ಬುಧವಾರ, ಅಕ್ಟೋಬರ್ 31, 2018

*** ಮೂಲೆ ಸೇರಿದೆ ಪುಸ್ತಕ ***


ಅಂತರಜಾಲದ ಬಿರುಗಾಳಿಗೆ 
ನಿಧಾನಕೆ, ನಿಧಾನಕೆ, ಪುಸ್ತಕ ಮೂಲೆ ಸೇರಿದೆ 
ಪುಸ್ತಕ ಓದುವುದು ಕಡಿಮೆಯಾಗಿದೆ 

ಕಾದಂಬರಿ, ಕವನ, ಕಥೆ, ಪಠ್ಯ ವಿಮರ್ಶೆ ಪುಸ್ತಕಾ 
ದಿನಪತ್ರಿಕೆ ಸಿಗುತ್ತಿತ್ತು, ಓದಲು ಎಲ್ಲರಿಗೂ ಉಚಿತಾ  
ಗುಂಪುಮಾಡಿ ಜೋಡಿಸಿದ ಅಟ್ಟಕ್ಕೆ, ಹೆಸರಿತ್ತು ಇಷ್ಟುದಿನಾ 
ಗುಂಪಾಗಿ ಬಿದ್ದಿವೆ, ಹುಡುಕಲು ಏನು ಮಾಡಲಿ ನಾ 

ಮನಸನು ಕಾಡುತಾ, ನೆನಪು ತರುವ ಪುಸ್ತಕಾ 
ನಲಿವನು, ನೋವನು, ಅನುಭವಿಸಿದೆ ಓದುತಾ  
ಜನರ ಸೆಳೆದು ಗ್ರಂಥಾಲಯಕ್ಕೆ, ಜೀವ ತುಂಬಿದ್ದೆ ಇಷ್ಟುದಿನಾ 
ಜನರಿಲ್ಲದೆ ಒಣಗುತ್ತಿದೆ ಈಗ ಏನು ಮಾಡಲಿ ನಾ

ಮಂಗಳವಾರ, ಅಕ್ಟೋಬರ್ 9, 2018

ತ್ರಿಕೋನ ಪ್ರೀತಿ

ನೋಡಾದಿರಿ ನನ್ನ ನೀಲಿ ಕಣ್ಣುಗಳಿಂದ 
ಪ್ರೀತಿ ಸ್ನೇಹ  ಮುರಿಯುವ ಭಯವಾಗಿದೆ  

ಮೂರೂ ಮನಸ್ಸುಗಳ ಅಂತರ ತ್ರಿಕೋನದಂತೆ 
ಮೂರೂ ಕಲ್ಲುತುಂಬಿದ ಬೆಟ್ಟಗಳು ನಿಂತಿವೆ  
ಮೂರೂ ತೀರದಿ ಮಧ್ಯ ನದಿಯೊಂದು ಹರಿದಿದೆ 
ಮೂರೂ ಹೃದಯ ಬೆಸೆಯಲು ತಪ್ಪ ಬಂದಂತಿದೆ 

ಪ್ರೀತಿ ಮೂಡಿತು ನಿನ್ನ ಮೊದಲು ನೋಡಿದ ಆ ಕ್ಷಣ 
ಕೃತಿಯಲ್ಲಿ ಅವನ ಸ್ನೇಹ  ರಕ್ತದ ಕಣ ಕಣದಲ್ಲಿದೆ  
ತಪ್ಪು ತಿಳುವಳಿಕೆ ಬೆಳೆದು ಬೆಟ್ಟವಾಗಿ  ನಿಂತಿದೆ 
ಒಪ್ಪುವಂದದಿ ಕರಗಿ ಮುನಿಸು ನೀರಾಗಬಾರದೇ

ಮೌನತುಂಬಿದ ಗಾಳಿಯಲ್ಲೂ ಮನಸ್ಸಿನ ತೊಳಲಾಟ 
ಅಲೆಗಳಿಲ್ಲದ ನೀರಿನಲ್ಲೂ ಮೂಡಿದೆ ಚಕ್ರತೀರ್ಥ 
ನೀರು ಹರಿದಷ್ಟು ಮನಸು ತಿಳಿಯಾಗಬಹುದು ಕಾಯುವೆ   
ತೀರಗಳ ಬೆಸೆಯಲು ನಾವು ಸ್ನೇಹ ಸೇತುವೆ ಕಟ್ಟಬಾರದೇ     


 

ಬುಧವಾರ, ಅಕ್ಟೋಬರ್ 3, 2018

ಮೌನವೇ ಮಾತಾಗಿದೆ



ಮಧುರ ಮುಂಜಾನೆಯ  
ಬಿರಿದ  ತಿಳಿ  ಬೆಳಕಲ್ಲಿ 
ಚಕ್ರತೀರ್ಥದಿ ನಿಂತಾಗಿದೆ 
ಮೌನವೇ ಮಾತಾಗಿದೆ 

ನೀನೊಂದು ಬೆಟ್ಟದಲ್ಲಿ 
ಅವನೊಂದು ಬೆಟ್ಟದಲ್ಲಿ 
ಕಲ್ಲಂತೆ ನಾವು ನಿಂತಾಗಿದೆ 
ಕಳೆದ ಸ್ನೇಹ ಹುಡುಕಾಡಿದೆ 

ನದಿಯು ಹರಿಯುತಿದೆ 
ಬೆಟ್ಟಗಳ ಬುಡ ಸವರಿ 
ತೆಪ್ಪ ತೆಪ್ಪಗೆ ನಿಂತಾಗಿದೆ 
ಅಲೆಗಳಿಗೂ ರಜೆ ಸಿಕ್ಕಿದೆ    

ತಂಗಾಳಿ  ಬೀಸುತಲಿ ಮಾತು 
ಅಲೆಗಳು ರಾಚುತಲಿ ಪ್ರೀತಿ 
ಸ್ನೇಹ ಸೇತುವೆ ನಿಲ್ಲಬೇಕಿದೆ 
ಜೀವನ ಪಯಣ ಸಾಗಬೇಕಿದೆ 

ಸೋಮವಾರ, ಆಗಸ್ಟ್ 20, 2018

ಕಡೆದ ಗೂಡು

ಗೂಡು ಕಡೆದರೇನು ಪ್ರಿಯೆ 
ನಾಡು ನಮ್ಮದಲ್ಲವೇ 
ಬೀಡುಬಿಟ್ಟು ಕಡೆದ ಮರದಿ 
ಹಾಡುವ ಬಾ ಮೆಲ್ಲಗೆ 

ಇಟ್ಟಿದ್ದ ಕಾಳು ಕಳೆದರೇನು
ಪುಟ್ಟ ಹೊಟ್ಟಿ ತುಂಬದೇ 
ದುಷ್ಟ ಜನರಿವರು, ಪ್ರಿಯೆ 
ದಟ್ಟಕಾಡು ಇಲ್ಲವೇ 

ಕಸಕಡ್ಡಿ ಗೂಡುಕಟ್ಟುವುದೇನು 
ಹೊಸದಲ್ಲ ಗೆಲ್ಲುವೆ 
ತುಸು ಸಮಯವಾಗಬಹುದು 
ಕೊಸರು ಕೊಡಬೇಕೇ ಇಲ್ಲಿಗೆ 

ಹಳೆಯ ವಿಷಯ ಆದರೂ ಪ್ರಿಯೆ 
ಗೆಳೆಯ ಜೊತೆ ನಾನಿಲ್ಲವೆ 
ತಿಳಿ ಬಿಸಿಲು ಹಸಿರು ಸುತ್ತಲಿಹದು  
ಸೆಳೆಯುತ್ತಿದೆ ಬಾ, ಹಾರುವ ಅಲ್ಲಿಗೆ 

ಗುರುವಾರ, ಆಗಸ್ಟ್ 2, 2018

ಕೊಂಡಿ ಬಿಚ್ಚಿ

ಆಗೊಮ್ಮೆ ಈಗೊಮ್ಮೆ ಚನ್ನಾಗಿ ಓದುತ್ತಿದ್ದೆ 
ನೆನಪಾದಾಗ ದೀಪಾ ಹಚ್ಚಿ 
ಓದ್ಮುಗ್ಸಿ ಹಾಳಾಗಿ ಹೋಗೋಣ ಅಂತಿದ್ದೆ 
ಹಿಡದಿಟ್ಲು ಹೃದಯ ಚುಚ್ಚಿ 

ಹಿಂದೊಮ್ಮೆ ಓಡಿದ್ದೆ ಅವಳ ನೆನಪಾಗಿ 
ಕೈ  ಮೇಲೆ  ಹಚ್ಚೆ ಹಚ್ಚಿ 
ಮುಂದೇನೂ ಓಡ್ತೀನಿ ಅನ್ನೋದು ಗೊತ್ತಿಲ್ಲ 
ಕಟ್ಟಿದ್ದ ಸರಪಳಿಯನ್ನು ಬಿಚ್ಚಿ 
ಹೀಗೊಂದು ಕನಸು ಮೊನ್ನೆ ಮೊನ್ನೆ ಬಿದ್ದಿತ್ತು 
ಓಡಿದ್ಲು ಲಚ್ಚಿ ತುಟಿಯ ಕಚ್ಚಿ 
ಹಿಡಿಯೋಕೆ ಹೋಗಿದ್ದೆ ಮತ್ತೆದ್ದು ಬಿದ್ದಿದ್ದೆ 
ಸೇರಿದ್ದೆ ಸರಪಳಿ ಕೊಂಡಿ ಬಿಚ್ಚಿ 

ಶುಕ್ರವಾರ, ಜುಲೈ 6, 2018

ಹಸಿರು ಉಳಿಸಿ

ಬೇರು ನೋಡಿರಣ್ಣ 
ಮರದ ಬೇರು ನೋಡಿ 

ಸುತ್ತುವರಿದ ಮಣ್ಣಾ 
ಜೇಡಿನ ಮಣ್ಣಾ ನೋಡಿ 

ಧರೆಯೊಳಗೆ  ಇಳಿಸಿ ಕಣ್ಣಾ 
ಒಳಗಿನ ಮರ್ಮಾ ನೋಡಿ 

ಒಣಗಿಹೋಗಿದೆ ಬಣ್ಣಾ 
ಬೇರಿನ ತುದಿಯಾ ನೋಡಿ 

ನೀರು ಧರೆಗೆ ಇಳಿಯದಣ್ಣಾ 
ಸುತ್ತಲೂ ಸಿಮೆಂಟ್ ರಸ್ತೆ ನೋಡಿ 

ಇಂಗು ಗುಂಡಿ ತೋಡಿರಣ್ಣಾ  
ನೀರುಉಣಿಸಿ ಹಸಿರ ಕಾಪಾಡಿ 

ಹಸಿರು ಉಸಿರು ಕೊಡುವುದಣ್ಣಾ 
ಉಳಿಸಿ ಬೆಳಸಿ ನಲಿದಾಡಿ 

ಶುಕ್ರವಾರ, ಮೇ 18, 2018

ದೊಡ್ದುರ ಸೇರಿದೆವು

ನಮ್ಮೂರ ದಾರಿ ಬಿಟ್ಟು ದೊಡ್ದುರ ಸೇರಿದೆವು
ಬೆಳೆ  ವಣಗಿತು ಮಳೆ ಬರದೇ  ಕಾಡಿ 
ಬಿತ್ತಿ ಬೆಳೆಯುವ ಕೈಗೆ ಅದಿರಿನ  ಬುಟ್ಟಿ ಬಂತು
ಹೊತ್ತು ಸಾಗಿಸಬೇಕಿದೆ ಕನಸ ದೂಡಿ
ಗುಳೆ ಎದ್ದು ಬಂದಿದೀವಿ ಹಸು ಕರು ಹೇಗಿವೆಯೋ
ಚಿಂತೆ ತುಂಬಿದೆ ಮನಸಲ್ಲಿ  ನೋವ ಮೂಡಿ
ಜಾತಿ ಕುಲವೆನ್ನದೆಯೇ ಜೊತೆಯಾಗಿ ನಾವೆಲ್ಲ
ದುಡಿದು ಊರ ಸೇರಬೇಕಾಗಿದೆ ನೋಡಿ 

ಸಂಜೆ ರಾಜಕೀಯ


ಬೆಳಿಗ್ಗೆ ಕಾ-ಕು ಜೋತುಬಿದ್ದು 
ಸಂಜೆ ರಾಜ್ಯಪಾಲರ ಸದ್ದು
ರಾತ್ರಿಪೂರಾ ಕೋರ್ಟು ಎದ್ದು
ಯೆಡ್ಡಿ ಸಹಿತ  ಬಿಜಿಪಿ ಗೆದ್ದು
ಕುರುಡ ಕಾಂಚಾಣ ಕುಣಿಯುತಲಿದ್ದು
ಚುನಾವಣೆ ಬರಬಹುದು ಸರ್ಕಾರ ಬಿದ್ದು
ಮುಂದೆ ಆದ್ರೂ ಒಂದೇ ಪಕ್ಷಕ್ಕೆ ಓಟು ಕೊಟ್ಟು 
ಪೂರ್ತಿ ಬಹುಮತ ಬರೋಹಾಂಗೆ ಗುಂಡಿ  ವತ್ತು
-ಪ್ರಭಂಜನ 

ಬುಧವಾರ, ಏಪ್ರಿಲ್ 25, 2018

ಬೆಳೆದೆರೆಡು ಹೂವುಗಳು


ತೆಳ್ಳನೆಯ ಚಪ್ಪರದಿ 
ಬಳ್ಳಿಯು ತುದಿಯಲ್ಲಿ 
ಬೆಳ್ಳನೆಯ ಹೂಗಳ  ನೋಡೋ 

ಬಾಳೆಂಬ ತೋಟದಲಿ 
ಬೆಳೆದೆರೆಡು ಹೂವುಗಳು 
ಬಳುಕುತಾ ತಲೆದೂಗಿವೆ ನೋಡೋ 

ಅಂಬರದಿ ಸುವಾಸನೆಗೆ  
ದುಂಬಿಗಳ ಹಾರುತಿವೆ 
ತುಂಬಿದ ಮೊಗವ ನೋಡೋ 

ನೈದಿಲೆಯು ನಾಚಿಕೆಗೆ 
ಬೈತಲೆಯು ಎರಡಾಗಿ 
ಕೈ ಹಿಡಿದ ನಗುವ ನೋಡೋ   

ಬಟ್ಟಲು ಗಣ್ಣನು ಬಿಟ್ಟು 
ಬೆರಗಾಗಿ ಸುತ್ತ ನೋಡುತ್ತಿವೆ   
ಬಳಿಸಾಗಿ ಸೊಬಗ ಸವಿಯಬೇಕು ನಾವು 

ಬುಧವಾರ, ಏಪ್ರಿಲ್ 18, 2018

ಕದ್ದ ಮಡಿಕೆ ತೋರು

ನಂದಗೋಕುಲದಲ್ಲಿ
ಮಿಂದ ನಮ್ಮ ಮಡಕೆಗಳ  
ತಂದು ಜೋಡಿಸಿರುವೆ ನೀ 
ಕಂದನಲ್ಲವೋ  ಕೃಷ್ಣ 

ಬೆಣ್ಣೆ ತುಂಬಿ ತರುತಿದ್ದೆ 
ಹಣ್ಣು ಹಾಲು ತುಂಬುತ್ತಿದ್ದೆ  
ತಣ್ಣನೆಯ ಮೊಸರು ಮಾರುತಿದ್ದೆ 
ಕ್ಷಣದಲ್ಲಿ ಕದ್ದು ತಂದೆ  ಕೃಷ್ಣ  

ಸುಣ್ಣದಿಂದ ಚಿತ್ರ ಬಿಡಿಸಿ 
ಬಣ್ಣ ತುಂಬಿದ ನನ್ನ ಮಡಿಕೆ 
ಕಣ್ಣು ಬಿಟ್ಟು ಹುಡುಕಿದರೂ 
ಸಣ್ಣ ಕುರುಹು ಇಲ್ಲ ಕೃಷ್ಣ 

ಸಭ್ಯನಲ್ಲವೇ ನೀನು   
ಲಭ್ಯವಿದ್ದರೆ ನನ್ನ ಮಡಿಕೆ ತೋರು 
ಅಭ್ಯಂಜನ ಮಾಡಿಸಿ ಬೆಣ್ಣೆ ಕೊಡುವೆ  
ಪ್ರಭಂಜನನಂತೆ ಬಾರೋ ಕೃಷ್ಣ 

ಶ್ರೀ ಶೇಷಾಗಿರಿರಾವ್

ಹೂವ್ವಿನ ಹಡಗಲಿ ವಾಸ
ಶ್ರೀ ಶೇಷಗಿರೀಶ
ಮಲ್ಲಿಗೆ ತೋಟದಲ್ಲಿ
ಮಾನವೀಯತೆಯ ಹೂ ಬೆಳೆದ \\ ಪ \\

ಬರವಣಿಗೆಯ ಮೂಲಕ ಬಡೆದಿಬ್ಬಿಸಿ 
ಜನಜಾಗೃತಿ ಮೂಡಿಸಿದ ಕವೀಶ   
ಬರೆದಂತೆ ನುಡಿದು ನುಡಿದಂತೆ ನೆಡೆದು  
ಮನುಷತ್ವಕ್ಕೆ ಆದರ್ಶಪ್ರಾಯರಾದ  1.

ಅವರವರ ಧರ್ಮ ಆಚರಣೆಗೆ
ಬೆಲೆಕೊಟ್ಟು ಎಲ್ಲರೊಂದಿಗೆ ಬೆರೆತ 
ಬವಣೆಗಳು ಎಷ್ಟೇ ಬಂದರೂ
ಬಿಡದೆ ತನ್ನ ನೈಜ ಧರ್ಮ ಪಾಲಿಸಿದ  2

ಭಾವನೆಗಳಿಗೆ ಬೆಲೆಕೊಟ್ಟು ಬೆಳೆಸಿದ
ಬಾಲ ಕವಿಗಳೆಷ್ಟೋ ನಾನರಿಯೆ
ಬದುಕಿದರೆ ಹೀಗೇ ಬದುಕಬೇನೆಂದು ತೋರಿ
ಬಾರದ ಲೋಕಕ್ಕೆ ಇಷ್ಟುಬೇಗ ಹೋದದ್ದು ಸರಿಯೇ 3

ಭಾನುವಾರ, ಮಾರ್ಚ್ 18, 2018

ಯುಗಾದಿ


ಬೇವು ಹೂವು, ಬೆಲ್ಲ ಸೇರಿ
ಬಂತು ಮತ್ತೆ ಯುಗಾದಿ
ಬನ್ನಿ ಎಲ್ಲ ಸಂಭ್ರಮಿಸೋಣ

ಸಿಹಿ ಕಹಿ ಮುನಿಸು ಸೊಗಸು
ಸೇರಿ ಜೀವನದ ದಾರಿ
ಸಾರುವ ಸತ್ಯ ಅರಿಯೋಣ

ಮರ ಗಿಡ ಚಿಗುರಿ ಚಿಗುರಿ
ಮೂಡಿದೆ  ಹೊಂಬಣ್ಣ
ಮನಸು ಬಿಚ್ಚಿ ನಲಿಯೋಣ

ಎಳೆಯ ಎಲೆಯ ಹಸಿರು ಸೂಸಿ
ಹೊಳೆಯುತ್ತಿದೆ ಇಳಿಯು
ಹಳೆಯ ದ್ವೇಷ ಮರೆಯೋಣ

ಹೂವು ಕೊಟ್ಟು ಪ್ರೀತಿ ಹರಿಸಿ
ಹೊಸ ವರ್ಷ ಸ್ವಾಗತಿಸಿ
ಹೊಸತು ಕನಸು ಕಾಣೋಣ 

-ಪ್ರಭಂಜನ ಮುತ್ತಿಗಿ