ಶುಕ್ರವಾರ, ಡಿಸೆಂಬರ್ 15, 2017

ಸೋತೆ

ಮನಸೇ ಮನಸೇ ನಿನ್ನ ಮೌನಕೆ ನಾ ಸೋತೆ 
ಕನಸೇ ಕನಸೇ ನೀ ಏಕೆ ಕಾಡುತಿರುವೆ 

ಬೊಗಸೆ ಕಣ್ಣಿಲಿ ಹೊಳಪೊಂದು ಮಿಂಚಿದೆ 
ಅದನೋಡುತ ಕಳೆದುಹೋದೆ   
ಸೊಗಸಾಗಿ ನೈದಿಲೆ ಲತೆಯಂತೆ ಬಳಕುತಿದೆ
ಅದುಹಾರಲು ಮದವೇರಿತೇ   
ಬಾಗಿಲನ್ನು ಹಾಕಿ ಬೆಚ್ಚಗೆ ಇಡುತಿದೆ ರೆಪ್ಪೆ 
ಬಿಗಿದಪ್ಪಿ ಕರೆದಂತಿದೆ  
ಕಮಲದ ಎಲೆಯಂತೆ ಸೆಳೆಯುತಿದೆ  ಕಣ್ಣು 
ಜಿಂಕೆಯ ಚಲುವಿಗೆ ಇದೆ ಹೋಲಿಕೆ 


ಬಿಸಿಲಲ್ಲಿ ನರಳು ಕೊಡೆಯಂತೆ ಬಾಗಿದ  ಹುಬ್ಬು 
ಪ್ರೀತಿಯ ಮಳೆಯಲ್ಲಿ ಮಿಂದಂತಿದೆ 
ಉಸಿರಿಗೆ ಹೊಸತನ ಬರುವಂತಿದೆ ನಾಸಿಕವು 
ಸುಮಧುರ ಪರಿಮಳವ ಸೂಸಿದೆ   
ಬೆಸುಗೆಯ ಬಯಸುತ ತುಟಿ ನಲಿದಾಡುತಿವೆ 
ಇನಿಯನ ಸನಿಹಕೆ ಕಾದಂತಿವೆ 
ಹುಣ್ಣಿಮೆ ಚಂದ್ರನ ಹೋಲುವ ಆ  ದುಂಡುಮುಖ  
ನನ್ನ ಮನಸು ಹೃದಯವ ಸೆಳೆದಿದೆ   

ಭಾನುವಾರ, ಅಕ್ಟೋಬರ್ 29, 2017

ಮನ್ಮಥನಾರೇ

ಪಚ್ಛೆ ತುಂಬಿದ ನಡು ಬೈತಲು ಪದಕ  ಹೇಳುತಿದೆ 
ಬೆಚ್ಚನೆಯ ನೋಟಕ್ಕೆ  ಜಾರಿಬಿಡುವ ಭಯಾನನಗೆ    
ಹಚ್ಚಿದಾ ಗುಲಾಬಿ ತುಟಿಬಣ್ಣ ಮಿಂಚಿ ಮುನುಗುತಿದೆ 
ಕಚ್ಚಿ ಮುದ್ದಾಡಲು ಹುಟ್ಟಿದ  ಅದೃಷ್ಟದವನಾರೇ  

ಹೊಚ್ಚ ಹೊಸಾ ತಿಳಿನೀಲಿ ಬಣ್ಣದ ರೇಷ್ಮೆ ಸೀರೆ 
ಚುಚ್ಚುತ್ತಿಹುದೇನೋ ಕಚಗುಳಿ ಒಳಗೊಳಗೇ
ಹುಚ್ಚು ಹಿಡಿಸುತಿದೆ ಈ ನಿನ್ನ ಮಧುರ ಮುಗುಳ್ನಗೆ
ಮುಚ್ಚಿದಾ ರೆಪ್ಪೆಯಲಿ ನೀ ಕಂಡ ಮನ್ಮಥನಾರೇ  

ಬಿಚ್ಚಿ ಮುಂಗುರುಳುಗಳು ನಯವಾಗಿ ಹಾರಿವೆ 
ಬಚ್ಚಿಡಲೇ ಈ ಚಲುವೆಯನ್ನ ನನ್ನ ಎದೆಯೊಳಗೆ 
ಗುಚ್ಛಹರಳಿನಾ ಕಿವಿಯೋಲೆ ನವಿರಾಗಿ ಸೆಳೆಯುತಿದೆ    
ಮೆಚ್ಚಿ ಮನಸೋತೆ ಪ್ರೀತಿಸುವೆ,  ಒಪ್ಪಿ ಪ್ರೀತಿಸು ಬಾರೆ! 

ಗುರುವಾರ, ಅಕ್ಟೋಬರ್ 5, 2017

ಕಾಣುವ ಕಡಲು


ಕಾಣುವ ಕಡಲಲಿ ಮಿಂದು ಹೋಗಿದೆ ಮನ . 
ಕಾಣುವ ಕಡಲಲಿ ಮಿಂದು ಹೋಗಿದೆ ಮನ 

ನೋಡುತ್ತಿರುವೆ ಕನ್ನಡ-ಕದಲಿ ನಾ  
ಅಲೆಗಳು ಕಾಡುತ್ತಿವೆ ನನ್ನ ಈ ಕ್ಷಣ 

ಮುಳುಗುವ ಸೂರ್ಯನ ಕೆಂಪಿನ ಕಿರಣಾ 
ಮೋಡದೊಳಗಿಂದಾ ಇಣುಕುತಿದೆ 
ಚಿನ್ನದ ಅಂಚಿನ ಕಡಲಿನ ತುದಿಯಲಿ
ಅರ್ಧ ಮುಳುಗಿ ಮೊಗ ತೋರುತಿದೆ 
ಎಲ್ಲಿಗೆ ಹೊರಟಿರುವನೋ ರವಿ ಏನಿದೆಯೋ ಅಲ್ಲಿ --1

ನೋಡಬೇಕು ಅಲ್ಲಿ ಇರುವುದನ್ನ  
ಆ ಸೊಬಗನೂ ಸವಿಯಬೇಕು ಆದರೆ ಒಂದು ಕ್ಷಣ  

ವರುಷ ಕಳೆದರೂ, ಮುಳುಗುವ ಸೂರ್ಯನ
ಇರಳು  ವಿಭಿನ್ನವಾಗಿದೆಯಂತೆ 
ಏರಿಳಿತ ತುಂಬಿದ ಮನಸಿನ ಭಾವನೆ 
ಬಿಂಬಿಸಿದಂತೆ ನೆರೆಳು ತೋರುತಿದೆ 
ಯಾರಿರುವರೋ ಒಳಗೆ, ಏನುಸಿಗುವುದೋ ಕೆಳಗೆ  --2

ಇಳಿಯಬೇಕು, ರವಿ ಇಳಿಯುವ ಮುನ್ನ  
ಸೊಬಗನೂ,  ಹಿಡಿಯಬೇಕು ಇರುಳಲ್ಲಿ  ಆ ಕ್ಷಣ  

ಹುಣ್ಣಿಮೆ ಚಂದಿರನು ಹೋಗುವ ಅಲ್ಲಿ 
ಸಣ್ಣವನಾಗಿ  ಬರುತ್ತಾನೋ   
ರವಿ ಚಂದ್ರನ, ರವಿಯು ಚಂದ್ರನಾ, ರವಿಚಂದಿರನಾ 
ದೇವರು ನಿತ್ಯ  ನಿಯಂತ್ರಿಸುವವನೇನೊ --3

ನಿಯಂತ್ರಿಸುವವರಾರೋ,  ಮಾವನ ಮನೆ ಅಲ್ಲಿ ಇದೆಯೇನೋ?  
ಅರಿಯಬೇಕು ನಾನು,  ಸೊಬಗನು ಬರಿಯಬೇಕು ನಾನು . 

ಮಂಗಳವಾರ, ಸೆಪ್ಟೆಂಬರ್ 12, 2017

ಸತ್ಯದರ್ಶನ

ದಣಿದ ಜೀವನ ಸಾಗರವ ದಾಟಲು  
ಕೊನೆಯ ದೋಣಿ ಬಂದಿದೆ 
ಹಣೆಯ ಬರಹ  ಬದಲಾಗಿಸಲು 
ಅಣಿಯಾಗಿ ಹುಟ್ಟು ಹಾಕಿದೆ 

ಗಳಿಸಿದ್ದೆಲ್ಲವ ತೊರೆದು ಬಂದೆವು 
ಮುಳುಗೋ ಊರಲಿ ಸೂತಕ ತುಂಬಿದೆ 
ಬಾಳಿ ಬದುಕಿದ ಮನೆಮಠ ಗುಡಿಗಳು 
ಕಳೆಗುಂದಿ ನಿಂತು ಮೂಕಪ್ರೇಕ್ಷರಾಗಿವೆ      

ಅದೆಷ್ಟೋ ಕತೆಗಳು ಸಾರಿ ಹೇಳಿಲು        
ಬದುಕು ಬೆಸೆದ ಮೆಟ್ಟಿಲು ಮುಂದಿವೆ 
ನದಿಯ ಅಂಚಲಿ ಲವಲವಿಕೆ ಇತ್ತು 
ಬದಲಾಗಿ ನೀರವ ಮೌನ  ತುಂಬಿದೆ

ತ್ಯಾಗ ಬದುಕಿನ ಮೂಲ ಸೂತ್ರ 
ಭೋಗ  ಪಡಬೇಕು ಇಲ್ಲಿ ಇರುವವರೆಗೆ 
ಸಾಧ್ಯವೇ ಗಳಿಸಿದ್ದೆಲ್ಲಾ ಕೊಂಡು ಹೋಗಲು 
ಸತ್ಯದರ್ಶನ ಎಲ್ಲರಿಗೂ ಆಗಬೇಕಿದೆ 


-- ಪ್ರಭಂಜನ ಮುತ್ತಿಗಿ 

ಸೋಮವಾರ, ಆಗಸ್ಟ್ 28, 2017

*** ಮರ್ಮ ***


ಹಸಿರಿನ ಮರಗಳ ನಡುವಲಿ ಓಡಿವೆ 
ಪುಟ್ಟ ಪುಟ್ಟ ಎರೆಡು ಸೈಕಲುಗಳು 
ರಸಿಕರ ಕೈಬೀಸಿ ಕರೆದಿವೆ ರೈಲಲ್ಲಿ 
ತುಸು ಬಾಗಿದ ಎರೆಡು ಹಳಿಗಳು 

ಮುಂಜಾವಿನ ಸವಿಯನು ಸವಿಯಲು 
ತಂಗಾಳಿಯಲಿ ಹೊರಟಿವೆ ಆ ಹುಡುಗರು 
ರೈಲಲ್ಲಿ ಕನಸಿನ ಲೋಕ ಮುಟ್ಟಲು 
ಮಧುಚಂದ್ರಕೆ ಹೊರಟಿವೆ ಹೊಸ ಜೋಡಿಗಳು 

ಸೈಕಲ್ಲು ರಸ್ತೆ ಮೇಲೆ ಮೆಲ್ಲಗೆ  
ಹೊಸತೇನೋ ಹುಡುಕುತ ಸಾಗಿದೆ  
ರೈಲು ಹಳಿ ಮೇಲೆ ಬರಬೇಕಾಗಿದೆ 
ರಸಿಕರಿಂದ ಅದು ತುಂಬಿ ತುಳುಕಿದೆ  

ಸೈಕಲ್ಲು ಹುಡುಗರು ಆಗಲೇ ಬಂದಿವೆ 
ರೈಲು ಇಂದು ತುಂಬಾ ತಡ ಮಾಡಿದೆ 
ಬರುವವರೆಲ್ಲರ  ಒತ್ತಾಸೆ ಒಂದೇ ಆಗಿದೆ 
ತುಂತುರು ಸೋನೆ ಮಳೆ ಬರಬಾರದೇ?
--ಮಳೆಯಲ್ಲಿ ಮಿಂದು ಬೆವರನು 
ಒರೆಸಿ,  ಆನಂದ ಪಡಲಾಗದೆ 

ಆ ಹಸಿರು ಚಿಗುರು ಮಧ್ಯ ಕಂಪಿದೆ 
ವಯೋ ಧರ್ಮ ವ ಅರಿಯಲು
ರೈಲು, ರಸ್ತೆ, ಮಧ್ಯ ತಂತಿ ಬೇಲಿ ಇದೆ 
ಈ ಮರ್ಮವಾ  ತಿಳಿಸಲು 

ಭಾನುವಾರ, ಜುಲೈ 9, 2017

ಒಪ್ಪಲಿಲ್ಲ

ಕಾಲು ದಾರಿಯಲ್ಲಿ  ದಿನಾ 
ಕಾಲೇಜೆಗೆ ಹೋಗುತ್ತಿದ್ದೆ ನಾನು 
ಕಾದು  ನನಗಾಗಿ ನಿಲ್ಲುತ್ತಿದ್ದೆ
ಈ ಸೇತುವೆ ಮೇಲೆ ನೀನು 

ಮೇಲೆ ಆಗಸ ಕೆಳಗೆ ಪ್ರಪಾತ 
ನೀರಿಗೆ ಹೆದರುತ್ತಿದ್ದೆ ನಾನು 
ಕೈ ಕೈ ಹಿಡಿದು ದಾಟುಸುತ್ತಿದ್ದೆ 
ಸೇತುವೆ, ಎಚ್ಚರಿಕೆಯಿಂದ ನೀನು 

ಮರದ ಪ್ರತಿ ಹಲಗೆ ಮೇಲೆ
ಬರೆದೆ ನನ್ನ ಹೆಸರು  ನೀನು 
ಸಪ್ತಪದಿ ತುಳಿದಂತೆ ಆಗುತ್ತಿತ್ತು 
ಬಂದರೆ ನಿನ್ನ ಹಿಂದೆ ನಾನು 
 
ಇಬ್ಬರ ಮನೆಗೆ ಇದ್ದದ್ದು 
ಇದೊಂದೇ ಸೇತುವೆ ದಾರಿ 
ನಮ್ಮಿಬ್ಬರ ಹೃದಯದ ಬಡಿತಕ್ಕೆ 
ಸಾಕ್ಷಿಯಾಯಿತು ಸೇತುವೆ ನೋಡಿ 

ಒಪ್ಪಲಿಲ್ಲ ನಮ್ಮ ಪ್ರೀತಿ ಅಂದು 
ಸೇತುವೆ ದಾರೀಲಿ ನಾವು ಪರಾರಿ  
ಮುರಿತು  ಇಬ್ಬರ ಮನೆ ನಂಟು 
ಮುರಿದ ಹಲಗೆ ತೂಗಾಡುತ್ತಿವೆ ನೋಡಿ   

ಮಂಗಳವಾರ, ಮೇ 23, 2017

ಅವನ್ಯಾರೇ

ತಂಪು ತಂಗಾಳಿಯಲ್ಲಿ 
ಇಂಪಾದ ಸಂಗೀತದಲ್ಲಿ 
ಚಂದಿರನ ಹೊಂಬೆಳಕಲ್ಲಿ 
ಮಿಂದ ಮೋಹಕ ತಾರೆ  

ಮಿಂಚಿನಾ ಕಣ್ಣವಳೇ 
ಕೆಂಚಿನಾ ಮೊಗದವಳೇ 
ಕುಂಚವನು ಸರಿಪಡಿಸಿ 
ಕೊಂಚ ನಾಚಿದ  ಮದಿರೆ  

ಅಂದದಾ ಇರುಳಿನಲಿ 
ಚಂದಾದಾ ರಾಜಕುಮಾರ 
ಬಂದು ಕರೆದೊಯ್ಯುವ
ಎಂದಿನಂತೆ! ಅವನ್ಯಾರೇ !!   

ಗುರುವಾರ, ಏಪ್ರಿಲ್ 27, 2017

ಕಡಿದಾಯ್ತು

ಕಾಡು ಕಡಿದಾಯ್ತು 
ನಾಡು ಬೆಳೆದಾಯ್ತು 
ಗೂಡು ಇಲ್ಲದೆ ಬದುಕಬೇಕೇ  ನಾವು 

ಬೇಡಿ ತಿನ್ನಬೇಕಾಯ್ತು 
ತಡಿ ತಡಿ ಸ್ವಲ್ಪ ಹೊತ್ತು 
ಕೂಡಿ ಒಟ್ಟಿಗೆ ತಿನ್ನುವ ನಾವು 

ಒಡಲ ನೀರು ಬರಿದಾಯ್ತು 
ತಡಿ ಮಾಲಿನ್ಯ ಇವತ್ತು, ಇಲ್ಲವೇ   
ಪಡಿತರಚೀಟಿ,  ಗಾಳಿಗೂ ಬೇಕಾಗಬಹುದು !!

ಯಾವ ಹಾಡು

ಯಾವ ಹಾಡು ಹಾಡಲಿಲ್ಲಿ
ಹಸಿರ ತಾಯಿ ಮಡಿಲಲಿ .. ಪ

ಹೊಸತು ಏನೋ ಕನಸು ಕಾಣೋ
ಮನಸು ಮೂಡಿದ ಕ್ಷಣದಲಿ -- ಅ ಪ

ಹಸಿರ ಹಾಸಿನ ಬೆಟ್ಟಸಾಲು ಗಗನ ಚುಂಬಿಸುವಂತಿದೆ 
ಹರಿವ ತೊರೆಯು ಸರಸ ಸ್ವರ  ಸಂಗೀತ ಹಾಡಿದಂತಿದೆ

ಮೋಡಸೀಳಿ ಸೂರ್ಯ ರಶ್ಮಿ, ಭುವಿಯ ಮುತ್ತಿಕ್ಕಿದಂತಿದೆ
ಹೊಸತು ಭಾವ ಬೆರೆತು ಜೀವ ರಸಿಕರಾಗುವಂತಿದೆ

ಕಾಡು, ನಾಡ ಜನರ ಸೆಳೆದು ಪ್ರೀತಿ ರಸವ ಚಲ್ಲಿದೆ, 
ಹಸಿರ ಸೊಗಸು ಕಣ್ಣಿತುಂಬಿ , ಬಾಹು ತಾನೇ ತೆರೆದಿವೆ!

ತಂಪು ಗಾಳಿ ದೇಹ ಸೋಕಿ ಮನದ ಮೊಗ್ಗು ಅರಳಿದೆ 
ಬಣ್ಣ ಬಿಲ್ಲು ಮಿಂಚಿನೊಂದಿಗೆ ಬೆಳಕ  ತೋರಣ ಕಟ್ಟಿವೆ  

ಆಕಾಶದೆತ್ತರಕ್ಕೆ ಹಾರಿ ಮೋಡ ಹಿಡಿಯುವಂತಾಗಿದೆ 
ಭಾವ ತುಂಬಿದ ಹಾಡು ಹಾಡಿ ನಿನ್ನ ಮಡಿಲ ಸೇರಬೇಕಿದೆ 

ಮಂಗಳವಾರ, ಮಾರ್ಚ್ 14, 2017

ಹೆಣ್ಣು

ಹುಟ್ಟಿದೊಡೆ ಪುಟ್ಟ ಮಗುವಾದೆ 
ಉಳಿದ ಮಕ್ಕಳಿಗೆ ಅಕ್ಕ ತಂಗಿಯಾದೆ 
ಬೆಳೆದೊಡೆ ಒಲವ ಗೆಳತಿಯಾದೆ 

ಗಂಡನಿಗೆ ಪ್ರೀತಿಯ ಮಡದಿಯಾದೆ 
ಮನೆಬೆಳಗುವ ಮುದ್ದಿನ ಸೊಸೆಯಾದೆ 
ಕಂದಮ್ಮಗಳಿಗೆ  ಮಮತೆಯ ತಾಯಿಯಾದೆ 
ಮನೆಗೆ ಅಕ್ಕರೆಯ ಮುದ್ದಿನ ಮಗಳಾದೆ 

ಹೆಣ್ಣು ಮನೆ ನೆಡೆಸುವಳು
ಉಪಯೋಗಿಸಿ ಬಲು ಯುಕ್ತಿ 
ಹೆಣ್ಣು ಅಂದ್ರೆ ಅದು ಬರೀ ಹೆಣ್ಣಲ್ಲ
ಅದು ಒಂದು ಅದ್ಭುತ ಶಕ್ತಿ 

ಮಂಗಳವಾರ, ಜನವರಿ 3, 2017

ತೇಲುತ ನಿಂತಿವೆ

ತಾವರೆ ಎಲೆಗಳು 
ತೇಲುತ ನಿಂತಿವೆ 
ತೊರೆ ಕೆರೆ ಅಂಗಳದಿ
ತರು ಲತೆ ಬಳ್ಳಿಯು 
ತೆಳ್ಳಗೆ ಸಮ ಹರಡಿದೆ 
ತೀರಕೆ ತುಸು ದೂರದಲಿ 

ತುಂತುರು ಹನಿಯ 
ತಿಳಿ ಕೊಳ ಕೆಂದಾವರೆ 
ತೋಟವು ಮನ ಸೆಳೆಯುತಲಿ 

ತಾ ನಗುತಾ ಬಂದಳು 
ತಾವರೆ ಬೇಕೇ ಬೇಕೆಂದಳು  
ತಂದೆನು ಇಳಿದು ಕೆಸರಿನಲಿ 

ತುರುಬಲಿ ಹೂ ಮುಡಿಸಲು   
ತಬ್ಬಿ ನನ್ನವ ಎಂದಳು  
ತುಸು ಮೋಹವು ಉಕ್ಕುತಲಿ   

ತಂಗಾಳಿಯು ಬೀಸಿತು 
ತಂಪನು ಸುರಿಸಿತು 
ತನು ಮನು ಒಂದಾಗುತಲಿ