ಸೋಮವಾರ, ಡಿಸೆಂಬರ್ 16, 2019

ತಂಪು ಕನ್ನಡಕ

ಕೊಳ್ಳಿ ಹೊಸಾ ತಂಪು  ಕನ್ನಡಕ 
ಕಣ್ಣನ್ನು ಇಂದೇ ಕಾಪಾಡಿಕೊಳ್ಳಿ    
ಪ್ರೇಯಸಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲು 
ಆಗದವರು ಇದನ್ನು ಮೊದಲು ಹಾಕಿಕೊಳ್ಳಿ   

ಕನ್ನಡಕಗಳು ನಗುನಗುತ ನಿಂತಿವೆ   
ಮಿನುಗುತಾ ಸೆಳೆಯುತ ನಿಮ್ಮಗಳನ್ನ  
ಯುವತಿಯ ಕಣ್ಣಲ್ಲಿ ಕಣ್ಣಾಗುವ ಆಸೆ 
ಕೆಲವಕ್ಕೆ, ಯುವಕರ ಕಣ್ಣಲ್ಲಿ ತೇಲುವಾಸೆ  

ಯುವಕರ ತೀಕ್ಷ್ಣ ಕಿರಣಗಳ ತಡೆವುದು   
ಯುವತಿಯರ ಕೋಪದಾ ಕಿರಣ ತಾಕದು 
ಸೂರ್ಯ ಕಣ್ ಹೊಡೆಯುವುದ ಹಿಡಿವುದು  
ಚಂದ್ರನಂತೆ ತಂಪು ಕೊಡುವುದು ಕಣ್ಣಿಗೆ 

ಕಪ್ಪು ಕೆಂಪು ನಸುಗಂಪು ಗಾಜುಗಳು  
ಮುಖತೋರಿ ಹೇಳಿವೆ ನಾ, ತಾ ಮುಂದು
ಯಾರಿಗೆ ಯಾವ ಅದೃಷ್ಟವಿದೆಯೋ ಕಾಣೆ 
ಬಿಕಾರಿಯಾದರೆ ಹೊಟ್ಟೆತುಂಬುವುದು ಜಾಣೆ  




ಚಿಟ್ಟೆ

ಬಿಟ್ಟೆ ಬಿಟ್ಟೆ ನನ್ನಾ ಚಿಟ್ಟೆ
ಬಣ್ಣತುಂಬಿ ಹಾರಾಡುತ್ತಿರುವೆ   .. pa..
ಯಾವ ಹೂವ ಮೇಲೆ ಕುಳಿತರೇನು
 ಮಕರಂದ ಹೇರಿದ ಹೂ ನಿನ್ನದಲ್ಲವೇ!  --anu pa..

ಮೊಟ್ಟೆ ಒಡೆದು ಹೊರಗೆ ಬಂದು
ಹೊಟ್ಟೆ ತುಂಬಾ ಎಲೆಯ ತಿಂದು
ಕಟ್ಟಿ  ಗೂಡ ಒಳಗೆ ಸೇರಿಕೊಂಡು
ಚಿಟ್ಟೆಯಾಗಿ ಹೊರಗೆ ಬರುವ

ರೆಕ್ಕೆಗೆ ಬಣ್ಣ ಬಾಳಿದವರಾರೋ
ಚಕ್ಕನೆ ಹಾರಲು ಕಳಿಸಿದವರಾರೋ
 ಹೊಕ್ಕು ಹೂವಿನ ತೊಟ್ಟು ಹುಡುಕಿ
 ಮಕರಂದ ಹೀರಿ ಹಾರುತಿರುವ

ಶುಕ್ರವಾರ, ಡಿಸೆಂಬರ್ 13, 2019

ತೆರೆದ ಬಾಹು

ನಾನು ಹುಡುಗ ನೀನು ಹುಡುಗಿ
ಕಾಡುವೆ ಏಕೆ ಕನಸಲಿ .  
ಒಮ್ಮೆ ಎದಿರು ಬಂದು ನೋಡು 
ಪ್ರೀತಿ ಸುರಿಸುವೆ ಎದುರಲಿ 

ಒರೆಕಣ್ಣು ಕೆನ್ನೆ ಮೇಲೆ 
ಸೆಳೆವುದೊಂದು  ಸಣ್ಣ ಕುಳಿ
ಗಲ್ಲ ಹಿಡಿದು ವತ್ತಲೇ  ಮೊಹರು 
ನಿನ್ನ ಹಣೆಗೆ ನನ್ನ ತುಟಿಯಲಿ

ತೆರೆದ ಬಾಹುಗಳಿಂದ ಅಪ್ಪಿ 
ಬಿಸಿಯೇರಿಸಲೇ  ಈ  ಚಳಿಯಲ್ಲಿ
ತಬ್ಬಿಕೊಂಡು ನಿಂತು ಪ್ರೀತಿ 
ಪಿಸುಮಾತು ಹೇಳಲೇ ಕಿವಿಯಲ್ಲಿ

ಮಂಜು ಸುರಿವ ರಸ್ತೆಯಲ್ಲಿ
ಮಂಡಿಯೂರಿ ನಿಲ್ಲುವೆ ನಿನ್ನಡಿಯಲಿ
ಮಂದಿ ಸುತ್ತಲಿದ್ದರೂ ಕೊಡುವೆ ಹೂ  
ಮಂದಗಮನೆ ಮುಡಿದು ಬಿಡು ಎದೆಯಲಿ 

ಶುಕ್ರವಾರ, ಅಕ್ಟೋಬರ್ 25, 2019

ನಕ್ಷತ್ರ ಲೋಕ


ಇರುಳಲ್ಲಿ ತಾರಸಿಯಲ್ಲಿ 
ಅಕ್ಕ ಪಕ್ಕ ಕುಳಿತು ಇಲ್ಲಿ 
ಕನಸುಗಳ ಬಿಚ್ಚಿಕೊಂಡು 
ಚಿಲುಮೆ ಕಾಸುತ ಚಳಿಯಲ್ಲಿ 

ನೋಡಲ್ಲಿ ಮೋಡದಲ್ಲಿ 
ವಿಮಾನ ಹಾರುವುದಲ್ಲಿ 
ರೆಕ್ಕೆ ಪುಕ್ಕ ಕಟ್ಟಿಕೊಂಡು 
ಹಾರೋಣ ಬಾ  ಬಾನಿನಲ್ಲಿ 

ನನ್ನಲ್ಲಿ  ನಿನ್ನಲ್ಲಿ 
ಇಲ್ಲದಿರುವುದು ನೋಡು ಅಲ್ಲಿ 
ಅಲ್ಲಿರುವುದ ನೋಡಿಕೊಂಡು 
ಆವಿಷ್ಕಾರಿಸೋಣ ಬೆಳಕು ಚಲ್ಲಿ 

ಚಂದ್ರಲೋಕ ನಿನ್ನದಿರಲಿ 
ಮಂಗಳ ಲೋಕ ನನ್ನದಿರಲಿ 
ಅವೆರೆಡರ ಸುತ್ತಿಕೊಂಡು 
ಮುಂದೆ ಸಾಗುವ ನಕ್ಷತ್ರ ಲೋಕದಲ್ಲಿ 

-ಪ್ರಭಂಜನ ಮುತ್ತಿಗಿ 

ಭಾನುವಾರ, ಸೆಪ್ಟೆಂಬರ್ 29, 2019

ಬೆಳಕು

ಹಳೆಯ ಬಾಗಿಲಿನ 
ಹಿಡಿಕೆಯಂತಾಗಿದೆ ಮನಸು 
ಹೊಸಾ ಬೆಳಕಿಗೆ 
ಹಾತೊರೆಯುವಂತಿದೆ ನೆರಳು 

ಬಂದು ತೆಗೆಯುತ್ತಿದ್ದರು 
ನೊಂದ ಮನಸಿನ ಕೀಲಿ 
ಹಿಂದೆ ಸರಿಯಿತ್ತು 
ಇಂದು ಬರೀ ತೂತಾಗಿದೆ  

ತಾಳಿ ಯೋಚಿಸಿದರೆ 
ತೆರೆಯುವುದು ಮನಸಿನ ದಾರಿ 
ತೂತಾದರೂ ಸರಿಯೇ 
ತೂರಿ ಕತ್ತಲೆ ಓಡಿಸುವಂತೆ  ಬೆಳಕು 

ಗುರುವಾರ, ಮೇ 30, 2019

ಸಂಧಾನ

ಬಾಳ ಪಯಣದ ಹಾದಿಯಲ್ಲಿ 
ಅಲ್ಲಲಿ ನೂರಾರು ನಿಲ್ದಾಣ,
ನೆನಪುಗಳನ್ನು ಬಿಟ್ಟು  ಹೋಗೋ
ಪಯಣಿಗರ ಜೊತೆಯಲ್ಲಿ ಏನೆಲ್ಲಾ ಸಂಧಾನ..

ದೋಣಿ ತೇಲುತಿದೆ ನೀರಿನಮೇಲೆ 
ಅಲ್ಲಲ್ಲಿ ಕಲ್ಲು ಮರ ದಿಮ್ಮೆ 
ನಿಧಾನವಾಗಿ ದಾಟಿ  ಹೋಗೋ 
ಪಯಣಿಗರ ಜೊತೆಯಲ್ಲಿ ಏನೆಲ್ಲಾ ಸಂಧಾನ 

ಮನಸ್ಸು ಸಾಗುತಿದೆ ಆಸೆಗಳಮೇಲೆ 
ಅಲ್ಲಲ್ಲಿ ನೋವು ನಲಿವಿಗೇನು ಕಮ್ಮಿ 
ಅನುಭವಗಳ ಹೊತ್ತು ಹೋಗೋ 
ಪಯಣಿಗರ ಜೊತೆಯಲ್ಲಿ ಏನೆಲ್ಲಾ ಸಂಧಾನ 

ಜೀವನ ಸಾಗುತಿದೆ ಹೊಂದಾಣಿಕೆಮೇಲೆ 
ಅಲ್ಲಲ್ಲಿ ಕಲ್ಲು ಮುಳ್ಳುಗಳು ದಾರಿಯಲ್ಲಿ 
ಸಂ-ಸಾಗರ ದಾಟೋದಕ್ಕೆ ಹೋಗೋ 
ಪಯಣಿಗರ ಜೊತೆಯಲ್ಲಿ ಇಡಬೇಕಿದೆ ಹೆಜ್ಜೆ ನಿಧಾನ ! 
ಅದುವೇ ಜೀವನಗೆಲ್ಲೊ ಗುಟ್ಟ ತಿಳಿದಿಕೋ ಪ್ರಧಾನ!. 

ಸೋಮವಾರ, ಏಪ್ರಿಲ್ 8, 2019

ರೊಟ್ಟಿ ತಟ್ಟು

ರೊಟ್ಟಿಯ ತಟ್ಟು ಕಲಸಿ ಜೋಳದಹಿಟ್ಟು 
ರೊಟ್ಟಿಯ ತಟ್ಟು ಕೈಬಳೆ ಮೇಲಕ್ಕೆ ಕಟ್ಟು 

ಬೇಡಿ ಸಾಕಾಗಿದೆ ಜೀತ ಮುಗಿಯದೆಂದು 
ನೋಡಿ ಈ ಕರ್ಮವು ಕಳೆಯುವುದೆಂದು 
ಕಾಡು ಅಲೆದು ಒಣಗಿದ ಕಟ್ಟಿಗೆಗಳ ತಂದು 
ಹೂಡು ಜೋಡಿಸಿರುವೆ ರೊಟ್ಟಿ ಮಾಡಲೆಂದು 

ಕಳೆಗುಂದಿದ ಹಂಚನು ಬದಿಗೆ  ಸರಸಿ
ಛಳಿ ಕಳೆಯಲು ಬಿಸಿ ಚಹಾಕಾಸಿ ಕುಡಿಸಿ     
ಹಳೆಯ ಡಬ್ಬಿಯ ಎಳೆದು ಹಿಟ್ಟು ಸೂಸಿ  
ಪಳಗಿದ ಕೈ ಕಲಸಿದೆ ಹಿಟ್ಟು  ನೀರುಕ್ಕರಿಸಿ

ಮಣ್ಣಿನ ಓಲೆ ಒಳಗಿ ಬೆಂಕಿಯ ಕೆಂಪಲ್ಲಿ 
ಹೆಣ್ಣಿನ ಕೈ ರೊಟ್ಟಿ ತಟ್ಟೋ ಕಲೆಯ  ನೋಡು 
ಕಣ್ಣಲ್ಲಿ ಕಣ್ಣಿಟ್ಟು  ಊದಿ ಉರಿವ ಒಲೆಯಲ್ಲಿ 
ಸಣ್ಣ ರೊಟ್ಟಿ  ಉಬ್ಬಿದ ಸೊಬಗ  ನೋಡು 

**ಮಡಿಲಲ್ಲಿ**


ಅಮ್ಮ ನಿನ್ನ ಮಡಿಲಲಿ ಮಲಗಿ 
ಸುಮ್ಮನೆ ನಗುವೇ ನಿನ್ನ ನಗುವಿನಲಿ
ಗುಮ್ಮಾ ಬರಲಿ ಹೆದರದೆ ನಾನು 
ಒಮ್ಮೆಲೇ ಓಡಿಸುವೆ ಹರುಷದಲಿ 

ನನ್ನ ನಗುವಿನ ಚಿನ್ನಾಟದ ನೋಟ 
ನಿನ್ನ ಬೊಗಸೆ ಕಣ್ಣಿನಲಿ ನೋಡುತ್ತಿರುವೆ 
ನನ್ನ ನಗುವ ಸೊಬಗ ಸೆರೆಯಿಡಿಯಲು 
ಚಿನ್ನ ಅಲ್ಲಿ ನೋಡು ನೀ ಎನ್ನುತ್ತಿರುವೆ  

ಹಸಿವೆಯಲ್ಲೂ ಬಿಡದೇ ಹಾಲು ಉಣಿಸಿ 
ಹೊಸ ಲೋಕ ನೀ  ಪರಿಚಯಿಸುತ್ತಿರುವೆ  
ಹುಸಿಮಾಡುವುದಿಲ್ಲ ನಿನ್ನ ಕನಸು
ಹೊಸಕಿ ಹಾಕುವೆ, ಬೆಳೆದು ಬಡತನದ ಬೇಗೆ 

ಮಂಗಳವಾರ, ಫೆಬ್ರವರಿ 26, 2019

ಆತಂಕದ ಜಾಲ


ಹರಿದು ಹೊಲೆಯಬೇಕಿತ್ತು ಅಂದು 
ಹೊಸಾ ಬಟ್ಟೆಯ ಮೈ ಅಳೆತೆಗೆ 
ಹೊಲೆದು ಹರಿದಾಗಿದೆ ಜೀವ  ಇಂದು 
ಹಳೇ ದ್ವೇಷಕ್ಕೆ ದೇಶ ನಲಗುತಿದೆ

ಹೊಸತನಕ್ಕೆ ಅಂಟಿಕೊಂಡರೂ ಅಂದು 
ಹೊಲೆದ ರಾಟಿಯೇ ಇಂದಿಗೂ ಮೂಲ 
ಹೊಸ ಜೀವಗಳ ನೆತ್ತರು ಹರಿಯುತ್ತಿದೆ ಇಂದು 
ಹಳೇ ರಾಕ್ಷಸರೇ ಮೂಲ ಈ ಆತಂಕದ ಜಾಲ    

ಹರಿದ ಬಟ್ಟೆಗಳ  ಕತ್ತರಿಸಿ ಹೊಲೆದು 
ಹೊಸಾ ಕನಸ ತುಂಬುವುದು ಅಮ್ಮನ ಕೆಲಸ 
ಹರಿದ ರಕ್ತ ಮತ್ತೆ ಹರಿಯದಂತೆ ತಡೆದು 
ಹೊಸಾ ಜೀವನ ರೋಪಿಸಬೇಕಿದೆ, ಪ್ರಧಾನಿ ಕೆಲಸ 

ಹಳೇ ರಾಟಿ ತುಕ್ಕು ಹಿಡಿದಿದೆ ಎಂದು 
ಹಾಗೆ ಹೊರಹಾಕದಿರಿ ಇದ್ದ ಸ್ಥಿತಿಯಲ್ಲೇ ಅದನ್ನ 
ಹೊಸಾ ಅಮ್ಮ ಬರಲಾರಳು ಒಮ್ಮೆ ಹೊರಹಾಕಿದರೆ 
ಹೆಮ್ಮೆಯಿಂದ ರಕ್ಷಿಸಿ ಅವಳು ರಕ್ಷಿಸುವಂತೆ ನಿಮ್ಮನ್ನು