ಮಂಗಳವಾರ, ಸೆಪ್ಟೆಂಬರ್ 30, 2014

ಚದುರಿ ಹೋದವು ಮುತ್ತು

ಮುತ್ತಿನಹಾರವಧರಿಸಿ ಮನಸೆಳೆದ ಗೆಳತಿಯ 
ಕತ್ತನು ನೋಡಿ ಮೂಡಿತು ಪ್ರೀತಿ ಕಣ್ಣಂಚಿನಲ್ಲಿ
ಹತ್ತಿರ ಬಂದು ಬರಸೆಳೆದು ತಬ್ಬಲು ದೇಹ
ಚಿತ್ತಾರವಾಯಿತು ಸಂಚಲನ ತುಂಬಿದ ಸ್ಪರ್ಶದಲ್ಲಿ

ಭಂದಿಯಾಗಿವೆ ಹೃದಯ ಏರಿಸುತ ನಾಡಿ ಬಡಿತ
ಹೊರಳಾಡುತಿವೆ ಮುತ್ತು ಆ ಬಿಗಿ ಹಿಡಿತದಲ್ಲಿ
ಚಂದಿರನ ಬೆಳಕಲ್ಲಿ  ರತಿ ಮನ್ಮಥರಾಟವನು
ನೋಡುತ ನಲಿದಾಡುತಿವೆ ಮುತ್ತು ಮೌನದಲ್ಲಿ  

ಹೊಡೆದಾಡುತಿವೆ ಛಲದಿ ಸರದಲ್ಲಿರುವ ಮುತ್ತು
ನಾ ಚಂದ ನೀ ಅಂದ ಈ ಸರಸಮಯದಲ್ಲಿ
ಅರಿವಿಲ್ಲದೆ ಮತ್ತಿನಲಿ ಸರಸವಾಡುತ ಜೋಡಿ  
ಮೈ ಮರೆತು ಉಸಿರೇರಿಸುತ  ಉನ್ಮಾದದಲ್ಲಿ   

ರಸಿಕರಾಟದಲಿ ಚದುರಿ ಹೋದವು ಮುತ್ತು
ನಾ ಮುಂದು ತಾ ಮುಂದು ಮಧುಮಂಚದಲ್ಲಿ
ಮುತ್ತುಗಳ ಸರಮಾಲೇ ಬೀಳಲು ತುಟಿಯಲ್ಲಿ
ದಾರಹರಿದು ಜಾರಿದವು ಮುತ್ತು ಮಂಚದಡಿಯಲ್ಲಿ  

ಸೋಮವಾರ, ಸೆಪ್ಟೆಂಬರ್ 15, 2014

ಡೋಣಿ


ತೀರವನರಿಯದೆ ಹೋಗುವ ಡೋಣಿ 
ನೀರಲಿ ತೇಲುತ ಸಾಗುತಲಿ 
ದೂರವನರಿಯದೆ ದಿಕ್ಕನು ನೋಡಿ 
ಹರಿಗೋಲನು ಹಾಕುತ ಹರುಷದಲಿ

ಉಸಿರಲಿ ಉಸಿರಾಗಿರುವ ಡೋಣಿ 
ಹಸಿವಲಿ  ನೀರನು  ಕುಡಿಸುತಲಿ 
ಬಿಸಿಲಲಿ ಬಳಲಿ ಬೆವರಿಳಿಸಿದರು 
ನಸುಕಲಿ ಜೀವ ತುಂಬತಲಿ 

ಬಲೆಯನು ಬೀಸುತ ಸಾಗಿದೆ ಡೋಣಿ 
ಅಲೆಯನು ಹಿಂದೆ ಸರಿಸುತಲಿ  
ಜಲರಾಸಿಯೊಳಗಿನ ಲೋಕವ ನೋಡಿ 
ಚಲುವಿನ ಮೀನು ಹಿಡಿಯುತಲಿ

ಧೀರನು ಬೇಕು ನಡೆಸಲು ಡೋಣಿ
ಬಿರುಗಾಳಿಯು ತುಂಬಿದ ಇರುಳಿನಲಿ 
ಶೂರನು  ಹೆದರದೆ ಸಾಗುವ ಮುಂದೆ 
ಭರವಸೆ ಬೆಳಕು ಹುಡುಕುತಲಿ 

                 

ಶುಕ್ರವಾರ, ಸೆಪ್ಟೆಂಬರ್ 5, 2014

ಇರುಳ ಸಂಜೆ

ಕಳೆದೆ ಹಲವರ ಜೊತೆ  ಈ ಬಾಳ ಪಯಣದಲಿ  
ಬಳಲಿದರೂ ಮಡದಿ ನಡೆದಳು ಕೊನೆಯವರೆಗೆ
ಹೇಳಲಾರೆ ಏನನ್ನು ಹಣಕ್ಕಾಗಿ ಜೊತೆಇದ್ದವರಿಗೆ    
ಬಾಳದಾರಿಯಲ್ಲಿ  ಇಂದು ಯಾರಿಲ್ಲ ನಾ ಒಂಟಿ 

ವಯಸ್ಸಿನ ಮದದಲ್ಲಿ ನಡೆದಿದ್ದೆ ದಾರಿ 
ಬಯಸಿದ್ದು  ಪಡೆದೆ ಗಳಸಿ ಹೆಣ್ಣು ಹೊನ್ನು 
ಆಯಸ್ಸು ಹೋಯಿತು ಅರಿಯದೆ  ಕ್ಷಣದಲ್ಲಿ 
ಭಯವಾಗುತ್ತಿದೆ ನೆನೆದು ಕೊನೆಯ ಘಳಿಗೆ 

ನಿಲ್ಲಬೇಕಾಗಿದೆ ಉರಿವ ದೀಪದ ಕಂಬದಂತೆ 
ವಲ್ಲೆನಂದರು  ಬೇಕು  ತಂತಿಯ ಆಸರೆ 
ಬಲ್ಲವರ ಬಾಳು ಬರಡು ಹುಣುಸೇಮರದಂತೆ 
ಚಲ್ಲಿದರು ಪ್ರೀತಿ ಉರಗೋಲು ಬೇಕು ಕೊನೆಗೆ  

ನಿಲ್ಲದೀ ಪಯಣ ಮುಂದೆ ಏನೆಂದು ತಿಳಿದಿಲ್ಲ 
ಎಲ್ಲರೂ ಹೇಳುವ ಮುಕ್ತಿ ಸಿಗುವುದೆಂದು 
ಎಲ್ಲ ಪಕ್ಷಿಗಲಿದ್ದರೇನು ಮುಂದೆ ಕಾಗೆಯೇ ಬೇಕು 
ಸಲ್ಲಿಸುವೆ ನಮನ ಇಂದೇ ಮುಂದೆ ಪಿಂಡ ಕಚ್ಚಲು 

ರಹದಾರಿ ಸವಿಸಿ ಬಂದಿಹೆನು ಇಲ್ಲಿ 
ಕಹಳೆ ಊದುವ ವೇಳೆ ಇರುಳ ಸಂಜೆ 
ಬಹಳ ಯೋಚಿಸಿ ವಿದಾಯ ಹೇಳಬೇಕಾಗಿದೆ  
ಸಹಿಸಿ ಬಂದಿಹೆನು ಅರಿತು ಬಾಳ ಸಂಜೆ  

ತಿರುಗಿ ನೋಡಲಾರೆ ನೆಡೆದು ಬಂದದಾರಿ 
ಮರುಗುವೆನು  ಮಾಡಿದ ತಪ್ಪುಗಳಿಗೆಲ್ಲ 
ಹಗುರವಾಗಿದೆ ಮನಸು ಮುಂದೆ ಸಾಗಲು 
ಬೇರೆಗು ಗೊಳಿಸುವ ಲೋಕದ ಕದತಟ್ಟಲು 

ಸೋಮವಾರ, ಸೆಪ್ಟೆಂಬರ್ 1, 2014

ರವಿ

ಬೆಳಕನು ಚಾಚುತ ಇಣುಕುತ ಬಂದೆ 
ಬಾನಂಗಳದ ಅಂಚಿನಲಿ 
ಮುಸುಕೆಳೆದವರ ಹೊಡೆದೆಬ್ಬಿಸಿ  
ಉತ್ಸಾಹ ತುಂಬುತ ಹಗಲಿನಲಿ 

ಚಿಲಿಪಿಲಿ ಗುಟ್ಟುತ ಹಾರಿವೆ ಹಕ್ಕಿ 
ಕನಸನು ಕಟ್ಟುತ ಆಸೆಯಲಿ   
ತೋರಿಸು ದಾರಿ ಬೀರುತ ಬೆಳಕು 
ಹಾರಲಿ ಹಕ್ಕಿಗಳು ಹರುಷದಲಿ 

ಹರಿಯುವ ನದಿ ಪುಳಕಿತಗೊಂಡವು 
ಕಿರಣಗಳ ಕೋಳಾಟ ಆಡುತಲಿ
ಮೌನವ ಮುರಿದು ಪರವಶಗೊಂಡವು 
ಜಲಚರ ವೇಗದಿ ಓಡಾಡುತಲಿ

ಬಣ್ಣವ ಬದಲಿಸಿ ಅಂದದಿ ನಗುತಿವೆ   
ಗಿರಿತುದಿಗಳು ಮನ ಸೆಳೆಯುತಲಿ 
ಏರುತ ಏರುತ ಬೀರುತ ಪ್ರಖರತೆ 
ಓಡಿಸುವೆ ಚಳಿ ಮುಂಜಾವಿನಲಿ 

ಬೇಸರವಿಲ್ಲವೇ  ನಿಲ್ಲದೆ ಓಡುವೆ  
ಸಮಯವ ಸವಿಸುತ ದಿನದಲ್ಲಿ
ನಿಂತರೆ ಎಲ್ಲವ ನಿಲ್ಲಿಸಿಬಿಡುವೆ 

ನೀನಿರುವೆ ಹಸಿರು ಉಸಿರಿನಲಿ  

ಮುಸ್ಸಂಜೆ

ಇಳಿಯುವ ಸೂರ್ಯನಲ್ಲಿ
ಹೊಳೆಯುವ ಬಣ್ಣದಲಿ
ಹಸಿರ ಭುವಿಯ ತುಂಬೆಲ್ಲ
ನಿನ್ನದೇ ಪ್ರೀತಿಯ ರಂಗು

ನೀಲಿ  ಬಾನ ಮೋಡದಲಿ  
ಮೂಡಿದ ಹೊಸ ರೂಪದಲಿ
ಹೊಳೆವ ಕಣ್ಣ ತುಂಬೆಲ್ಲಾ  
ನಿನ್ನದೇ ಪ್ರೀತಿಯ ರಂಗು ..

ಮುಸ್ಸಂಜೆಯ ಹೊತ್ತಿನಲಿ
ಕಡಲ ಕಿನಾರೆಯಲಿ
ಹೊಂಬಾನಿನ ತುಂಬೆಲ್ಲ
ನಿನ್ನದೇ ಪ್ರೀತಿಯ ರಂಗು ....

ರಂಗಿನ ಚೆಲ್ಲಾಟದಲಿ
ಅಲೆಗಳ ನಡುವಿನಲಿ
ಪ್ರತಿಫಲಿಸಿ ಕಡಲ ತುಂಬೆಲ್ಲ
ನಿನ್ನದೇ  ಪ್ರೀತಿಯ ರಂಗು

ಇರುಳ ಸಾಗರದಲ್ಲಿ  
ಹಕ್ಕಿಯಂತೆ ಹಾರುತಲಿ  
ತಂದ ಪತ್ರದ  ತುಂಬೆಲ್ಲ
ನಿನ್ನದೇ ಪ್ರೀತಿಯ ರಂಗು ..
ಉತ್ತರಿಸಲೇ ಪ್ರೀತಿಯಲಿ ಮಿಂದು