ಶುಕ್ರವಾರ, ಡಿಸೆಂಬರ್ 9, 2022

ಬಿಡಿಸಲಾಗದು

ಕಳೆದು ಹೋಗದಿರು ಮನವೇ 
ಕ್ರೂರ ಮಾತುಗಳ ಆರ್ಭಟಕೆ  \ ಪ \

ಕಾಣದಾಗಿದೆ ಅರಿಯೆ ಮುಂದೆ ದಾರಿ   
ಕಡೆಯಲೇನಿಹುದೊ ಇರಬಹುದು  ಕವಲುದಾರಿ \ ಆ ಪ \

ಕದಡಿದ ಕೆರೆಯಂತೆ ಕೆಸರಾಗಿದೆ ಮನಸ್ಸು 
ಕಾರಣ ಕ್ಷುಲ್ಲಕ  ಏಕಿಷ್ಟು ಮುನಿಸು 
ಕಮರಿ ಹೋಗಿದೆ ಕಂಡ ಎಲ್ಲಾ ಕನಸು 
ಕಲ್ಲಿನಂದದಿ ಜೀವಿಸಿದರೆ ಏನು ಸೊಗಸು \೧\

ಕೊಲ್ಲದಿರು ಮಾತೆಂಬ ಬಾಣಗಳ ಹಾಕಿ 
ಕೊರೆದು ಹೋಗಿದೆ ಹೃದಯ ಬಾಣಗಳು ತಾಕಿ 
ಕಟ್ಟಿಕೊಂಡು ಹೋಗುವುದೇನಿಲ್ಲ ಇಲ್ಲೇ ಬಿಸಾಕಿ 
ಕೊಟ್ಟುಬಿಡು ಒಮ್ಮೆ ಪ್ರೀತಿ ನಗುವಿನ ಚಟಾಕಿ  \೨\

ಕಳೆದ ಸಮಯ ಎಂದೂ ಮತ್ತೆ ಬಾರದು 
ಕ್ಷಣ ತಪ್ಪಿದರೆ ಮುಂದೆ ಜೀವನ ಸಾಗದು 
ಕಾಳಗದಿಂದ ಏನು ಸಾಧಿಸಲು ಆಗದು 
ಕಟ್ಟಿಡು ಪ್ರೀತಿಯ ನಂಟು ಅದು ಬಿಡಿಸಲಾಗದು \೩\

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ