ಭಾನುವಾರ, ಮೇ 22, 2016

ಮರೆಯಲಾದೀತೇ

ಹಳ್ಳಿ ಊರಿನ ಮಧ್ಯದೊಳಗೆ 
ಹಳ್ಳದ ಸರ್ಕಾರಿ ಶಾಲೆಯಲ್ಲಿ 
ಕಳ್ಳತನದಲಿ ಸ್ವಲ್ಪ ಓದುತಿದ್ದೆ 
ಒಳ್ಳೆ ಕನ್ನಡ ಮಾಧ್ಯಮದಲಿ 

ತೇಪೆ ಹಾಕಿದ ಚಡ್ಡಿ ಏರಿಸಿ 
ಜೇಬುತುಂಬಾ ಗೋಲಿ ಸೇರಿಸಿ 
ಕೇಕೆ ಹಾಕುತ  ಆಟ ಆಡುತಿದ್ದೆ 
ಚೇಸ್ಟೆ ಮಾಡುತ ಹರುಷದಲಿ    

ಅಂತು ಇಂತೂ ಶಾಲೆ ಮುಗಿಯಿತು 
ಬಂತು ಕಾಲೇಜು ಊರು ಬಿಡಿಸಿತು  
ಮಂಗ ಚೇಸ್ಟೆ ಪೂರ್ಣ ಮಾಯವಾಗಿ  
ಕುಂತು ಓದಿದೆ ಅಂಗ್ಲ ಮಾಧ್ಯಮದಲಿ 

ಶ್ರೆದ್ದೆ ಹೆಚ್ಚಿತು ವಿಜ್ಞಾನ ವಿಷ್ಯದೊಳಗೆ 
ಬದ್ದತೆ ಮೆರೆದೆ ಪ್ರತಿ ಪರೀಕ್ಷೆಯೊಳಗೆ 
ಬಿದ್ದು ಓಡುತ ಅಂಕಗಳು ಬಂದುವು 
ಸದ್ದುಮಾಡಿ ಸ್ನಾತಕೋತ್ತರ ಪದವಿಲಿ  

ಗಣಕ ತಂತ್ರದ ಗರಡಿಯೊಳಗೆ 
ಇಣುಕಿನೋಡಿ ಪರಿಣಿತಿಯ ಪಡೆದು 
ಹಣದ ಹೊಳೆಯು ಕೆಲಸ  ಗಿಟ್ಟಿಸಿ 
ಗಣಗಣ ದೇಶ ವಿದೇಶ ತಿರುಗಿದೆ 

ಗಣಕ ಯಂತ್ರವು ಕೈಯ ಕೊಟ್ಟು 
ಸಮುದ್ರದೊಳು ವಿಮಾನವು ಬಿತ್ತು 
ನೀರಿನೊಳಗೆ ಮುಳುಗುತಿದ್ದೆ 
ಎಫ್ ಒನ್ ಎಫ್ ಒನ್ ಎನ್ನುತಾ 

ಗಣಕ ತಂತ್ರವು ತೇಲುತಿರಲು 
ಮೊಣಕೈಎತ್ತಿ ನಾ ಕೂಗುತಿರಲು  
ಪ್ರಾಣ ಉಳಿಸಿದ ಹಳ್ಳಿ ಹೋಕನೊಬ್ಬ 
ಪಣವ ಇತ್ತು ತನ್ನ ಜೀವನ !   

ಎಫ್ ಒನ್ ಎಂದರೆ ಸಹಾಯ ಎಂದು 
ಯಾರೋ ಹೇಳಿದ್ದು ನಿನಪಿಗೆ ಬಂದು 
ನೀರಿನಿಂದ ಎಳೆದು ತಂದು  ಹೇಳಿದ 
ಮರೆಯದೇ ಮಾತಾಡು ಮೊದಲು ಕನ್ನಡ

ಮರೆತು ಹೋಗಿವೆ ನಮ್ಮ ಆಟ 
ಮರೆಯ ಲಾಗದು  ನಮ್ಮ ಪಾಠ 
ಮರೆಯ ಬಾರದು ನಮ್ಮ ಕನ್ನಡ 
ಮರೆಯಲಾದೀತೇ ಸಹಾಯದಾತನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ