ಬುಧವಾರ, ಅಕ್ಟೋಬರ್ 12, 2022

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ
ನಾನು ಹುಟ್ಟಿರಲಿಲ್ಲ

ಹುಟ್ಟಿದ ಕ್ಷಣದಿಂದಲೇ  
ಅನುಭವಿಸಿದೆ  ಸ್ವಾತಂತ್ರ್ಯ, 
ತ್ಯಾಗ, ಬಲಿದಾನದ, ಅರಿವಿರಲಿಲ್ಲ 

ಇತಿಹಾಸ ತಿಳಿಸುತ್ತೆ !

ಪರಕೀಯರು ನುಸಿಳಿದರು ದೇಶಕ್ಕೆ ಬೆಕ್ಕಿನಂತೆ,  
ಹಿಡಿದರು ಮೋಸದಿಂದ ಆಡಳಿತ  ಕಪಿಮುಷ್ಟಿಯಂತೆ,  
ದೇಶ  ನಮ್ಮದು, ಸಂಪತ್ತು ನಮ್ಮದು   
ದೋಚಿ ಸಾಗಿಸಿದರು, ಕಟ್ಟಿದ ಸುಂಕವೂ, ತಮ್ಮದಂತೆ    

ದಿನಸಿ ಪಡೆಯಲು ನಿಲ್ಲಬೇಕಿತ್ತು ದಿನವೆಲ್ಲಾ ಸಾಲು 
ಬಡತನ, ಕಷ್ಟಗಳು,  ಜನರ, ದಿನನಿತ್ಯದ ಗೋಳು  
ಬೇಸತ್ತು ಹೋದರು ಜನ, ಕ್ರೌರ್ಯ ದಬ್ಬಾಳಿಕೆಗೆ   
ಜೈಲು, ನೇಣು, ಬಲಿಯಾದವರೆಷ್ಟೋ ಗುಂಡುಗಳಿಗೆ 
 
ನೆತ್ತರು ಹರಿದರೂ, ವೀರರು ಸತ್ತರೂ  
ಬಿತ್ತಿದರು ಸ್ವಾತಂತ್ರದ ಬೀಜ ಸಾವಿರಾರು  
ಸತ್ಯಾಗ್ರಹ, ಅಸಹಕಾರ, ಹೋರಾಟದ ಹಾದಿ 
ಬ್ರಿಟಿಷರು, ದೇಶ ತೊರೆಯುವಂತಾಯಿತು ನೋಡು  

ದೇಶ ವಿಭಜಿಸಿ,  ಕಿಚ್ಚನ್ನು ಹಚ್ಚಿ, ಬಿಟ್ಟುಹೋದರು 
ಕೊಟ್ಟರು ಸ್ವಾತಂತ್ರ್ಯ ಜೊತೆಗೆ ಕಶ್ಮೀರ ಜಂಜಾಟ 
ಅಮೃತವರ್ಷದ ಸ್ವತಂತ್ರ  ಆಚರಿಸುತ್ತಿದ್ದರೂ 
ನಿಂತಿಲ್ಲ, ಗಡಿಯಲ್ಲಿ ನಿತ್ಯ  ಸೈನಿಕರ ಕಾದಾಟ  

ಆದರೂ !
ಭಾರತ ವರಚೈತನ್ಯದ ನಾಡು,  ರೈತರ ಸಿರಿನಾಡು 
ಭಾವೈಕ್ಯತೆಯ ನೆಲೆವೀಡು,  ಭಾತೃತ್ವದ ಸವಿಗೂಡು 
ವಿವಿಧ ಭಾಷೆಯ, ವಿವಿಧ ಸಂಸ್ಕೃತಿಯ ತವರೂರು,   
ಬಲಿಷ್ಠವಾಗುತ್ತಾ ಸಾಗಿದೆ  ದೇಶ, ವಿಶ್ವಗುರುವಾಗಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ