ಶುಕ್ರವಾರ, ಡಿಸೆಂಬರ್ 9, 2022

ಕನ್ನಡ

 ಗಿಳಿಯೇ ಗಿಳಿಯೇ ಮುದ್ದಿನ ಗಿಳಿಯೇ 
ಹಾರುತ ಎಲ್ಲಿಗೆ  ಹೋಗಿರುವೆ 

ನಿನ್ನಯ ಕನ್ನಡ ಮಾತನು ಕೇಳಲು  
ಕಾತರದಿ  ಕಾಯುತ ಕುಳಿತಿರುವೆ 

ಮೂಡಣ ಪಡುವಣ ಬಡವಣ ತೆಂಕಣ 
ಗಡಿಗಳ ತಾಣಕೆ  ಹೋಗಿರುವೆ 
ನೋಡುತ ನಲಿಯುತ ಹಾರುತ ಆನಂದದಿ 
ಕಣ್ತುಂಬಿ  ಉಲ್ಲಾಸದಿ ಬರುತಿರುವೆ 

ಗೋಳಗುಂಬಜ ಮನ ಸೆಳೆಯುತಲಿ   
ನಿನ್ನ ದನಿಗೆ ಪ್ರತಿದನಿ ನೀಡುತಿದೆ  
ದಾಸರ ಶರಣರ ವಚನ ಸಾಹಿತ್ಯ 
ಬದುಕಿನ ಪರಿ ಪಾಠ ಸಾರುತಿವೆ  

ಕೃಷ್ಣ ಭೀಮಯರು ತುಂಬಿ ಹರಿಯುತಲಿ 
ಧರೆಗೆ ಸೀರೆಯ ಉಡುಸುತಿವೆ 
ಬಾದಾಮಿ ಐಹೊಳೆ ಗುಹಾ ದೇವಾಲಯ 
ಚಾಲುಕ್ಯರ ಇತಿಹಾಸ ತಿಳಿಸುತಿದೆ 

ವಿಜಯನಗರ ಕಲ್ಲಿನ ತೇರಿನಲ್ಲಿ  
ಸಂಗೀತ ದುಂದುಭಿ ಮೊಗಳುತಿದೆ 
ತುಂಗಭದ್ರ-ತಟ ಹನುಮನ ಹಂಪೆಯು 
ವೈಭವ ಸಾಮ್ರಾಜ್ಯದ ಕಥೆ ಹೇಳುತಿದೆ 

ಕಿತ್ತೂರ ಚನ್ನಮ್ಮ ರಾಣಿ ಒಬಕ್ಕ 
ಒನಕೆ ಓಬವ್ವ ನಮ್ಮ ನಾಡಿನಾ ಹೆಮ್ಮೆ  
ಗಂಡು ಮೆಟ್ಟಿದಾ ನಾಡು ಕರ್ನಾಟಕ 
ಕುಂದ, ಫೆಡೆ, ಮಿರ್ಚಿ  ತಿನಿಸುತಿದೆ 

ಹೊರನಾಡು ಅನ್ನಮ್ಮ  ಶೃಂಗೇರಿ ಶಾರದೆ 
ಕೊಲ್ಲೂರು ಮೂಕಾಂಬಿಕೆ ಹರಸುತಿಹೆ  
ಬೇಳೂರು ಹಳೇಬೀಡು ಸೋಮನಾಥಪುರ 
ಮೇರು ಶಿಲ್ಪಿ ಕಲೆಯಲಿ ಹೊಳೆಯುತಿವೆ 

ಪಶ್ಚಿಮ ಘಟ್ಟಗಳ ನದಿ ಸಾಗರದಂಚಲಿ 
ಜಲಪಾತ ಬೆಟ್ಟಸಾಲು ಕಣ್ಣ್ ಸೆಳೆದಿವೆ 
ದೈವಗಳ ನಿತ್ಯ ಆರಾಧನೆಯಲಿ 
ಪ್ರಸಾದ, ದಾಸೋಹ ನೆಡೆಯುತಿವೆ 

ಕೊಡಗಲಿ ಧರೆಗಿಳಿದು ಜೀವನಾಡಿಯಾಗಿ 
ಹರಿವಳು ಪಡುವಣದಲೆಲ್ಲಾ ಕಾವೇರಿ 
ಬೆಂಗಳೂರು ಹೆಸರಾ ಮೈಸೂರು ದಸರಾ 
ಬೆಳಗುತಿದೆ ಇಂದಿಗೂ  ಜಯಭೇರಿ 

ಕನ್ನಡ ನಾಡಿದು  ಕನ್ನಡ ನುಡಿಯಿದು 
ಸಂಸ್ಕಾರದ ಸಂಸ್ಕೃತಿ ತವರೂರು  
ಕನ್ನಡ ಕನ್ನಡ ಕನ್ನಡ ಎನ್ನುತ  
ಮಿಡಿಯುತಿದೆ ನೋಡು ನನ್ನೆದೆಯು  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ