ಭಾನುವಾರ, ಆಗಸ್ಟ್ 24, 2014

ಬೆಳದಿಂಗಳು

ಹೊತ್ತು ಮುಳುಗಿ
ಕತ್ತಲು ಮೂಡುವ ಗಳಿಗೆ
ತುತ್ತು ಉಣಿಸುವಳಮ್ಮ
ಸುತ್ತಲು ನಿನ್ನದೇ ಬೆಳದಿಂಗಳು !!

ಬಿತ್ತು ಮಿನುಗುತಾರೆ 
ಹಿತ್ತಲಿನ  ಗಿಡದ ಮೇಲೆ 
ಎತ್ತಿ ಕೊಡಲು ಬರುವನಮ್ಮ 
ಸುತ್ತಲು ಹರಿಸಿ ಬೆಳದಿಂಗಳು !!

ಎತ್ತ ನೋಡಿದರೇನು 
ಕತ್ತು ಹೊರಳಿಸಿ ನಗುವನು 
ಮುತ್ತು ಮಾಮ ಇವನಮ್ಮ 
ಸುತ್ತಲು ಅವನದೇ ಬೆಳದಿಂಗಳು !!

ಹೆಚ್ಹು ಅಡಿಸುವುದಿಲ್ಲ 
ಬೊಚ್ಚ ಬಾಯಿಯ ತೆರೆದು 
ಕಚ್ಚದೆ ತುತ್ತು ನುಂಗುವೆನಮ್ಮ  
ಮೆಚ್ಚಿನೋಡುತ ನಿನ್ನ ಆ ಕಂಗಳು !!

ಮಂಗಳವಾರ, ಆಗಸ್ಟ್ 19, 2014

ಹಂಗಿನರಮನೆ


ಹಂಗಿನರಮನೆ(ಸಿಟಿ) ಗಿಂತ
ಹಳ್ಳಿಯ ಗಿರಿ ಮನೆ ಸಾಕು 
ಹೃದಯದ ಬಾಗಿಲು ತೆರೆದು 
ಹೊರಗೆ ನೋಡುತಿರಬಹುದು 

ಒಡೆಯ ನಿಲ್ಲದ ಮನೆಗಿಂತ  
ಒಡಲು ತುಂಬಿದ ಪ್ರಕೃತಿ ಸಾಕು
ಓಡುವ ಜೀವನಕೆ ವಿರಾಮವಿಟ್ಟು   
ಒಡನಾಡಿಗಳ ಜೊತೆ ನಲಿಯಬಹುದು 

ಮುಚ್ಚಿದ ನಗರದ ಮನೆ ಬಾಗಿಲಿಗಿಂತ   
ಮನೆಯ ಮುಂದೆ ತೆರೆದಬಾಗಿಲು ಬೇಕು    
ಮುಖ ಮೇಲೆತ್ತಿ ತೆರೆದಬಾಹುಗಳಿಂದ 
ಮುಗಿಲ ತಬ್ಬಿ ಮುದ್ದಾಡಬಹುದು  

ಹುಲ್ಲು ಬೆಳೆಯದ ನಗರ ದಾರಿಗಿಂತ 
ಹಸಿರು ತುಂಬಿದ ಕಾಲುದಾರಿ ಲೇಸು 
ಹಿತವಾದ ಹಳ್ಳಿ ಪರಿಸರದಲಿ  ಬೆರೆತು
ಹೊಸದಾಗಿ ಕನಸು ಕಾಣಬಹುದು 


ಗುರುವಾರ, ಆಗಸ್ಟ್ 7, 2014

ಸಂಜೆಯಲಿ

ಅಂದದ ಮಳೆಯ ಬರುತಿದೆ 
ಚಂದದ ಒಂದು ಸಂಜೆಯಲಿ
ಮಿಂಚು ಗುಡುಗು ಸಿಡಿಲು 
ಬಂತು ರಾಜನಂತೆ ಗರ್ಜಿಸುತಲಿ

ಬಂಗಾರದ ಬೆಳಕು ಚಲ್ಲಿ 
ಹೊಂಬಣ್ಣ ತುಂಬಿದೆ ಇರುಳಲ್ಲಿ  
ಮಿಂಚು ಚಿತ್ತಾರ ಮೂಡಿಸಿ 
ಹೊಂಚು ಹಾಕಿದೆ ಆಗಸದಲ್ಲಿ  

ತೆಂಗಿನ ಗರಿಗಳ ಕಲರವದಿ   
ತಂಗಾಳಿ ಇಂಪು ತುಂಬುತಲಿ 
ತುಂತುರು ಮುತ್ತಿನ ಮಳೆಹನಿಯ 
ತಂಪು ಮುತ್ತಿಕ್ಕುತಿದೆ ಭುವಿಯಲ್ಲಿ 

ನಲ್ಲೆಯ ಸನಿಹ ಬಯಸುತಿದೆ 
ಈ ಮೋಹ ತುಂಬಿದ  ಇರುಳಲ್ಲಿ
ಕೊರೆವೆ ಹೊಸ ಪ್ರೀತಿಯ ಕವನ 
ಅವಳಿಗಾಗಿ ನನ್ನ ಹೃದಯದಲ್ಲಿ 

ಬುಧವಾರ, ಆಗಸ್ಟ್ 6, 2014

ಸೊಳ್ಳೆ

ಸೊಳ್ಳೆ  ನೀ ಎಲ್ಲಿಅಂದರೆ ಅಲ್ಲೇ ..
ನೀ ಸೊಳ್ಳೆ  ನಿನ್ನ ಸೂಜಿ ನಾ ಬಲ್ಲೆ !!

ಗುಯ್  ಗುಯ್  ಗುಟ್ಟಿ ಹಾರೋ ನೀನು 
ಸುಯ್ ಸುಯ್  ರಾಗ ಹಾಡೋ  ನೀನು 
ತಟ್ಟಿಸಿ ಚಪ್ಪಾಳೆ  ನೋಡಿ ನಗುವೇ ಏನೋ 
ಕಾಟಕ್ಕೆ ಸೋತು ಹೋಗಿರುವೆ ನಾನು 

ತೆರೆದ ನೀರಲಿ ಹುಟ್ಟಿ ಬರುವೆ ನೀನು 
ವಾರದೊಳಗೆ ಮತ್ತೆ ಮೊಟ್ಟೆ ಇಡುವೆ  
ಹರಡುವೆ ಡೆಂಗು ಚಿಕನ್ಗುನ್ಯ ಮಲೇರಿಯ 
ಕರೆಯದೆ ಬರುವ ಮನೆಯ ಅತಿಥಿ ನೀನು  

ಸೊಳ್ಳೆ ಬತ್ತಿ ಹಚ್ಚಿದೆ  ನಾನು 
ತಾಳಿಕೊಂಡು  ಮತ್ತೆ ಬಂದೆ ನೀನು 
ಕುಳಿತು ಕಚ್ಚಿದೆ ಕೈ ಸಿಕ್ಕಿತೆ ಜೇನು 
ಎಳೆದೆ ರಕ್ತ ಪೀಪಾಸು ನೀನು .. ಸೊಳ್ಳೆ 

ಸೊಳ್ಳೆ ಪರೆದೆ ಕಟ್ಟಿದೆ  ನಾನು 
ಕಳ್ಳ ದಾರಿಯಲಿ ಒಳ ಬಂದೆ ನೀನು 
ಆಲ್ ಔಟ್ ಹಚ್ಚಿ ಮಲಗಿದೆ ನಾನು 
ಸೋಲ್ ಒಪ್ಪದೇ ಬಂದು ಕಚ್ಚಿದೆ ನೀನು 

ಬ್ಯಾಟ್ ಹಿಡಿದು ಹೊಡೆದೆ ನಾನು 
ಶಾಟ್ ಸೂಪರ್ ಎಂದು ಓಡಿದೆ ನೀನು 
ಸಂಬ್ರಾಣಿ ಹೋಗೆ ಹಾಕಿದೆ ನಾನು 
ಟಾಂ ಟಾಂ ಹೊಡೆದು ಹೋದೆ ನೀನು 
ಕಟ್ಟ ಕಡೆಗೆ ಸೊಳ್ಳೆ ಕಾಗದ ಹಚ್ಚಿ ನಾನು  
ಬಿಟ್ಟು ಓಡಿ ಹೋದೆ ಅ ವಾಸನೆಗೆ ನಾನೇ! 
ಎಂಟೆದೆಯ ಗಟ್ಟಿ ಬಂಟನಾದರು ಏನು 
ಪಂಟ ಸೊಳ್ಳ ನಿನಗೆ ಸೋತೆ ನಾನು !