ಗುರುವಾರ, ಫೆಬ್ರವರಿ 13, 2025

*ಹೀಗೊಂದು ಚಿಂತನೆ*!



ಕುಸುಮದಲಿ ಅರಳಿ 
ಶರ ವೇಗದಲಿ ಪ್ರೀತಿಸಿ 
ಭಾಮಿನಿಯಲಿ ಮುಳಗಿ 
ಭೋಗದಲಿ ತೇಲಾಡಿ 
ವಾರ್ಧಿಕದಲಿ ಎದ್ದು
ಪರಿವರ್ಧಿನಿಯಲಿ ಅರಿತು  
ಉದ್ದಂಡ ನಾಮ ಪಡೆದರೇನಂತೆ 

ಕಂದ, ವೃತ್ತ, ರಗಳೆಗಳಿಲ್ಲದೆ 
ಎಳೆ, ತ್ರಿಪದಿ, ಚೌಪದಿ ಷಟ್ಪದಿ 
ಆದಿ, ಅಂತ್ಯ ಮಧ್ಯ ಪ್ರಾಸದ 
ತ್ರಾಸವಿಲ್ಲದೆ ಭಾವಪೂರ್ಣ ಕವನವ  
ಬರೆದರೆ ಓದಲೋಲ್ಲರೇ ಜಗದೊಳು 

-ಪ್ರಭಂಜನ. 

ಮಾವಿನ ಮರ



ಹೊಳೆವ ಮಾವಿನ ಮರದ ಒಳಗೆ 
ಅಳಿಲು ದುಂಬಿ ಗುಬ್ಬಚ್ಚಿ ಇತ್ತು 
ಬೆಳಗು ಇರಳು ಆಡುತಿದ್ದವು    
ನಲಿದು ಚಿಲಿಪಿಲಿ ಗುಟ್ಟುತಾ   

ಹಳೆಯ ಮಾವಿನ ಮರದ ಬುಡವ  
ಕೆಳಗೆ ಕಡೆದರು ಮನೆಯ ಕಟ್ಟಲು 
ತಳಿರು ಎಲೆಗಳು ಉದುರಿಹೋದರೂ   
ಬೆಳೆದು ನಿಂತವು ಹೂಗಳು 

ಆಳಿದ ಮರಕ್ಕೂ ದುಂಬಿಹಾರಿ 
ಚಲುವ ಹೂವಲಿ ಮಕರಂದ ಹೀರಿ 
ಹಲವು ಕಾಯಿಗಳು ಒಡೆದು ಮೂಡಲು 
ಒಲವು ಮೂಡಿತು ಮರ ಉಳಿಸಲು

ಇಳೆಗೆ ಮುಖ ಮಾಡಿ ತೂಗುತಿದ್ದ
ಬೆಳೆದ ಮಾವಿನ ಕಾಯ ನೋಡುತ   
ಕಳಿತ ಫಲವನು ತೆಗೆದು ತಿನ್ನಲು 
ತೊಳೆದ ಬಾಯಲೂ ನೀರೂರಿತು 

ಉಳಿಸಿ ಮರವನು ನೆರಳು ತರುವುದು      
ಬೆಳಸಿ ಕಾಡನು ಮಳೆಯು  ಬರುವುದು  
ಇಳಿಗೆ ಹಸಿರನ ಸೀರೆ ಉಡಿಸಿ,ಮುಂದಿನ 
ಪೀಳಿಗೆಗೆ ಉಸಿರ ಕೊಡುವುದು     

ಪ್ರಭಂಜನ. 

ಮನಸ್ಸು!


ತಡವರಸೋ ಮನಸೇ 
ತುಸು ನಿಧಾನಿಸು 
ತಂಪೆರೆವೆ ತಂಗಾಳಿಯಂತೆ 

ತಲ್ಲಣವು ಬೇಡ 
ತಂಪಿನಲಿ  ಪ್ರೀತಿಸಿ  
ತಣ್ಣಗೆ ಬಿಗಿದಪ್ಪಿ ಬಿಡುವೆ 

ಮನಸಲ್ಲೇ ನೀನು 
ಮುಗುಳ್ನಗುತ ನನ್ನ 
ಮೋಹದಿ ಕರೆಯುತಿರುವೆ  

ಮನಸ್ಸೆ ನಿನ್ನ ಗೆಲ್ಲುವೆ 
ಮಳೆಯಲ್ಲಿ ನೆನೆದು 
ಮೌನರಾಗ  ಹಾಡಿಬಿಡುವೆ 

ಮನದರಸಿ ನಿ ನಿನ್ನ   
ಮನಸ ಕೊಟ್ಟುಬಿಡು 
ಮೈ ಮರೆತು ಹಾರಾಡಿಬಿಡುವೆ 

*ನೋಡು ನಲ್ಲೆ*

 

ಕಣ್ಣು ತೆರೆದು ನೋಡು ನಲ್ಲೆ

ಕಾದು ಕುಳುತಿಹೆ ನಾನಿಲ್ಲೆ .. ಪ

ನಿನ್ನ ಹೃದಯದ ಬಡಿತದಲ್ಲೆ
ನನ್ನ ಮನವು ಮಿಡಿವುದಲ್ಲೆ  .. ಅ  ಪ

ಚಂದ ನಿನ್ನಯ ಮಾತು ಬಲ್ಲೆ
ಮಂದಹಾಸದಿ ನಗೆಯ ಚಲ್ಲೆ
ಅಂದದಾ ಆ ಮುಗೂತಿಯಲ್ಲೆ
ಇಂದಿಗೂ ನೀ ಹೊಳೆವೆಯಲ್ಲೆ .. ೧

ತಂದು ಕೊಡಲೆ  ಹೂವು ಮಲ್ಲೆ
ಸಂಧಿಸಿ ಇಡಲೇ ನಿನ್ನ ಮುಡಿಯಲ್ಲೆ
ಬಂಧಿ ಯಾಗುವೆ ನಾನಲ್ಲೆ
ಗಂಧ ಪರಿಮಳ ನೀನಿರುವಲ್ಲೇ  ... ೨

ಒಂದು ಪ್ರೀತಿಯ ಮಾತಿನಲ್ಲೆ
ಅಂದು ಮಿಂದೆ ಆ ಭಾವದಲ್ಲೆ
ಹಿಂದು ಮುಂದೆ ನನಗ್ಯಾರಿಲ್ಲೆ
ಬಂದು ನೆಲೆಸು ನೀ ಹೃದಯದಲ್ಲೆ ... ೩

:-ಪ್ರಭಂಜನ

*ಯೌವ್ವನ* ( ನನ್ನದೊಂದು ಕಾಫಿಯಾನಾ ಗಝಲ್ )


ನಲ್ಲೆ ನಿನ್ನ ಕಣ್ಣು ನೋಡಲು ಎಷ್ಟು ಚನ್ನ 
ತಲೆಕೂದಲು ಮಿನುಗುತಿದೆ ಹಚ್ಚಿದಾಗ ಕಪ್ಪು ಬಣ್ಣ

ಹೋಲುಕೆ ದಾಳಿಂಬೆಯಂತೆ ದಂತ ನೀ ನಾಕ್ಕಾಗ ಚಿನ್ನ
ನಲಿಯುತಿದೆ ಬಳ್ಳಿಯಂದದಿ ನಿನ್ನ ನಡು ಎಷ್ಟು ಸಣ್ಣ 

ಪಡ್ಡೆ ಹುಡುಗರು ಬಿದ್ದರು ನೋಡುತ ನಿನ್ನ ಮುಖವನ್ನ  
ಲತೆಯಂತೆ ಬಳಕುತ ನೆಡೆವೆ ಬೆಕ್ಕೆ ನಾಚಬೇಕಿನ್ನ 


ಹಾರುತಿಹರು ಮುದುಕರೂ ಕದಿಯಲು ನಿನ್ನ ಮನಸನ್ನ 
ಪ್ರೀತಿಯ ಸುಧೆ ಹರಿಸಿಬಿಡು ಹಂಚಿ ಹನಿ ಹನಿ ಖುಷಿಯನ್ನ    

ನೆಡೆವಾಗ ಕತ್ತೆತ್ತಿ  ಆಗಸದಿ ನೋಡುವೆ ಏನನ್ನ 
ಹಾಡೊಂದ ಹಾಡುತ ಕರೆದುಬಿಡು ಪ್ರಭಂಜನನನ್ನ 

*ಕೋಕಿಲ* ಗಝಲ್..


ಪಂಚಮ ಸ್ವರದಲ್ಲಿ  ಹಾಡು ಹಾಡುವೆ ಏಕೆ 
ಮಾವಿನ ಚಿಗುರು ಅದು ಒಗರಿರಲು ಸಾಕೆ 
 

ಎಲೆಗಳೊಳಗೆ ಇರುವೆ ಅದೆಂಥ ನಾಚಿಕೆ ನಿನಗೆ 

ನಿನ್ನನಾದರಿಸಿದರೂ ಕಣ್ಣು ಕೆಂಪಾಗಿರುವುದೇಕೆ 

ಬಣ್ಣ ಕಪ್ಪಾದರು ತತ್ತಿ ಬೆಳಿ ಗಾತ್ರ ಒಂದೇ 
ಪರರ ಗೂಡಲ್ಲಿ ಇಡುವೆ ಈ ಮೋಸವೇಕೆ  

ಪರಪುಟ್ಟನಾದರೂ ತಾಯಿ ಹುಡುಕುವೆ ಹೇಗೆ 
ಕಾ ಕಾ ಕಲಿಯದೆ ಕುಹೂ ಕುಹೂ ಕೂಗುವೆಯೇಕೆ 

ಕಾವುಕೊಟ್ಟರು ಕಾಗೆಗೆ ಹುಡುಕಿ ಕುಕ್ಕುವೆಯೇಕೆ 
ಸಾಕು ನ್ಯಾಯಕ್ಕಾಗಿ 'ಪ್ರಮು'ಖಗೆ ಒಪ್ಪಿಸಬೇಕೇ    

-ಪ್ರಭಂಜನ. 

ಪಂಚಮಿ

 

ಪಂಚಮಿ 


ಬನ್ನಿರೇ ಭಾಮೆಂಗಳೆಲ್ಲಾ 
ತನಿ ಎರೆಯುವ ನಾಗರಾಜಗೆ
ಹೊನ್ನ ಒಡವೆಯ ಹಾಕಿಕೊಂಡು
ಚನ್ನಾಗಿ ಶೃಂಗರಿಸಿ ಕೊಳ್ಳುತಾ  

ಅರಿಶಿನ ಕುಂಕುಮ ಹಣ್ಣು ಹೂವು
ಕರದಿ ವೈಯಾರದಿ ನೆಡೆಯುತಾ
ಹುರಿದ ಕಡಲೆ ತಂಬಿಟ್ಟು ಚಿಗುಳಿ
ತೆರೆದು ನೈವೇದ್ಯ ಮಾಡುತಾ

ಪನ್ನಗನನ್ನು ಪ್ರಸನ್ನಗೊಳಿಸಿ
ಕನ್ನೆಯರು ವರಗಳ ಕೇಳುತಾ
ಬೆನ್ನಹುರಿಗೆ ಹಾಲ ಹಚ್ಚುತಾ
ಅಣ್ಣ ತಮ್ಮಗೆ ಆಯಸ್ಸು ಬೇಡುತಾ 

 
-ಪ್ರಭಂಜನ.