ಶುಕ್ರವಾರ, ಡಿಸೆಂಬರ್ 9, 2022

ಕೋಟಿ ಕಂಠ

ಹಾಡುವ ಬನ್ನಿ ಕನ್ನಡಿಗರೆಲ್ಲಾ 
ಕನ್ನಡ ನುಡಿಯ ಜಾತ್ರೆಯಲಿ 

ಕೋಟಿ ಕೋಟಿ ಕನ್ನಡಿಗರೆಲ್ಲರೂ ಸೇರಿ 
ಹಾಡುವ ನಾಣ್ಣುಡಿ ಒಂದೇ ಧ್ವನಿಯಲ್ಲಿ  

ಕನ್ನಡ ನಾಡಿಗೆ ಪರಧಿಯು  ಇದ್ದರೂ 
ಭಾಷೆಯು ಸಾಗರದಾಚೆಗೂ ಪಸರಿಸಿದೆ 
ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ 
ಮಿಡಿಯದೇ ಹೃದಯ ನುಡಿದ ಮೊದಲ್ನುಡಿಗೆ 

ಜಾತಿ ಕುಲ ಆಚರಣೆಗಳು ಬೇರೆಯಾದರೂ 
ಕನ್ನಡ ನಮ್ಮೆಲ್ಲರ ತಾಯ್ನುಡಿಯು 
ವಿವಿಧ ದೇಶದಗಳ ಭಾಷೆ ಕಲಿತರು    
ಕನ್ನಡವಿರಲಿ ನಿತ್ಯ ಬಾಯ್ನುಡಿಯು 
  
ಕನ್ನಡ ತೇರು ಸಾಗುತ್ತಲೇ ಇರಲಿ 
ಎಳೆಯುವ ಬನ್ನಿ ಹಾಡಿನ ರೂಪದಲಿ 
ಕೋಟಿ ಕಂಠದ ಧ್ವನಿ ಮುಗಿಲೆತ್ತರ ಸಾಗಿ 
ಕನ್ನಡ ಸ್ವರ್ಗ ಲೋಕಗಳ ತಲುಪಿಬಿಡಲಿ  

ಕನ್ನಡ

 ಗಿಳಿಯೇ ಗಿಳಿಯೇ ಮುದ್ದಿನ ಗಿಳಿಯೇ 
ಹಾರುತ ಎಲ್ಲಿಗೆ  ಹೋಗಿರುವೆ 

ನಿನ್ನಯ ಕನ್ನಡ ಮಾತನು ಕೇಳಲು  
ಕಾತರದಿ  ಕಾಯುತ ಕುಳಿತಿರುವೆ 

ಮೂಡಣ ಪಡುವಣ ಬಡವಣ ತೆಂಕಣ 
ಗಡಿಗಳ ತಾಣಕೆ  ಹೋಗಿರುವೆ 
ನೋಡುತ ನಲಿಯುತ ಹಾರುತ ಆನಂದದಿ 
ಕಣ್ತುಂಬಿ  ಉಲ್ಲಾಸದಿ ಬರುತಿರುವೆ 

ಗೋಳಗುಂಬಜ ಮನ ಸೆಳೆಯುತಲಿ   
ನಿನ್ನ ದನಿಗೆ ಪ್ರತಿದನಿ ನೀಡುತಿದೆ  
ದಾಸರ ಶರಣರ ವಚನ ಸಾಹಿತ್ಯ 
ಬದುಕಿನ ಪರಿ ಪಾಠ ಸಾರುತಿವೆ  

ಕೃಷ್ಣ ಭೀಮಯರು ತುಂಬಿ ಹರಿಯುತಲಿ 
ಧರೆಗೆ ಸೀರೆಯ ಉಡುಸುತಿವೆ 
ಬಾದಾಮಿ ಐಹೊಳೆ ಗುಹಾ ದೇವಾಲಯ 
ಚಾಲುಕ್ಯರ ಇತಿಹಾಸ ತಿಳಿಸುತಿದೆ 

ವಿಜಯನಗರ ಕಲ್ಲಿನ ತೇರಿನಲ್ಲಿ  
ಸಂಗೀತ ದುಂದುಭಿ ಮೊಗಳುತಿದೆ 
ತುಂಗಭದ್ರ-ತಟ ಹನುಮನ ಹಂಪೆಯು 
ವೈಭವ ಸಾಮ್ರಾಜ್ಯದ ಕಥೆ ಹೇಳುತಿದೆ 

ಕಿತ್ತೂರ ಚನ್ನಮ್ಮ ರಾಣಿ ಒಬಕ್ಕ 
ಒನಕೆ ಓಬವ್ವ ನಮ್ಮ ನಾಡಿನಾ ಹೆಮ್ಮೆ  
ಗಂಡು ಮೆಟ್ಟಿದಾ ನಾಡು ಕರ್ನಾಟಕ 
ಕುಂದ, ಫೆಡೆ, ಮಿರ್ಚಿ  ತಿನಿಸುತಿದೆ 

ಹೊರನಾಡು ಅನ್ನಮ್ಮ  ಶೃಂಗೇರಿ ಶಾರದೆ 
ಕೊಲ್ಲೂರು ಮೂಕಾಂಬಿಕೆ ಹರಸುತಿಹೆ  
ಬೇಳೂರು ಹಳೇಬೀಡು ಸೋಮನಾಥಪುರ 
ಮೇರು ಶಿಲ್ಪಿ ಕಲೆಯಲಿ ಹೊಳೆಯುತಿವೆ 

ಪಶ್ಚಿಮ ಘಟ್ಟಗಳ ನದಿ ಸಾಗರದಂಚಲಿ 
ಜಲಪಾತ ಬೆಟ್ಟಸಾಲು ಕಣ್ಣ್ ಸೆಳೆದಿವೆ 
ದೈವಗಳ ನಿತ್ಯ ಆರಾಧನೆಯಲಿ 
ಪ್ರಸಾದ, ದಾಸೋಹ ನೆಡೆಯುತಿವೆ 

ಕೊಡಗಲಿ ಧರೆಗಿಳಿದು ಜೀವನಾಡಿಯಾಗಿ 
ಹರಿವಳು ಪಡುವಣದಲೆಲ್ಲಾ ಕಾವೇರಿ 
ಬೆಂಗಳೂರು ಹೆಸರಾ ಮೈಸೂರು ದಸರಾ 
ಬೆಳಗುತಿದೆ ಇಂದಿಗೂ  ಜಯಭೇರಿ 

ಕನ್ನಡ ನಾಡಿದು  ಕನ್ನಡ ನುಡಿಯಿದು 
ಸಂಸ್ಕಾರದ ಸಂಸ್ಕೃತಿ ತವರೂರು  
ಕನ್ನಡ ಕನ್ನಡ ಕನ್ನಡ ಎನ್ನುತ  
ಮಿಡಿಯುತಿದೆ ನೋಡು ನನ್ನೆದೆಯು  

ಬಿಡಿಸಲಾಗದು

ಕಳೆದು ಹೋಗದಿರು ಮನವೇ 
ಕ್ರೂರ ಮಾತುಗಳ ಆರ್ಭಟಕೆ  \ ಪ \

ಕಾಣದಾಗಿದೆ ಅರಿಯೆ ಮುಂದೆ ದಾರಿ   
ಕಡೆಯಲೇನಿಹುದೊ ಇರಬಹುದು  ಕವಲುದಾರಿ \ ಆ ಪ \

ಕದಡಿದ ಕೆರೆಯಂತೆ ಕೆಸರಾಗಿದೆ ಮನಸ್ಸು 
ಕಾರಣ ಕ್ಷುಲ್ಲಕ  ಏಕಿಷ್ಟು ಮುನಿಸು 
ಕಮರಿ ಹೋಗಿದೆ ಕಂಡ ಎಲ್ಲಾ ಕನಸು 
ಕಲ್ಲಿನಂದದಿ ಜೀವಿಸಿದರೆ ಏನು ಸೊಗಸು \೧\

ಕೊಲ್ಲದಿರು ಮಾತೆಂಬ ಬಾಣಗಳ ಹಾಕಿ 
ಕೊರೆದು ಹೋಗಿದೆ ಹೃದಯ ಬಾಣಗಳು ತಾಕಿ 
ಕಟ್ಟಿಕೊಂಡು ಹೋಗುವುದೇನಿಲ್ಲ ಇಲ್ಲೇ ಬಿಸಾಕಿ 
ಕೊಟ್ಟುಬಿಡು ಒಮ್ಮೆ ಪ್ರೀತಿ ನಗುವಿನ ಚಟಾಕಿ  \೨\

ಕಳೆದ ಸಮಯ ಎಂದೂ ಮತ್ತೆ ಬಾರದು 
ಕ್ಷಣ ತಪ್ಪಿದರೆ ಮುಂದೆ ಜೀವನ ಸಾಗದು 
ಕಾಳಗದಿಂದ ಏನು ಸಾಧಿಸಲು ಆಗದು 
ಕಟ್ಟಿಡು ಪ್ರೀತಿಯ ನಂಟು ಅದು ಬಿಡಿಸಲಾಗದು \೩\

*ಕಡಲೆ ಪರಿಷೆ*

ನಗರದೊಳ ಹಳ್ಳಿಯ  
ಕಡ್ಲೆ ಪರಿಷೆಗೆ  ಬನ್ನಿ 

ಕಡ್ಲೆ ಪಿಪಿ ಬಲೂನು 
ಚಿಣ್ಣರೆ ಕೊಳ್ಳ ಬನ್ನಿ
 
ಹಿಂದೆ ಗುಡ್ಡದ ಸುತ್ತಾ 
ಕಡಲೆ ಪೈರು ಇರುತಿತ್ತು 
ಕೊಯ್ಲು ಮುಂಚೆ ಕಡ್ಲೆ 
ತಿಂದು ಹೋಗುತ್ತಿತ್ತು ಎತ್ತು 

ಬೇಡಿದರು ದೊಡ್ಡ ಬಸವಗೆ  
ಕಡಲೆ ನೈವೇದ್ಯದ ಹರಕೆ 
ನೆಡೆಸಿದರು ಬಸವನಗುಡಿಯಲ್ಲಿ 
ಬಿಡದೆ ಇಂದಿಗೂ ಕಡಲೆ ಪರಿಷೆ 

ದೊಡ್ಡ ಬಸವಗೆ ಕಡಲೆ 
ದೊಡ್ಡ ಗಣಪಗೆ ಕಡಲೆ 
ದೊಡ್ಡ ಸಣ್ಣ ಉದ್ದಾ ಕಡಲೆ 
ದುಡ್ಡುಕೊಟ್ಟು ಕೊಳ್ಳಿ ಪರಿಷೆಯಲ್ಲಿ  

ಉಯ್ಯಾಲೆ ಗಿರಿಕಿನಿ ಕುದುರೆ 
ಕೈಯಲ್ಲಿ ಕಾಸಿನ ಕುದುರಿ 
ಬೆಂಡು ಬತ್ತಾಸು ಜಿಲೇಬಿ   
ತಿಂಡಿ ತಿಂದು ನಲಿಯ ಬನ್ನಿ 

ರಸ್ತೆ ಪೂರ್ತಿ ಡಾಂಬಾರು 
ಹಳ್ಳಿ ವಾತಾವರಣ ನೋಡು 
ಎತ್ತ ನೋಡಿದರೂ ಬೆಳಕಿನ 
ಕಾರ್ತೀಕ ದೀಪೋತ್ಸವ ನೋಡ ಬನ್ನಿ  

ವರುಷಕ್ಕೊಮ್ಮೆ ಪರಿಷೆ 
ಹರುಷಕ್ಕೊಮ್ಮೆ  ಜಾತ್ರೆ 
ಹರಸುವನು ಗಣಪ ಬಸವ 
ಕೊರೆವ ಚಳಿಯಲ್ಲಿ ಸುತ್ತಾಡುವ ಬನ್ನಿ 

ಬುಧವಾರ, ಅಕ್ಟೋಬರ್ 12, 2022

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ
ನಾನು ಹುಟ್ಟಿರಲಿಲ್ಲ

ಹುಟ್ಟಿದ ಕ್ಷಣದಿಂದಲೇ  
ಅನುಭವಿಸಿದೆ  ಸ್ವಾತಂತ್ರ್ಯ, 
ತ್ಯಾಗ, ಬಲಿದಾನದ, ಅರಿವಿರಲಿಲ್ಲ 

ಇತಿಹಾಸ ತಿಳಿಸುತ್ತೆ !

ಪರಕೀಯರು ನುಸಿಳಿದರು ದೇಶಕ್ಕೆ ಬೆಕ್ಕಿನಂತೆ,  
ಹಿಡಿದರು ಮೋಸದಿಂದ ಆಡಳಿತ  ಕಪಿಮುಷ್ಟಿಯಂತೆ,  
ದೇಶ  ನಮ್ಮದು, ಸಂಪತ್ತು ನಮ್ಮದು   
ದೋಚಿ ಸಾಗಿಸಿದರು, ಕಟ್ಟಿದ ಸುಂಕವೂ, ತಮ್ಮದಂತೆ    

ದಿನಸಿ ಪಡೆಯಲು ನಿಲ್ಲಬೇಕಿತ್ತು ದಿನವೆಲ್ಲಾ ಸಾಲು 
ಬಡತನ, ಕಷ್ಟಗಳು,  ಜನರ, ದಿನನಿತ್ಯದ ಗೋಳು  
ಬೇಸತ್ತು ಹೋದರು ಜನ, ಕ್ರೌರ್ಯ ದಬ್ಬಾಳಿಕೆಗೆ   
ಜೈಲು, ನೇಣು, ಬಲಿಯಾದವರೆಷ್ಟೋ ಗುಂಡುಗಳಿಗೆ 
 
ನೆತ್ತರು ಹರಿದರೂ, ವೀರರು ಸತ್ತರೂ  
ಬಿತ್ತಿದರು ಸ್ವಾತಂತ್ರದ ಬೀಜ ಸಾವಿರಾರು  
ಸತ್ಯಾಗ್ರಹ, ಅಸಹಕಾರ, ಹೋರಾಟದ ಹಾದಿ 
ಬ್ರಿಟಿಷರು, ದೇಶ ತೊರೆಯುವಂತಾಯಿತು ನೋಡು  

ದೇಶ ವಿಭಜಿಸಿ,  ಕಿಚ್ಚನ್ನು ಹಚ್ಚಿ, ಬಿಟ್ಟುಹೋದರು 
ಕೊಟ್ಟರು ಸ್ವಾತಂತ್ರ್ಯ ಜೊತೆಗೆ ಕಶ್ಮೀರ ಜಂಜಾಟ 
ಅಮೃತವರ್ಷದ ಸ್ವತಂತ್ರ  ಆಚರಿಸುತ್ತಿದ್ದರೂ 
ನಿಂತಿಲ್ಲ, ಗಡಿಯಲ್ಲಿ ನಿತ್ಯ  ಸೈನಿಕರ ಕಾದಾಟ  

ಆದರೂ !
ಭಾರತ ವರಚೈತನ್ಯದ ನಾಡು,  ರೈತರ ಸಿರಿನಾಡು 
ಭಾವೈಕ್ಯತೆಯ ನೆಲೆವೀಡು,  ಭಾತೃತ್ವದ ಸವಿಗೂಡು 
ವಿವಿಧ ಭಾಷೆಯ, ವಿವಿಧ ಸಂಸ್ಕೃತಿಯ ತವರೂರು,   
ಬಲಿಷ್ಠವಾಗುತ್ತಾ ಸಾಗಿದೆ  ದೇಶ, ವಿಶ್ವಗುರುವಾಗಲು

*ಮಹಾಲಯ*

 

ಮಲಗಲೊಂದು ಚಾಪೆ 
ಪಾದ ಸವಿಯದಂತೆ ರಕ್ಷೆ 
ಉರುಗೋಲು ನೀನಾದರೆ 
ಬೇರೆ ಬೇಕಿನ್ನೇನು ನನಗೆ - ಮಗನೆ 

ಮುದಿ ಜೀವ ಇರುವುದಿನ್ನ 
ನಿತ್ಯ ತಿನ್ನುವೆ  ತುತ್ತು ಅನ್ನ 
ಅರ್ಥ ಮಾಡಿಕೊ ಇಳಿಯ ಮನಸ್ಸನ್ನ 
ಕೊಟ್ಟರೆ ಸಾಕು ಸ್ವರ್ಗ, ಸಮಯವನ್ನ - ಮಗನೆ 
   
ಹೋದ ಮೇಲೆ ಪಿಂಡ ಕಟ್ಟಿ 
ಚಾಪೆ ಚಪ್ಪಲಿ ಛತ್ರಿಯನ್ನ 
ಹಾಸಿಗೆ ಸಹಿತ ದಾನ ಮಾಡಿದರೆ 
ಸಿಗದು ನನಗೆ, ನೀ  ತಿಳಿದರೆ ಚನ್ನ  - ಮಗನೆ 

ಹೊಳೆವ ಕಣ್ಣಲಿ


ಬಳ್ಳಿ  ಹುಬ್ಬಿನ 
ಹೊಳೆವ ಕಣ್ಣಲಿ 
ಮಿಂಚು ಒಂದು ಮೂಡಿದೆ 

ತಂಗಾಳಿ ಬೀಸಲು 
ಬಳುಕಿ ಕೂದಲು  
ಗಂಧ ಸೂಸುತ ಹಾರಿದೆ   

ಬಿರಿದ ಸಂಪಿಗೆ ಹೂವಿನಂತೆ 
ನೀಳ ನಾಸಿಕ ನಾಚಿದೆ 
ಕಂಚಿನಂಥ  ಮಾತಿನಲ್ಲಿ   
ತುಟಿಯು ಮೆಲ್ಲಗೆ ನಗುತಿದೆ 

ತಾರೆಯಂತೆ ಹೊಳೆವ ಮುಖದಲಿ 
ಇಂದ್ರಲೋಕವೇ ಇಳಿದಿದೆ 
ರಂಭೆ ಊರ್ವಶಿ  ಮೇನಕೆಗೇನು ಕಮ್ಮಿ 
ಸೌಂದರ್ಯ  ಕಣ್ಮನ ಸೆಳೆದಿದೆ 

ಮಯೂರಿಯಾಗಿ ಹರಿಣಿಯಾಗಿ   
ಎದೆಯ ತುಂಬಾ ಓಡಾಡಿದೆ 
ಕನಸಿನಲ್ಲೂ ನನಸಿನಲ್ಲೂ 
ನಿನ್ನನೇ ಕಾಯುತ ಕುಳಿತಿಹೆ 

ನಿನ್ನಾ ನಗುವು

 ನೀಲಿ ಆಕಾಶದಲಿ  

ಮಿನುಗೋ ಪುಟ್ಟ ತಾರೆಗಳಂತೆ   
ಸೊಗಸಾಗಿ ಮಿಂಚುತಿದೆ
ನಿನ್ನಾ ನಗುವು

ಕೆರೆಯ ತಿಳಿ ನೀರಿನಲಿ
ಬಿರಿದ ಕೆಂದಾವರೆಯಲ್ಲಿ
ಹೊಳೆವ ಇಬ್ಬನಿಯಂತೆ
ನಿನ್ನ ನಗುವು

ಹಸಿರು ತುಂಬಿದ ವನದಲಿ
ಬಣ್ಣದ ಚಿಟ್ಟೆ  ಹಾರುತಲಿ
ಹೂಗಳು ನಾಚಿದಂತೆ
ನಿನ್ನ ನಗುವು

ಭಾವನೆಗಳ ಲೋಕದಲಿ
ಮೃದುವಾದ ಮನಸಿನಲಿ  
ನವಿರಾಗಿ ಚುಮ್ಮುತಿದೆ  
ನಿನ್ನಾ ನಗುವು

ನೋಟವಿರಲಿ ಆಟವಿರಲಿ
ಪಾಠ ಜೀವನಕ್ಕಿರಲಿ
ಎಲ್ಲವಕ್ಕೂ ಉಸಿರು
ನಿನ್ನಾ ನಗುವು

ನಕ್ಕು ಬಿಡು ನೀನೊಮ್ಮೆ
ನಗುವೆನು ನಾನೊಮ್ಮೆ
ನಗುವಿನ ಮೊಹರಾಗಲಿ 
ನಿನ್ನಾ ನಗುವು

ಗುರುವಾರ, ಸೆಪ್ಟೆಂಬರ್ 8, 2022

*ಹಳೆ ಸ್ಕೂಟರ್*



ಬಾಗಿಲಾ ಪಕ್ಕದಲ್ಲಿ 
ನಿಂತಿರುವ ಸ್ಕೂಟರ್ 
ಹಳೆಯ ನೆನಪೊಂದು ಕೊಡುತಿಹುದು 

ದಿನವೂ ಮುಂಜಾವಿನಲ್ಲಿ 
ಬಾಗಿಸಿ  ಕಿಕ್ ಹೊಡೆದು 
ಕನಸ ತುಂಬಿ ಹೋಗ್ತಿದ್ದು ನನಪಾಯಿತು   

ನಲ್ಲೆ ಹಿಂಬದಿಯಲ್ಲಿ 
ಸೊಂಟ ಹಿಡಿದು ಕುಳಿತಿದ್ದು 
ನೆನಪಿನಂಗಳದಲ್ಲಿ ಸುಳಿದುಹೋಯಿತು 

ಕಾಲದಾ ಗರ್ಭದಲಿ 
ಆಳಿದ ವರಳು ಹೊರಬಿದ್ದಂತೆ 
ಗಾಡಿಯು ಹೊರಗೆ ಬಿದ್ದುಹೋಯಿತು 

ಹೆಂಡತಿ  ಹೊಸ ಮನೆಯಲ್ಲಿ 
ಹಳೆ ಹುಡುಗಿ ನೆನಪಲ್ಲಿ 
ಹಳೆ ಮನೆ, ಗಾಡಿ, ವರಳು ಸ್ಮಾರಕವಾಯಿತು!  

ಹಾಡು ಹಕ್ಕಿ

 
ಹಾಡು ಹಕ್ಕಿ 
ಹಾರುತಲಿ 
ನಾಡಲಿ ಕೂಗಿದೆ 
ಕೋಗಿಲೆ


ರಾಗ ಭಾವ 
ತಾಳ ಹಳೆಯದು 
ಹೊಸತು ದನಿ  
ದೇಶ ಆವರಿಸಿದೆ. 

ಆಡು ಮುಟ್ಟದ 
ಎಲೆಯು ಇಲ್ಲ 
ಹಾಡು ಹಾಡದ 
ಭಾಷೆ ಇಲ್ಲ 
 
ನಾಡು ನುಡಿ 
ಹೊರನಾಡಿನಲ್ಲೂ 
ಗೌರವ ಪಡೆದು 
ಹಾಡಿದೆ 

ಭೂಮಿಯಲ್ಲಿ 
ಹಾಡಿ ದಣಿದು 
ಕೋಗಿಲೆ ಸ್ವರ್ಗ 
ಲೋಕ ಸೇರಿದೆ 

ಉಸಿರು ನಿಂತರೇನು
ಹಾಡು ಸದಾ 
ಹೃದಯದಲ್ಲಿ  
ನೆಲೆಯೂರಿದೆ . 

ಪ್ರೇಮಿಗಳ ದಿನ

 

ಪ್ರೀತಿ ಇದ್ದರೆ 
ದಿನಗಳೆಲ್ಲವೂ 
ಪ್ರೇಮಿಗಳ ದಿನ ಮಾಣೋ 


ಪ್ರೀತಿ ಇದ್ದರೂ 
ಅದಕ್ಕಾಗಿ ಸತ್ತರೆ 
ಪ್ರೇಮಿಗಳ ದಿನ  ಕಾಣೋ 

ಪ್ರೀತಿ ತೋರಿಸಿ 
ಪ್ರೇಮದಿಂದ ಬದುಕು 
ಆಯ್ಕೆ ನಿನ್ನದು ಮನಗಾಣೋ 

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ

 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ 
ನಾನು ಹುಟ್ಟಿರಲಿಲ್ಲ


ಹುಟ್ಟಿದ ಕ್ಷಣದಿಂದಲೇ  
ಅನುಭವಿಸಿದೆ  ಸ್ವಾತಂತ್ರ್ಯ, 
ತ್ಯಾಗ, ಬಲಿದಾನದ, ಅರಿವಿರಲಿಲ್ಲ 

ಇತಿಹಾಸ ತಿಳಿಸುತ್ತೆ !

ಪರಕೀಯರು ನುಸಿಳಿದರು ದೇಶಕ್ಕೆ ಬೆಕ್ಕಿನಂತೆ,  
ಹಿಡಿದರು ಮೋಸದಿಂದ ಆಡಳಿತ  ಕಪಿಮುಷ್ಟಿಯಂತೆ,  
ದೇಶ  ನಮ್ಮದು, ಸಂಪತ್ತು ನಮ್ಮದು   
ದೋಚಿ ಸಾಗಿಸಿದರು, ಕಟ್ಟಿದ ಸುಂಕವೂ, ತಮ್ಮದಂತೆ    

ದಿನಸಿ ಪಡೆಯಲು ನಿಲ್ಲಬೇಕಿತ್ತು ದಿನವೆಲ್ಲಾ ಸಾಲು 
ಬಡತನ, ಕಷ್ಟಗಳು,  ಜನರ, ದಿನನಿತ್ಯದ ಗೋಳು  
ಬೇಸತ್ತು ಹೋದರು ಜನ, ಕ್ರೌರ್ಯ ದಬ್ಬಾಳಿಕೆಗೆ   
ಜೈಲು, ನೇಣು, ಬಲಿಯಾದವರೆಷ್ಟೋ ಗುಂಡುಗಳಿಗೆ 
 
ನೆತ್ತರು ಹರಿದರೂ, ವೀರರು ಸತ್ತರೂ  
ಬಿತ್ತಿದರು ಸ್ವಾತಂತ್ರದ ಬೀಜ ಸಾವಿರಾರು  
ಸತ್ಯಾಗ್ರಹ, ಅಸಹಕಾರ, ಹೋರಾಟದ ಹಾದಿ 
ಬ್ರಿಟಿಷರು, ದೇಶ ತೊರೆಯುವಂತಾಯಿತು ನೋಡು  

ದೇಶ ವಿಭಜಿಸಿ,  ಕಿಚ್ಚನ್ನು ಹಚ್ಚಿ, ಬಿಟ್ಟುಹೋದರು 
ಕೊಟ್ಟರು ಸ್ವಾತಂತ್ರ್ಯ ಜೊತೆಗೆ ಕಶ್ಮೀರ ಜಂಜಾಟ 
ಅಮೃತವರ್ಷದ ಸ್ವತಂತ್ರ  ಆಚರಿಸುತ್ತಿದ್ದರೂ 
ನಿಂತಿಲ್ಲ, ಗಡಿಯಲ್ಲಿ ನಿತ್ಯ  ಸೈನಿಕರ ಕಾದಾಟ  

ಆದರೂ !
ಭಾರತ ವರಚೈತನ್ಯದ ನಾಡು,  ರೈತರ ಸಿರಿನಾಡು 
ಭಾವೈಕ್ಯತೆಯ ನೆಲೆವೀಡು,  ಭಾತೃತ್ವದ ಸವಿಗೂಡು 
ವಿವಿಧ ಭಾಷೆಯ, ವಿವಿಧ ಸಂಸ್ಕೃತಿಯ ತವರೂರು,   
ಬಲಿಷ್ಠವಾಗುತ್ತಾ ಸಾಗಿದೆ  ದೇಶ, ವಿಶ್ವಗುರುವಾಗಲು

*ಗೆಳೆತನ*


ತಿಳಿಯದ ವಯಸಲಿ 
ಅಳಿಯದ ಪ್ರೀತಿಯ 
ಬಳುವಳಿಯಾಗಿ ಕೊಟ್ಟವರೇ  

ಅಂದದ ಶಾಲೆಯ 
ಮಂದಿರ ಮೈದಾನದಿ 
ಸುಂದರ ದಿನಗಳ ಕೊಟ್ಟವರೇ 

ಆಟಗಳಾಡುತ 
ಪಾಠಗಳ ಓದುತ
ಕಳ್ಳಾಟವ ಹೇಳಿ ಕೊಟ್ಟವರೇ 

ಗೆಳೆಯನೇ ಗೆಳತಿಯೇ 
ಕಳೆದ  ಆ  ದಿನಗಳ  
ಗಳಿಸಲು ಮತ್ತೆ ಆಗುವುದೇ 

ಊರೂರು ಸುತ್ತುತಾ 
ದೂರದಿ ಇದ್ದರೂ 
ಮರೆಯದೇ ಗೆಳೆತನ ಇಟ್ಟವರೇ 

ಅಂದಿಗೂ ಇಂದಿಗೂ
ಮುಂದೆಯೂ ಮೆರೆವುದು
ಚಂದದ ಗೆಳೆತನ ಇರುವುದೇ ಹೀಗೆ. 

-ಕಲಾಗಂಗೋತ್ರಿ ೫೦-

 -ಕಲಾಗಂಗೋತ್ರಿ ೫೦-


ನಾಟಕ ಹಾಡು ನೃತ್ಯ ರಂಗ 
ಪ್ರಪಂಚವೇ ನಮ್ಮ ಕಲಾಗಂಗೋತ್ರಿ 
ದೇಶ ವಿದೇಶದಲ್ಲಿ ಮನೆಮಾತಾಗಿದೆ 
ನೋಡಿದರೆ ನಾಟಕ ಮನೋರಂಜನೆ ಖಾತ್ರಿ 

ತಂಡ ಕಟ್ಟಿದ ಚಂದ್ರು ರಾಜಾರಾಮ್ 
ಸ್ನೇಹಿತರಿಗೆ ಆಗ  ವರ್ಷ ಕೇವಲ ಇಪ್ಪತ್ತು 
ಹೆಮ್ಮರವಾಗಿ ಬೆಳೆದು ನಿಂತಿದೆ 
ಕಲಾಗಂಗೋತ್ರಿಗೆ ಈಗ ತುಂಬುತ್ತಿದೆ ಐವತ್ತು 

ಅಭಿನಯ ಪರಿಕರ ಮೇಕಪ್   
ವಸ್ತ್ರಾಲಂಕಾರಗಳನ್ನು ಇಲ್ಲಿ ಕಲಿತವರೆಷ್ಟೋ   
ಬೀದಿನಾಟಕ , ಮೂಕಿ ಟಾಕಿ, 
ಲೈಟಿಂಗ್, ಕಲಿಸಿದ ರಂಗಶಿಬಿರಗಳೆಷ್ಟೋ 

ಹಳೆ ಕನ್ನಡ, ಹೊಸಕನ್ನಡ 
ಸಂಸ್ಕೃತ ಜೊತೆ ತರ್ಜಿಮೆಯಾದ ನಾಟಕಗಳು 
ಕಥೆ ಕಾದಂಬರಿ ಜೀವನ ಚರಿತ್ರೆಗಳು 
ರಂಗದಮೇಲೆ ತಂದರು ಯಶಸ್ವಿ ಪ್ರಯೋಗಗಳು  

ಹಳೆ ತಲೆ  ಹೊಸ ಚಿಗುರು ಮೇಳೈಸಿ  
ಬೆಳೆಸಿದರು ಗುರುತಿಸಿಕೊಂಡ ನಟರೆಷ್ಟೋ  
ಹೊಸ ನಾಟಕ ರಚಿಸಿ ನಿರ್ದೇಶನ ಮಾಡಲು 
ಉತ್ತೇಜಿಸಿ ಕೊಟ್ಟ ಅವಕಾಶಗಳೆಷ್ಟೋ  

ಸಣ್ಣ ಸಾಧನೆಯನ್ನು ಗುರುತಿಸಿ ಬೆಳೆಸಿದರು  
ಕಿರುತೆರೆ - ಹಿರಿತೆರೆಗೆ ಹೋದವರೆಷ್ಟೋ    
ರಂಗಾಭಿನಂದನೆ  ಪ್ರಶಸ್ತಿಗಳನೆ ಪಡೆದ     
ರಂಗ ನೆೇಪಥ್ಯ  ಕಲಾವಿದರೆಷ್ಟೋ  

ಎಪ್ಪತ್ತು ಆದರೂ ಉತ್ಸಾಹ ಇಪ್ಪತ್ತು 
ಇಂದಿಗೂ ಚಿರಯವ್ವನ ರಂಗದ ಮುಂದೆ 
ಕಾಪಿ ತಿಂಡಿ  ಜೊತೆ ಇಂದಿಗೂ  ರಿಹರ್ಸಲ್   
ನಿರ್ದೇಶಕರ ಕೈಚಳಕ   ರಂಗದ ಹಿಂದೆ  

ನಾಟಕ ಮಾಡುತ  ಪ್ರಪಂಚ ಸುತ್ತಿದ 
ತಂಡಗಳಲ್ಲಿ ಮುಂಚೂಣಿ ಕಲಾಗಂಗೋತ್ರಿ
ವಸುದೈವಕುಟುಂಬದ ನೈಜತೆ ತುಂಬಿ    
ಸಾಗುತಿದೆ ಈ ಐವತ್ತು ವರ್ಷದ ಮೈತ್ರಿ   
 

ನವಿಲೊಂದು

 
ನವಿಲೊಂದು ಕುಣಿಯುತಿದೆ 
ಗರಿಕೆದರಿ ಹನಿಮಳೆಗೆ 
ಕಿವಿಯಲೇನೋ  ಹೇಳುತಿದೆ 
ಪ್ರೀತಿ ಸುರಿಸಿ  ನಲ್ಲೆಗೆ  

ಹಾಡೊಂದು ಹಾಡುತಿವೆ
ಇನಿದನಿಯ ರಾಗಕೆ
ಕೊಳಲೊಂದು ನುಡಿಯುವಂತೆ
ಮುಂಜಾವಿನ ತಾಳಕೆ 

 
ಬಣ್ಣ ಚಲ್ಲಿ ಹಾರಾಡುತಿವೆ     
ಮಂಜು ಮುಸಿಕಿದ ಮೋಡಕೆ
ಹೊಂಬಿಸಿಲು ಸವಿಯುತಲಿ
ಪ್ರೀತಿ ಹಂಚುತ  ಮೆಲ್ಲಗೆ 


ನಲಿದುಬಿಡು ನವಿಲಿನಹಾಗೆ
ನೋವಿನಲಿರುವುದೇನಿದೆ
ಇಂದು ಮುಂದು ಎಂದೆಂದೂ
ಒಲವೇ ಭಾವ ಬದುಕಿಗೆ 

  

ಮಂಗಳವಾರ, ಜೂನ್ 21, 2022

ಮುದ್ದಿನ ಮಣಿ

 ಬಾ ಬಾರೋ ಚಲುವ 

ತೋರು ಬಾ ಮೊಗವ 

ನಿನ್ನಂದ ಕಣ್ಮುಂದೆ ನೋಡುವ ಒಲವ 

ಆ ಹಲ್ಲಿಲ್ಲದ  ನಗುವ 


ನೋಟಕ್ಕೆ ಸೆಳೆವ 

ಕಣ್ಣಲ್ಲೇ ಕರೆವ 

ಮನಸ್ಸೆಳೆದು ನಿನ್ನನ್ನೇ ನೋಡುವ ಒಲವ 

ಆ ಹುಬ್ಬಿಲ್ಲದ ಚಲುವ 


ಮುಂದ್ಮುಂದೆ  ಸರಿವ 

ಅಂಬೆಗಾಲಲಿ ನೆಡೆವ 

ಹಿಡಿದೆತ್ತಿ ಮುದ್ದಾಡಿ ನೋಡುವ ಒಲವ 

 ಆ ನಯ ಮೊಗದ ಸೊಗವ


ಏನೆಂದು ಪೋಗಳಲಿ 

ಚಂದಿರನಂದದಿ ಹೊಳೆವ 

ವಜ್ರದ ಖಣಿಯ ಮುದ್ದಿನ ಮಣಿಯ 

ಆ ಸೊಗಸಾದ ಸುಖವ

ಗುರುವಾರ, ಜನವರಿ 27, 2022

*ಹೆಸರು-ಹಣೆಬರಹ*



ಹಣೆಯಲ್ಲಿ ಬರೆದಾ ಹೆಸರು 
ಲಗ್ನ-ಪತ್ರಿಕೆಯಲ್ಲಿ ಅಚ್ಚಾಗಬಹುದು 
ಮನಸಲ್ಲಿ ಅಚ್ಚಾದ ಹೆಸರು 
ಅಚ್ಚಳಿಯದೆ ಉಳಿದುಬಿಡಬಹುದು 

ಮರಳಿನ ಮೇಲೆ ಬರೆದ ಹೆಸರು  
ಉರುಳಿ  ಅಳಿಸಿ ಹೋಗಬಹುದು 
ಹಣೆಯಲ್ಲಿ ಬ್ರಹ್ಮ ಗೀಚಿದಮೇಲೆ 
ಪ್ರೀತಿ ಇರದಿದ್ದರೂ  ಜೊತೆ  ಜೀವಿಸಬಹುದು
  
ಉಸಿರಿನಲ್ಲಿ ಬರೆದ ಹೆಸರು 
ಮೂಡಿದ ಹೂವಿನೊಳಗೂ ಇರದಿರಬಹುದು  
ಹೃದಯದಲ್ಲಿ ಇರುವ ಹೆಸರು 
ಮುಡಿಯದಿದ್ದರೂ ಹಸಿರು ಉಸಿರಿರೋವರೆಗೂ 
 

*ನಗುವ ಹೂ*



ಅರಳಿ ನಗುವ ಹೂವು  ನೀನು  
ಮರಳಿ ಬರುವ ದುಂಬಿ ನಾನು  \\ ಪ \\

ತೇಲಿ ಬರುವೆ ದೋಣಿಯಲ್ಲಿ 
ತೇಲುವ ಲತೆಗಳ  ದೂರ ತಳ್ಳಿ 
ರಾಗ ಭಾವ ಅರಿತು ಬೆರೆತು   
ಕೈಗೆಟುಕು ಬಾ ಬಿಗುಮಾನದಲ್ಲೇ   

ಕೃಷಿಕ ನಾನು ಕೊಯ್ಲು ನೀನು 
ಅದರೂನು ನಿನ್ನ ಪ್ರೇಮಿ ನಾನು 
ದಿನವೂ ನಿತ್ಯ ಕೊಯ್ದರೂನು 
ನೋವು ಮಾಡದೆ ಹಿಡಿವೆ ನಾನು 

ಕೆರೆಯ ಹೂ ಆದರೂ ನೀ 
ನಸುಗಂಪು ಸೂಸಿ  ಸೆಳೆಯುತಿರುವೆ    
ನಿನ್ನ ಹೃದಯ ಅರಸಿ ಬರಲು 
ನನ್ನನ್ನೇ ನಾನು ಮರೆತು ಬಿಡುವೆ 

ಬೆವರು ಸುರಿಸಿ ನಿನ್ನ ಹಿಡಿವೆ  
ತಂಗಾಳಿ ತಂಪು ನೀನು ತರುವೆ 
ಸಿರಿಯ ಸುಖವ ಕಾಣೆ ನಾನು 
ಇಲ್ಲಿಯ ಸುಖನಿದ್ರೆಗೆ ಕಾರಣ ನೀನು 

ಉಸಿರು ಉಸಿರಲಿ ಇರುವೆ ನೀನು 
ನಗುತ ಬರುವೆ ಇರುಳ  ಕನಸಿನೊಳಗೆ 
ಅನಂತ ಅಂಬರದ ಬಿಂಬದ ನಡುವೆ 
ಆದರಿಸಿ ಆರಾಧಿಸುವೆ ದೋಣಿಯೊಳಗೆ   

*ಚಿಟ್ಟೆ*


ದಿನದ ಆಯಸ್ಸು ಪಡೆದ, ಚಿಟ್ಟೆಯೇ 
ಮನದ ಆಸೆಯಂತೆ ನೀ ಹಾರುವೆ 

ಹೂ ಒಳಗಿರುವ ಮಕರಂದ ಹೀರುವೆ 
ಪರಾಗ ಸ್ಪರ್ಶ ಕೆಲಸ ಕೂಡ ಮಾಡುವೆ  
ದಾರಿತುಂಬಾ ಹಾರಿ ಚಲುವ  ತೋರುವೆ
ಹಲವು ಬಣ್ಣ (ದು)ತುಂಬಿ ಮನವ ಸೆಳೆಯುವೆ 

ಮರೆತು ಹಿಂದಿನ ಅವಸ್ಥೆಯ ಹಾರಾಡುವೆ 
ಬೆರೆತು ಎಲ್ಲರಲ್ಲಿ ಮುದವ ನೀಡುವೆ  
ಇರುವ ಸಮಯದ-ಉಪಯೋಗ ತಿಳಿಸುವೆ 
ಅರಿತು ಜೇವಿಸು, *ನನ್ನಂತೆ* ಎಂದು ಸಾರುವೆ