಗೆ ಏಟಾಗಿ ಪ್ರಜ್ಞೆ ತಪ್ಪಿತ್ತು ಕ್ಷಣದಲ್ಲಿ
ಹಳೆಯದೆಲ್ಲ ಮರೆತು ವರುಷಗಳೆ ಆಗಿತ್ತು  
ಎಳೆಯ ಮಗಳ ಜೊತೆ ಜಾತ್ರೆಗೆ ಹೋದಾಗ
ಹಳೆಯಗಾಡಿಯ ಜೊತೆ ರಂಭೆ ನೆನಪಾಯ್ತು !

ಅವಳೇ ನನ್ನ ಬದುಕಿಸಿ ವರಸಿಯೂ  ಆಗಿತ್ತು! 

ಮಂಗಳವಾರ, ಮೇ 31, 2016

ಗಳಿಸಬೇಕಿತ್ತು

ಮಲಗಿದ ಮಂಚದಲಿ 
ತಣ್ಣನೆಯ ಗಾಳಿಯಲಿ 
ಹಳೆಯ ನೆನಪಿನ ಕನಸೊಂದ ಬಿತ್ತು 

ಕಾಲ ಚಕ್ರದಲಿ 
ಹಿಂದೆ ನಾ ಮಲಗಿದ್ದ 
ಮರದ ದಿಂಬು ಗಾಲಿ ಸರಪಳಿ ಇತ್ತು 

ರಸ್ತೆ ಮಧ್ಯದಲಿ  
ಅಂದು ಬಿದ್ದ ಕನಸಿನಲ್ಲಿ 
ಹೊನ್ನು ಮಣ್ಣು ಹೆಣ್ಣಿನ ಸಂಗವಿತ್ತು 

ಇಂದು ಅದೆಲ್ಲ ಇದೆ 
ಆದರೂ  ನಿದ್ದೆ ಬರದಾಗಿದೆ 
ಹಣವಿಲ್ಲದ ಸಮಯವೇ ಸರಿಯಿತ್ತು 

ಮೈ ಕೈ ನಡಗುತ್ತಾ 
ಹೆದರಿ ಬೆವರು ಸುರಿಸುತ್ತಾ 
ನಿದ್ದಇಂದ ದೇಹ ಉರುಳಿ ಬಿತ್ತು


ಬೆಳಸಬೇಕಿತ್ತು ಗುಣವನ್ನ 
ಅಳಿಸಿ ಹಾಕಿ ಸ್ವಾರ್ಥವನ್ನ 
ಜನರನ್ನ ನಾನು ಗಳಿಸಬೇಕಿತ್ತು 

ಸೋಮವಾರ, ಮೇ 23, 2016

ಎನೊ ಪುಳಕ

ಮಳೆ ನಿಲ್ಲುತಾ 
ಕಡಲ ಅಲೆ ಶಾಂತ 
ನೋಡು ನೀ ನಗುತ 

ಅಲೆ ತಾಗುತ 
ಮೈಯೊಳು ಎನೊ ಪುಳಕ 
ಕುಣಿ  ನೀ ಹಾರುತ 

ಡೋಣಿ  ತೇಲುತ 
ನಿಂತು ಕನಸು ಬಿತ್ತುತ್ತಾ     
ಹತ್ತು ನೀ ಸಾಗುತಾ 

ಪ್ರೀತಿ ಉಕ್ಕುತಾ 
ಮೋಹದ ಗಾಳಿ ತಾಗುತಾ    
ನಲಿ ನೀ ಕವನ ಗೀಚುತಾ  

ಕನ್ನಡ ಪ್ರಣತಿ

ಹಣತಿ ಐತಿ ಇಲ್ಲಿ ಪ್ರಣತಿ ಐತಿ 
ಹಳದಿ ಕೆಂಬಣ್ಣದ ಪ್ರಣತಿ ಐತಿ

ಹಳದಿ ಐತಿ ನೀಲಿ ಕೆಂಪು ಐತಿ 
ಬಣ್ಣ ಸವರಿ ಬಳೆವ ಹೆಣ್ಣು ಐತಿ  

ಕಷ್ಟ ಐತಿ ಇಲ್ಲಿ ಕನಸು ಐತಿ 
ಸುಖ ಬರಬಹುದೆಂಬ ಆಶಾ ಐತಿ 
ಕಲೆಯು ಐತಿ ಅಲ್ಲಿ ಬವಣೆ ಐತಿ 
ಬದುಕಿಗೆ ಬಣ್ಣ ಹಚ್ಚುವ ಕಾಯಕ ಐತಿ 

ಶಾಂತಿ ಐತಿ ಇಲ್ಲಿ ಕ್ರಾಂತಿ ಐತಿ 
ಕನ್ನಡತನ ಸಾರುವ ಬಣ್ಣ ಐತಿ

ಭಾನುವಾರ, ಮೇ 22, 2016

ಮರೆಯಲಾದೀತೇ

ಹಳ್ಳಿ ಊರಿನ ಮಧ್ಯದೊಳಗೆ 
ಹಳ್ಳದ ಸರ್ಕಾರಿ ಶಾಲೆಯಲ್ಲಿ 
ಕಳ್ಳತನದಲಿ ಸ್ವಲ್ಪ ಓದುತಿದ್ದೆ 
ಒಳ್ಳೆ ಕನ್ನಡ ಮಾಧ್ಯಮದಲಿ 

ತೇಪೆ ಹಾಕಿದ ಚಡ್ಡಿ ಏರಿಸಿ 
ಜೇಬುತುಂಬಾ ಗೋಲಿ ಸೇರಿಸಿ 
ಕೇಕೆ ಹಾಕುತ  ಆಟ ಆಡುತಿದ್ದೆ 
ಚೇಸ್ಟೆ ಮಾಡುತ ಹರುಷದಲಿ    

ಅಂತು ಇಂತೂ ಶಾಲೆ ಮುಗಿಯಿತು 
ಬಂತು ಕಾಲೇಜು ಊರು ಬಿಡಿಸಿತು  
ಮಂಗ ಚೇಸ್ಟೆ ಪೂರ್ಣ ಮಾಯವಾಗಿ  
ಕುಂತು ಓದಿದೆ ಅಂಗ್ಲ ಮಾಧ್ಯಮದಲಿ 

ಶ್ರೆದ್ದೆ ಹೆಚ್ಚಿತು ವಿಜ್ಞಾನ ವಿಷ್ಯದೊಳಗೆ 
ಬದ್ದತೆ ಮೆರೆದೆ ಪ್ರತಿ ಪರೀಕ್ಷೆಯೊಳಗೆ 
ಬಿದ್ದು ಓಡುತ ಅಂಕಗಳು ಬಂದುವು 
ಸದ್ದುಮಾಡಿ ಸ್ನಾತಕೋತ್ತರ ಪದವಿಲಿ  

ಗಣಕ ತಂತ್ರದ ಗರಡಿಯೊಳಗೆ 
ಇಣುಕಿನೋಡಿ ಪರಿಣಿತಿಯ ಪಡೆದು 
ಹಣದ ಹೊಳೆಯು ಕೆಲಸ  ಗಿಟ್ಟಿಸಿ 
ಗಣಗಣ ದೇಶ ವಿದೇಶ ತಿರುಗಿದೆ 

ಗಣಕ ಯಂತ್ರವು ಕೈಯ ಕೊಟ್ಟು 
ಸಮುದ್ರದೊಳು ವಿಮಾನವು ಬಿತ್ತು 
ನೀರಿನೊಳಗೆ ಮುಳುಗುತಿದ್ದೆ 
ಎಫ್ ಒನ್ ಎಫ್ ಒನ್ ಎನ್ನುತಾ 

ಗಣಕ ತಂತ್ರವು ತೇಲುತಿರಲು 
ಮೊಣಕೈಎತ್ತಿ ನಾ ಕೂಗುತಿರಲು  
ಪ್ರಾಣ ಉಳಿಸಿದ ಹಳ್ಳಿ ಹೋಕನೊಬ್ಬ 
ಪಣವ ಇತ್ತು ತನ್ನ ಜೀವನ !   

ಎಫ್ ಒನ್ ಎಂದರೆ ಸಹಾಯ ಎಂದು 
ಯಾರೋ ಹೇಳಿದ್ದು ನಿನಪಿಗೆ ಬಂದು 
ನೀರಿನಿಂದ ಎಳೆದು ತಂದು  ಹೇಳಿದ 
ಮರೆಯದೇ ಮಾತಾಡು ಮೊದಲು ಕನ್ನಡ

ಮರೆತು ಹೋಗಿವೆ ನಮ್ಮ ಆಟ 
ಮರೆಯ ಲಾಗದು  ನಮ್ಮ ಪಾಠ 
ಮರೆಯ ಬಾರದು ನಮ್ಮ ಕನ್ನಡ 
ಮರೆಯಲಾದೀತೇ ಸಹಾಯದಾತನ 

ಮಂಗಳವಾರ, ಏಪ್ರಿಲ್ 19, 2016

*ಕಾಲ ಚಕ್ರ**



ಮಲಗಿದ ಮಂಚವು ನಡುಗಿತು 
ಹೊಸ ಕಪ್ಪು ಬಿಳಿಪು ಕನಸಲ್ಲಿ 
ಹಳೆಯ ದಿನಗಳು ಕಣ್ಮುಂದೆ 
ಹಾದು ನೀರೂರಿತು ಕಣ್ಣಂಚಿನಲಿ 

ಚಳಿ ಮಳೆ ಬಿಸಿಲುಲಿ ದಿನ ದುಡಿಯುತಲಿದ್ದೆ 
ಮರದ ಚಕ್ರ ಸರಪಳಿ ಚಿಕ್ಕ ಗಾಡಿ ಜೊತೆಯಲ್ಲಿ 
ನಡು ರಸ್ತೆಯಲಿ ಸುಖ ನಿದ್ರೆ ಮಾಡುತಲಿದ್ದೆ 
ದಣಿದ ದೇಹದ ಬೆವರು ಗಾಳಿಗೆ ತಂಪಾಗುತಲಿ ೧

ಬಿಸಿಲಲಿ ಧಗೆಗೆ ಹಗಲ ಕನಸೊಂದು ಬಿದ್ದಿತು 
ಸುಂದರ ಅರಮನೆ ರಾಣಿಯ ಜೊತೆಯಲ್ಲಿ 
ಮೃಷ್ಟಾನ್ನ ಭೋಜನಮಾಡಿ ಬೀಡ ಹಾಕುತ 
ಕುಳಿತಿದ್ದೆ ಸುಂದರ ಸಖಿಯರು ಪಲ್ಲಂಗದಲಿ 

ತಿರುಕನ ಕನಸು ನನಸಾಗುತ ಹೋಯಿತು 
ದಿನ ಕಳೆದಂತೆ ಕಷ್ಟ ಪಟ್ಟು ದುಡಿಯುತಲಿ 
ಹೊಸ ಬಟ್ಟೆ ಉಟ ಮನೆ ವಾಹನ ಬಂತು 
ಬೆಳೆದಂತೆ ಊರು ಆಸೆಯು ಬೆಳೆಯುತಲಿ 

ವ್ಯಾಪಾರದಿ ಮೋಸವು ಇಣುಕುತ ಹೊಕ್ಕಿತು 
ಗಳಿಸಿ ಹೆಣ್ಣು ಹೊನ್ನು ಮಣ್ಣು ದಿನಕಳೆಯುತಲಿ 
ತಂಪು ಗಾಳಿಯ ಮಧ್ಯ ಮೆದು ಮಂಚವಿದ್ದರೂ 
ಬಾರದಾಗಿದೆ ನಿದ್ದೆ ಚಿಂತೆ ತುಂಬಿದ ಮನಸಲ್ಲಿ 

ಕಾಲ ಚಕ್ರವು ತಿರುಗಿ ಮರುಗಿದೆ ನಿದ್ರೆಯಲ್ಲಿ
ಆ ಹಳೆಯ ಕನಸು ಇಂದು ತುಂಬಾ ಕಾಡುತಿದೆ
ಅಂದಿನ ನೀಯತ್ತು ಉಳಿಸಿಕೋ ಇವತ್ತು ಎಂದು 
ಹೊಸ ಕನಸಲ್ಲಿ ಹಳೆಯ ಕನಸು ಎಚ್ಚರಿಸುತಿದೆ

ಶುಕ್ರವಾರ, ಏಪ್ರಿಲ್ 1, 2016

ನೋಡಬಾರದೇನು

ನೀ ಇಲ್ಲದೆ ಎಲ್ಲಿಯೂ ಹೋಗಲಾರೆ ಇನಿಯ 
ಈ ಮುನಿಸು ಬಿಟ್ಟು ಬರಬಾರದೇ ನನ್ನ ಸನಿಹ 

ನಿನ್ನ ನೋಡಲಾರೆ  ಹೆದರಿಕೆ ತುಂಬಾ ಇಂದು 
ಕಾದಿರುವೆ ಮಾತನಾಡಿಸು ಬೇಗ ಜೊತೆ ಬಂದು 
ಯಾರು ಮನ ಕದಡಿದರೋ ನನಗೇನು ಗೊತ್ತು 
ಬಿಟ್ಟು ಇರಲಾರೆ ಬಂದು ಕೊಡಬಾರದೇ ಮುತ್ತು 

ಮುರಿದು ಹೋಗಿದೆ ಮನಸು ಒಣಗಿದ ರೆಂಬೆಯಂತೆ 
ಹೇಳಿಬಿಡು ಒಮ್ಮೆ  ಏನಿದೆ ಕಾಡುವ ಆ ಚಿಂತೆ 
ಪ್ರೀತಿ ಎಲ್ಲಿ ಹೋಯಿತು ಉದುರಿದ ಎಲೆಗಳಂತೆ 
ಎಲ್ಲ ಮರೆತು ಬಂದುಬಿಡು ತಂಗಾಳಿ ಬೀಸಿದಂತೆ
 
ಕಣ್ಣೇರು ಹರೆಯುತಿದೆ ಕಾಣಲಾರೆಯಾ ನೀನು 
ಕಣ್ಣಲ್ಲಿ ಕಣ್ಣು ಇಟ್ಟು ಒಮ್ಮೆ ನೋಡಬಾರದೇನು 
ಹೃದಯದ ಮಿಡಿಯುತಿದೆ ಕೇಳಲಾರೆಯ ನೀನು 
ಹೊಂದಿಕೊಂಡು ಮೊದಲಿನಂತೆ ಬಾಳಬಾರದೆನು 
:- ಪ್ರಭಂಜನ 

ಶುಕ್ರವಾರ, ಮಾರ್ಚ್ 25, 2016

ಹಂಚಿಕೊಳ್ಳುವುದಕ್ಕೆ

ಯಾರದೇನು ಭಯವಿಲ್ಲ 
ನಿನ್ನ ಪ್ರೀತಿಸುವುದಕ್ಕೆ 
ಯಾರ ಅಪ್ಪಣೆಯೂ ಬೇಕಿಲ್ಲ 
ನಿನ್ನ ಹೊಗಳುವುದಕ್ಕೆ 
ಬಾಯಾರಲೇಬೆಕಿಲ್ಲ ನಿನ್ನನು 
ನನ್ನೊಳು ಇಳಿಸುವುದಕ್ಕೆ 

ನೀ ಇಲ್ಲದೆ ನಾನಿಲ್ಲ ಎಂದು 
ಎಂದೂ ಭಾವಿಸಿಯೇ ಇಲ್ಲ 
ನೀ ಸಿಗುವೆ ಚಿತ್ರ ವಿಚಿತ್ರದೊಳು 
ಭುವಿ ಆಗಸ  ಸುರಾ ಲೋಕದೊಳು 
ಭಾವನೆಗೆ ತುಸು ಬೆರಗಾಗಿ ನಿಂತು 
ಕಾಮನೆಗೆ ಮೂರ್ತತೆ ಕೊಡುವುದಕ್ಕೆ   

ನೀನೋಬ್ಬಳು ಇದ್ದು ಬಿಡು ಸಾಕು 
ಕಂಡ ಕನಸು ನನಸಾಗುವುದಕ್ಕೆ 
ಅರಿದು ಕುಡಿದು ಮತ್ತೇರಿಸಿಕೊಂಡು  
ಪದಗಳ ಜೊತೆ ತೇಲಾಡುವುದಕ್ಕೆ 
ಬರೆದು ಕುಣಿದು ಎದೆ ಏರಿಸಿಕೊಂಡು 
ಹಗಲಿರುಳು ತಬ್ಬಿ ಮುತ್ತಿಡುವುದಕ್ಕೆ 


ನೀನಿರುವೆ ಕವಿಯ ಹೃದಯದೊಳು 
ಆಗಾಗ ಜಾರುವೆ ಈ ಕೈಬೆರಳೊಳು
'ಕನ್ನಡ'  ಪದಗಳ ಜೊತ ಆಟವಾಡಿ  
ಆರ್ತನಾಗಿ ನಿನ್ನ ಆರಾಧಿಸುವುದಕ್ಕೆ 
ನನ್ನ  ನೀ ಹುಚ್ಚನೆಂದರು ಪರವಾಗಿಲ್ಲ 
ಎಲ್ಲರ ಜೊತೆ ದಿನವೂ ಹಂಚಿಕೊಳ್ಳುವುದಕ್ಕೆ
-- ಪ್ರಭಂಜನ :   (ಇಂದು ರಚಿಸಿದ 'ವಿಶ್ವ ಕವಿ ದಿನದ' ವಿಶೇಷ )

ಗುರುವಾರ, ಮಾರ್ಚ್ 17, 2016

ತಾಳ್ಮೆಇರಲಿ

ನೋಡು ಮಗು ಇಲ್ಲಿ ನೋಡು 
ತಿಳಿ  ಹೇಳುತಿದೆ ಸುತ್ತ ಪ್ರಕೃತಿ 

ಏರುವ ಅಲೆಗಳ ಜೊತೆಯಲಿ 
ಉರಿದು ಬೊಬ್ಬಿರಿದರೂ ಇರುಳಲಿ 
ಪ್ರಶಾಂತವಾಗಿದೆ ಕಡಲ ಒಡಲು 

ಗಾಳಿಯ ಸೇಳತಕ್ಕೆ ಹೆದರುತಲಿ 
ದೋಣಿ ನಡೆಸಿದರೂ ಇರುಳಲಿ 
ಮೌನವಾಗಿದೆ ಚಲಿಸದಂತೆ ನಿಂತು 
  
ಗುಡುಗು ಸಿಡಿಲು ಭೊರ್ಗರೆಯುತಲಿ 
ಮಳೆ ಅರ್ಭಟಿಸಿದರೂ ಇರುಳಲಿ  
ನಿರ್ಮಲವಾಗಿದೆ ತಿಳಿನೀಲಿ ಬಾನು 

ಮನಸು ಕಡಲು ಕಡೆದಂತೆ 
ಕನಸುಗಳು ತೇಲುವ ದೂಣಿಯಂತೆ 
ಕಷ್ಟಗಳು ಮಳೆ ಮೋಡದಂತೆ 

ಎಲ್ಲವೂ ಬಂದು ಹೋಗುವವು  ತಾಳ್ಮೆಇರಲಿ  
ಎಲ್ಲಕ್ಕೂ ಕೊನೆಯುಂಟು!  ಶಾಂತಿಇರಲಿ! 

ಬುಧವಾರ, ಫೆಬ್ರವರಿ 17, 2016

*** ಜೇಡರ ಬಲೆ ***


ಹಸಿವ ನೀಗಲು ಬಲೆಯ ಹೆಣೆವೆ ನಾನು 
ಹೊಸತು ಕಲೆಯ ನೋಡಿವಿರೇ ಬಂದು ನೀವು 

ಎಂದಿನಂತೆಯೇ ದಿನವು ಕಾಯಕವ ಮಾಡುವೆನು 
ತುಂಬಿಸಲು ಇರುವ ಸಣ್ಣ ಹೊಟ್ಟೆ  ಕ್ಷಣವೂ ಬಿಡದೇ 
ಯಾರು ಎನೇ ಹೇಳಿದರು ದುಡಿವೆ ಬಿಡದಂತೆ 

ಎಲ್ಲ ನೋಡಲಿ ಎಂದು ಬದುಕ ಸವಿಸಿ ಕಟ್ಟುವುದಿಲ್ಲ 
ಬಲ್ಲೆ ಹೆಣೆಯುವುದು  ದಿನನಿತ್ಯದ ಧರ್ಮ ನನಗೆ 
ಯಾರು ಬಲೆ ಕೆಡೆಸಿದರು ನನಗಿಲ್ಲ  ಚಿಂತೆ  

ಶಾಲೆ ಕಲಿಸುವುದಿಲ್ಲ ಯಾರಿಂದ ಕೌಶಲ್ಯ ಪಡೆದಿಲ್ಲ 
ಒಲ್ಲೆನೆಂದರು ಮೈಗೂಡಿದೆ ಈ ತಂತ್ರ ಹುಟ್ಟಿನಿಂದಲೇ  
ಯಾರು ಬೆಲೆ ಕೊಡುವರು ಈ ಪರಿಪೂರ್ಣತೆಗೆ ಎಲ್ಲರಂತೆ? 

ಬುಧವಾರ, ಫೆಬ್ರವರಿ 10, 2016

ನಾಲ್ಕುತಂತಿ

ನಾಲ್ಕುತಂತಿಯ ಬಿಗಿದು 
ರಾಗ ಶ್ರುತಿ ಸರಿಪಡಿಸಿ  
ಬಿಲ್ಲುಹಿಡಿದು ನೀ ನುಡಿಸು 
ಹೃದಯ ಲಯದ ಜೊತೆಗೆ 

ಸುಸ್ವರಗಳನು ಕೊಟ್ಟಿರುವೆ 
ಸ್ವಲ್ಪ ಪ್ರೀತಿ ಹರಿ ಬಿಟ್ಟಿರುವೆ 
ಮೀಟಿಬಿಡು  ಹೃದಯವನು 
ಕೊಟ್ಟ ಗುಲಾಬಿ ಹೂ ಜೊತೆಗೆ 

ಪಿಟೀಲು ಸ್ವರ ನುಡಿದಂತೆ 
ಹೃದಯ ನಿನಾದ ಸೂಸುತಿದೆ   
ಕೆಂಗುಲಾಬಿ ದಳಗಳಂತೆ   
ರಕ್ತ ಚಲಿಸಿ ಒಳಗೆ ಹೊರಗೆ

ತಾಳಲಾರೆ ಪ್ರೀತಿ ಏರಿಳಿತ 
ಬಾಳಲಾರೆವಾ ಕೊನೆತನಕ 
ಹಾಳುಮಾದಡಿರು ಈ ತವಕ 
ಬಾ ಪೂರ್ಣಚಂದ್ರನ ಜೊತೆಗೆ 

ಶುಕ್ರವಾರ, ಜನವರಿ 29, 2016

ದೂರದ ಸಾಧನೆ


ಓಡುತ ಮರಳಲಿ ನಲಿಯುತ ಆಡುವ 
ಸೂರ್ಯನು ಮುಳುಗುವ ಸಮಯದಲಿ 
ಚಿಲಿಪಿಲಿ ಗುಟ್ಟುತ ಕಲರವದಿ ಹರಾಡುವ  
ಹಕ್ಕಿಗಳಂತೆ ಮನೆ ಸೇರುವ ಹರುಷದಲಿ 

ತಂಪಿನ ತಂಗಾಳಿಗೆ ಚಲಿಸುತ ಬರುವ 
ಮೋಡವು ಚಿತ್ತಾರ ಬಿಡಿಸಿದೆ ಅಂಬರದಲ್ಲಿ 
ಆಡುತ ಆಡುತ ಕುಣಿಯುವ ಜೊತೆಯಲಿ  
ಹೊಳೆಯುವ ಸಂಜೆ ಸೂರ್ಯ ಕಿರಣದಲಿ 

ಹೆಡೆಯನು ಎತ್ತಿ ಏರುತ ಇಳಿಯುತ 
ಗಾಳಿಪಟ ತೇಲಿದೆ ಹಾರಿದೆ ಮುಗಿಲಲ್ಲಿ 
ದಾರವ ಹಿಡಿಯುತ  ಓಡುತ ಓಡುತ 
ಹಾರಿಸುವೆವು ಹೊಸ ಕನಸು ಆಗಸದಲ್ಲಿ  

ದೂರದ ಬೆಟ್ಟ ನಿಂತಿದೆ ಸುಮ್ಮನೇ 
ನೋಡುತ ನಮ್ಮನು ವಿಸ್ಮಯದಲ್ಲಿ 
ದೂರದ ಸಾಧನೆ ಮಾಡಿಯೇ ತಿರುವೆವು 
ಎನ್ನುವ ಸಂದೇಶ ಸಾರುವೆವು ಇರುಳಲ್ಲಿ

ಬುಧವಾರ, ಜನವರಿ 13, 2016

ಸ್ವರ್ಗದ ದಾರಿ

ಮಬ್ಬಿನ ಮಂಜು ಮುಂಜಾವಲಿ ಬಂತು 
ಇಬ್ಬನಿ ಮಿನುಗಿದೆ ಹಸಿರಲಿ  ನಿಂತು
ತಬ್ಬಿ ಭೂಮಿಯ ಉಲ್ಲಾಸದಿ ಬೆರೆತು  
ಉಬ್ಬಿಸಿ  ಮನಸು ಹೊಸ ಹುರುಪವ ತಂತು 

ಕೊನೆ ಇರದಾ ದಾರಿಗೆ ಬೇಲಿಯ  ಬಿಗಿದು
ಮನದಲಿ ತುಂಬಿದ ಕೊಳೆಯನು ತೊಳಿದು 
ಕಾನನದಂಚಿಗೆ ಕಂಬ ತಂತಿಯ ಎಳೆದು 
ಬಾನಿಗೆ ಕಳುಸುವ ಸಂದೇಶವು ಹೊಸದು  

ಸ್ವರ್ಗದ ದಾರಿಯು ಹೊಳೆಯುತ ನಿಂತು 
ನಿರ್ಭಯ ಲೋಕಕೆ ಕೈಬೀಸಿ ಕರೆಯಿತು 
ಸ್ವಾರ್ಥವಿಲ್ಲದೆ ಸಾಧನೆ ಮಾಡಿದವರಿಗೆ 
ದುರ್ಗಮವಿಲ್ಲದ ಹೊಸ ದಾರಿ ತೋರಿಸಿತು