ಗುರುವಾರ, ಫೆಬ್ರವರಿ 13, 2025

*ಮೊದಲ ಧ್ವನಿ*


ಪುಟ್ಟ ಪುಟ್ಟ ಮಾತು
ಗಿಳಿಯಂತೆ ಸೊಗಸು
ನಿನ್ನಾ ಧ್ವನಿ

ಗೆರೆಬಿಚ್ಚಿ ನಲಿವ
ಗುಬ್ಬಚ್ಚಿಯಂತೆ ಕುಚಿಕು
ನಿನ್ನಾ ಧ್ವನಿ

ಕೋಗಿಲೆ ಕೂಗಿ
ಹಾಡಿದಂತೆ ನುಡಿಯು
ನಿನ್ನ ಧ್ವನಿ

ಒಲವ ಸುಧೆಯ
ಸೊಗಸಂತೆ ಮಧುರ
ನಿನ್ನಾ ಧ್ವನಿ

ಪ್ರೀತಿಯ ನಗುವಿನ
ಮುತ್ತುದುರಿದಂತೆ
ನಿನ್ನಾ ಧ್ವನಿ

ಮೊದಲ ತೊದಲ
ನೋಡಿಯಲ್ಲೇ ನಿನಾದ
ನಿನ್ನಾ ದ್ವನಿ

ಆ ಧ್ವನಿ ಕೇಳಲು
ಕಾಯುತಿದೆ ಕೊಳಲು
ನುಡಿಸಲು ಇನಿದನಿ

-ಪ್ರಭಂಜನ.

ನಿನ್ನೊಳಗೆ

ನಿನ್ನೊಳಗೆ ಒಳಗೆ
ಹುದುಗಿರುವ ಎದೆಗೆ
ನಾ ಬಿಡದೆ ಬಿಡಲೇ
ಹೂ ಬಾಣ

ನಿನ್ಮನಸಿನೊಳಗೆ
ಹೊಸ ಭಾವ ಬೆಸೆದು
ನಾ ಮಾಡಿಬಿಡುವೆ
ಹೊಸ ತಾಣ

ನಿನ್ನ ನೋಡು ನೋಡುತಲೇ
ಪ್ರೀತಿ ಗರಿ ಚಿಗುರಿ
ಗೀಚಿ ಬಿಡುವೆ
ಪ್ರಣಯ ಕವನ

ನಿನ್ನ ಪ್ರೀತಿ ರಾಗಕೆ
ಮೋಹ ಪಾಶಕೆ
ಸಿಲುಕಿ ಸವಿವೆ
ಮಧು ಪಾನ

ನಿನ್ನ ಸನಿಹ ಬಯಸುತಾ
ಹಾತೊರೆದು ಬರುವೆ
ಆವರಿಸು ಕೊಟ್ಟು
ಹೃದಯದಲಿ ಸ್ಥಾನ

ನಿನ್ನ ಜನುಮ ಜನುಮದಲಿ
ಪ್ರೀತಿ ಮಾಡುವೆ
ದಾಖಲೆ ಯಾಗಲಿ
ನಮ್ಮೀ ಪಯಣ

-ಪ್ರಭಂಜನ

ಕಾಯಲಾರೆ.


ಕಾಯಲಾರೆ ನೋಡಲಾರದೆ
ಬಾರೆ ಬೇಗ ಕಾರಣ ಹೇಳದೆ  ../ಪ/.
ಪ್ರೀತಿಯಲ್ಲಿ ಸಮಯ ಹೋಗದೆ
ಕಾಯುವುದರಲ್ಲಿ ಏನೋ ಸುಖವಿದೆ.. ../ಅ ಪ,/.

 ಚಂದಿರನೇ ನೋಡಿದ್ಯಾ ನನ್ನವಳ
ಹೇಳಿಬಿಡು ಕಾಯುತಿದೆ ಈ ಹೃದಯಾ
ಪ್ರೀತಿ ಕಿಚ್ಚ ಹಚ್ಚಿ ಹೋದೆ
ಹುಡುಕುತಿರುವೆ ಎಲ್ಲಿರುವೆ 1

 ಮಾಘಿಯಾ ಚಳಿಯಲ್ಲಿ
ಕೊಡು ನೀ ಅಪ್ಪುಗೆಯಾ
ಅದಕಾಗಿ ಏರಿ ಬಡಿಯುತಿದೆ
ಈ ಹೃದಯಾ
ತಂಗಾಳಿಯಲ್ಲಿ ನೀನು ಬಂದು
ಒಂದು ಮಾತು ಹೇಳದೆ ಹೋದೆ 2

ಇರುಳಲ್ಲಿ ಪ್ರೇಮನಿವೇದನೆ
ನೀ ಒಪ್ಪುವಿಯಾ
ಬೆರೆತುಹೋಗಿದೆ ಅರಿಯೆಯಾ ಈ ಹೃದಯಾ
ಕನಸಿನಲ್ಲೂ ಕಂಡಂತೆ
ನನಸಿನಲ್ಲೂ ಬಂದು ಸೇರು 3

--ಪ್ರಭಂಜನ

ಶನಿವಾರ, ಜೂನ್ 15, 2024

ತಾಯೆ ನಿನ್ನ ಮಡಿಲಲಿ ಬಂದು

ತಾಯೆ ನಿನ್ನ ಮಡಿಲಲಿ ಬಂದು
ಪ್ರಕೃತಿಯ ಕಂಡು
ಮಗುವೇ ಆದೆ ನಾ 


ಬ್ರಹ್ಮಗಿರಿ ಕಾವೇರಿಯನೆ  ಕಂಡು 
ಮಂಜಿನಲಿ ಮಿಂದು 
ಧನ್ಯನಾದೆ ನಾ 

ಜೀವನದಿಯಾಗಿ ಹರಿವಳು ನೀನು 
ಹಸಿರಿನ ಉಸಿರು ನೀನು 
ರೈತರ ಮೊಗದಿ ನಗುವನು ತರಿಸಿ 
ದಿನವೂ ಸಾಕುವವಳು ನೀನು 

ಗಿಡಮರ ಜೀವ ಸಂಕುಲಕೆಲ್ಲಾ 
ನೀರುಣಿಸುವೆಯಲ್ಲಾ 
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

ತಾಯೆ ನಿನ್ನ ಮಡಿಲಲಿ ಬಂದು 
ಪ್ರಕೃತಿಯ ಕಂಡು
ಮಗುವೇ ಆದೆ ನಾ 
 
ಹಸಿರ ಸೀರೆ ಉಡಿಸಿ ಭುವಿಗೆ 
ಬಳೆಯ ತೊಡಿಸುವೆ ನೀನು 
ಆರತಿ ಎತ್ತಿ ಇಳಿಯನು ತೆಗೆದು 
ಸೀಮಂತ ಮಾಡಿ ನಲಿವೆಯೇನು 

ಹುತ್ತರಿ ಹಬ್ಬವನೇ ಮಾಡಿ 
ನಗುವ ಮಕ್ಕಳ ನೋಡುವೆ  
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

ತಾಯೆ ನಿನ್ನ ಮಡಿಲಲಿ ಬಂದು 
ಪ್ರಕೃತಿಯ ಕಂಡು
ಮಗುವೇ ಆದೆ ನಾ 

ನಿನ್ನಂಥ ತಾಯಿ ಇರುವ ವರೆಗೆ 
ಇಲ್ಲಿ ಯಾವ ಚಿಂತೆಯೂ ಇಲ್ಲ
ಉಸಿರಿರೋವರೆಗೂ ನಿಂತಮೇಲೆಯೂ  
ನಿನ್ನ ಮಡಿಲೇ ನಮಗೆಲ್ಲ 

ಮಕ್ಕಳ ಸಾಧನೆಯ ನೋಡಿ 
ಮುಕ್ತಿ ನೀನು ಕೊಡಿಸುವೆ 
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

*ಮೈಸೂರ್ ಪಾಕ್*


ತುಪ್ಪದಲ್ಲಿ ಹುರಿದು 
ಸಕ್ಕರೆ ಪಾಕದಲ್ಲಿ ಸೇರಿಸಿ 
ಸಣ್ಣ ಉರಿಯಲ್ಲಿ ಕುದಿಸಿ 
ತೆಗೆದರೆ ಮೈಸೂರ್ ಪಾಕ್ 

ಆಯತಾಕಾರದಲ್ಲಿ ಇದ್ದರೆ 
ನೀ ಕಲ್ಲಾಗಬಹುದೆಂದು 
ಹೃದಯದಾಕಾರ ಕೊಟ್ಟು 
ನಿನ್ನ ಮೃದುವಾಗಿಸಿಹರು 

ಆಕಾರವೇನೇ ಇರಲಿ 
ಮಾಡುವವರು ಸಿಹಿಯಾಗಿದ್ದರಾಯ್ತು  
ಜೊತೆ ಜೊತೆಯಾಗಿ ಕುಳಿತು  
ಸವಿದರೆ ಬಾಯಲ್ಲಿ ನೀರೂರಬೇಕು  

*ನೀಲಿಕನ್ನಿಕೆ*


ನಿನ್ನ ಕಂಗಳ 
ನೋಟ ನೋಡುತ 
ರವಿಯು ಅವಿತನು ಮೋಡದಿ 

ಬುವಿಯಲೆಲ್ಲಾ 
ನಿನ್ನದೇ ಪ್ರಭೆ 
ಕವಿಯು ಹಿಡಿದನು ಕವಿತೆಲಿ 

ನೀಳವೇಣಿಯೇ 
ನೀಲಿಮಣಿಯದು  
ಮಿನುಗುತಿದೆ ಬೈತಲೆಯಲಿ 

ನೀಲಿ ಹಾರವು 
ನಗುತ ಹೊಳೆದಿದೆ    
ತುಟಿಗೆ ಕಂಪನು ಕೊಡುತಲಿ 

ನೀಲಿ ರವಿಕೆಯು 
ನೀಲಿ ಸೀರೆಯು 
ನವಿಲ ಹೋಲಿಕೆ ನಡುವಲಿ 

ನೀಲಿಯಾಯಿತು 
ಭೂಲೋಕವೆಲ್ಲಾ 
ನೀಲಿ ಕಂಗಳ ಚಲುವಲಿ

ನೀಲಿ ನೋಟಕೆ 
ನೀಳವಾಯಿತು 
ಮನಸು ಹುದಗಿತು ನಿನ್ನಲಿ 

ನಾಗಲೋಕದ 
ನೀಲಿಕನ್ನಿಕೆ 
ನಾ ಸಿಂಧೂರವಿಡಲೇ ಹಣೆಯಲಿ 

ಮಂಗಳವಾರ, ಫೆಬ್ರವರಿ 13, 2024

ಜಡೆ

 ಹೂವು ಹಾವಾಗದಿರಲಿ 

ಹಾವು ಜೆಡೆಯಾಗದಿರಲಿ 

ಹೂವು ಜಡೆಯಲ್ಲಿ ಮುಡಿದವರು 

ಬುಸುಗುಟ್ಟದೆ ಇರಲಿ 

ಬುಸುಗುಟ್ಟಿದರೂ ಸರಿ 

ಎಂದೂ ಹೆಡೆ ಬಿಚ್ಚಿ ಹೊಡೆಯದಿರಲಿ

ನನ್ನ ಹೆಂಡತಿಯ ಕೂದಲೂ 

ಕಪ್ಪು ದಪ್ಪ 

ಜಡೆ ಇತ್ತು ಮಾರುದ್ದ 


ಈಗಲೂ ಇದೆ ಕೂದಲು 

ಹೂಬಿಟ್ಟ ಕೊತ್ತಂಬರಿ ಕಟ್ಟು 

ಜಡೆ ಮಾತೇ ಇಲ್ಲ 

ಆನೆಯ ಬಾಲದ ತುದಿಯುದ್ದ 😂😂😂