ಗುರುವಾರ, ಸೆಪ್ಟೆಂಬರ್ 8, 2022

*ಹಳೆ ಸ್ಕೂಟರ್*



ಬಾಗಿಲಾ ಪಕ್ಕದಲ್ಲಿ 
ನಿಂತಿರುವ ಸ್ಕೂಟರ್ 
ಹಳೆಯ ನೆನಪೊಂದು ಕೊಡುತಿಹುದು 

ದಿನವೂ ಮುಂಜಾವಿನಲ್ಲಿ 
ಬಾಗಿಸಿ  ಕಿಕ್ ಹೊಡೆದು 
ಕನಸ ತುಂಬಿ ಹೋಗ್ತಿದ್ದು ನನಪಾಯಿತು   

ನಲ್ಲೆ ಹಿಂಬದಿಯಲ್ಲಿ 
ಸೊಂಟ ಹಿಡಿದು ಕುಳಿತಿದ್ದು 
ನೆನಪಿನಂಗಳದಲ್ಲಿ ಸುಳಿದುಹೋಯಿತು 

ಕಾಲದಾ ಗರ್ಭದಲಿ 
ಆಳಿದ ವರಳು ಹೊರಬಿದ್ದಂತೆ 
ಗಾಡಿಯು ಹೊರಗೆ ಬಿದ್ದುಹೋಯಿತು 

ಹೆಂಡತಿ  ಹೊಸ ಮನೆಯಲ್ಲಿ 
ಹಳೆ ಹುಡುಗಿ ನೆನಪಲ್ಲಿ 
ಹಳೆ ಮನೆ, ಗಾಡಿ, ವರಳು ಸ್ಮಾರಕವಾಯಿತು!  

ಹಾಡು ಹಕ್ಕಿ

 
ಹಾಡು ಹಕ್ಕಿ 
ಹಾರುತಲಿ 
ನಾಡಲಿ ಕೂಗಿದೆ 
ಕೋಗಿಲೆ


ರಾಗ ಭಾವ 
ತಾಳ ಹಳೆಯದು 
ಹೊಸತು ದನಿ  
ದೇಶ ಆವರಿಸಿದೆ. 

ಆಡು ಮುಟ್ಟದ 
ಎಲೆಯು ಇಲ್ಲ 
ಹಾಡು ಹಾಡದ 
ಭಾಷೆ ಇಲ್ಲ 
 
ನಾಡು ನುಡಿ 
ಹೊರನಾಡಿನಲ್ಲೂ 
ಗೌರವ ಪಡೆದು 
ಹಾಡಿದೆ 

ಭೂಮಿಯಲ್ಲಿ 
ಹಾಡಿ ದಣಿದು 
ಕೋಗಿಲೆ ಸ್ವರ್ಗ 
ಲೋಕ ಸೇರಿದೆ 

ಉಸಿರು ನಿಂತರೇನು
ಹಾಡು ಸದಾ 
ಹೃದಯದಲ್ಲಿ  
ನೆಲೆಯೂರಿದೆ . 

ಪ್ರೇಮಿಗಳ ದಿನ

 

ಪ್ರೀತಿ ಇದ್ದರೆ 
ದಿನಗಳೆಲ್ಲವೂ 
ಪ್ರೇಮಿಗಳ ದಿನ ಮಾಣೋ 


ಪ್ರೀತಿ ಇದ್ದರೂ 
ಅದಕ್ಕಾಗಿ ಸತ್ತರೆ 
ಪ್ರೇಮಿಗಳ ದಿನ  ಕಾಣೋ 

ಪ್ರೀತಿ ತೋರಿಸಿ 
ಪ್ರೇಮದಿಂದ ಬದುಕು 
ಆಯ್ಕೆ ನಿನ್ನದು ಮನಗಾಣೋ 

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ

 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ 
ನಾನು ಹುಟ್ಟಿರಲಿಲ್ಲ


ಹುಟ್ಟಿದ ಕ್ಷಣದಿಂದಲೇ  
ಅನುಭವಿಸಿದೆ  ಸ್ವಾತಂತ್ರ್ಯ, 
ತ್ಯಾಗ, ಬಲಿದಾನದ, ಅರಿವಿರಲಿಲ್ಲ 

ಇತಿಹಾಸ ತಿಳಿಸುತ್ತೆ !

ಪರಕೀಯರು ನುಸಿಳಿದರು ದೇಶಕ್ಕೆ ಬೆಕ್ಕಿನಂತೆ,  
ಹಿಡಿದರು ಮೋಸದಿಂದ ಆಡಳಿತ  ಕಪಿಮುಷ್ಟಿಯಂತೆ,  
ದೇಶ  ನಮ್ಮದು, ಸಂಪತ್ತು ನಮ್ಮದು   
ದೋಚಿ ಸಾಗಿಸಿದರು, ಕಟ್ಟಿದ ಸುಂಕವೂ, ತಮ್ಮದಂತೆ    

ದಿನಸಿ ಪಡೆಯಲು ನಿಲ್ಲಬೇಕಿತ್ತು ದಿನವೆಲ್ಲಾ ಸಾಲು 
ಬಡತನ, ಕಷ್ಟಗಳು,  ಜನರ, ದಿನನಿತ್ಯದ ಗೋಳು  
ಬೇಸತ್ತು ಹೋದರು ಜನ, ಕ್ರೌರ್ಯ ದಬ್ಬಾಳಿಕೆಗೆ   
ಜೈಲು, ನೇಣು, ಬಲಿಯಾದವರೆಷ್ಟೋ ಗುಂಡುಗಳಿಗೆ 
 
ನೆತ್ತರು ಹರಿದರೂ, ವೀರರು ಸತ್ತರೂ  
ಬಿತ್ತಿದರು ಸ್ವಾತಂತ್ರದ ಬೀಜ ಸಾವಿರಾರು  
ಸತ್ಯಾಗ್ರಹ, ಅಸಹಕಾರ, ಹೋರಾಟದ ಹಾದಿ 
ಬ್ರಿಟಿಷರು, ದೇಶ ತೊರೆಯುವಂತಾಯಿತು ನೋಡು  

ದೇಶ ವಿಭಜಿಸಿ,  ಕಿಚ್ಚನ್ನು ಹಚ್ಚಿ, ಬಿಟ್ಟುಹೋದರು 
ಕೊಟ್ಟರು ಸ್ವಾತಂತ್ರ್ಯ ಜೊತೆಗೆ ಕಶ್ಮೀರ ಜಂಜಾಟ 
ಅಮೃತವರ್ಷದ ಸ್ವತಂತ್ರ  ಆಚರಿಸುತ್ತಿದ್ದರೂ 
ನಿಂತಿಲ್ಲ, ಗಡಿಯಲ್ಲಿ ನಿತ್ಯ  ಸೈನಿಕರ ಕಾದಾಟ  

ಆದರೂ !
ಭಾರತ ವರಚೈತನ್ಯದ ನಾಡು,  ರೈತರ ಸಿರಿನಾಡು 
ಭಾವೈಕ್ಯತೆಯ ನೆಲೆವೀಡು,  ಭಾತೃತ್ವದ ಸವಿಗೂಡು 
ವಿವಿಧ ಭಾಷೆಯ, ವಿವಿಧ ಸಂಸ್ಕೃತಿಯ ತವರೂರು,   
ಬಲಿಷ್ಠವಾಗುತ್ತಾ ಸಾಗಿದೆ  ದೇಶ, ವಿಶ್ವಗುರುವಾಗಲು

*ಗೆಳೆತನ*


ತಿಳಿಯದ ವಯಸಲಿ 
ಅಳಿಯದ ಪ್ರೀತಿಯ 
ಬಳುವಳಿಯಾಗಿ ಕೊಟ್ಟವರೇ  

ಅಂದದ ಶಾಲೆಯ 
ಮಂದಿರ ಮೈದಾನದಿ 
ಸುಂದರ ದಿನಗಳ ಕೊಟ್ಟವರೇ 

ಆಟಗಳಾಡುತ 
ಪಾಠಗಳ ಓದುತ
ಕಳ್ಳಾಟವ ಹೇಳಿ ಕೊಟ್ಟವರೇ 

ಗೆಳೆಯನೇ ಗೆಳತಿಯೇ 
ಕಳೆದ  ಆ  ದಿನಗಳ  
ಗಳಿಸಲು ಮತ್ತೆ ಆಗುವುದೇ 

ಊರೂರು ಸುತ್ತುತಾ 
ದೂರದಿ ಇದ್ದರೂ 
ಮರೆಯದೇ ಗೆಳೆತನ ಇಟ್ಟವರೇ 

ಅಂದಿಗೂ ಇಂದಿಗೂ
ಮುಂದೆಯೂ ಮೆರೆವುದು
ಚಂದದ ಗೆಳೆತನ ಇರುವುದೇ ಹೀಗೆ. 

-ಕಲಾಗಂಗೋತ್ರಿ ೫೦-

 -ಕಲಾಗಂಗೋತ್ರಿ ೫೦-


ನಾಟಕ ಹಾಡು ನೃತ್ಯ ರಂಗ 
ಪ್ರಪಂಚವೇ ನಮ್ಮ ಕಲಾಗಂಗೋತ್ರಿ 
ದೇಶ ವಿದೇಶದಲ್ಲಿ ಮನೆಮಾತಾಗಿದೆ 
ನೋಡಿದರೆ ನಾಟಕ ಮನೋರಂಜನೆ ಖಾತ್ರಿ 

ತಂಡ ಕಟ್ಟಿದ ಚಂದ್ರು ರಾಜಾರಾಮ್ 
ಸ್ನೇಹಿತರಿಗೆ ಆಗ  ವರ್ಷ ಕೇವಲ ಇಪ್ಪತ್ತು 
ಹೆಮ್ಮರವಾಗಿ ಬೆಳೆದು ನಿಂತಿದೆ 
ಕಲಾಗಂಗೋತ್ರಿಗೆ ಈಗ ತುಂಬುತ್ತಿದೆ ಐವತ್ತು 

ಅಭಿನಯ ಪರಿಕರ ಮೇಕಪ್   
ವಸ್ತ್ರಾಲಂಕಾರಗಳನ್ನು ಇಲ್ಲಿ ಕಲಿತವರೆಷ್ಟೋ   
ಬೀದಿನಾಟಕ , ಮೂಕಿ ಟಾಕಿ, 
ಲೈಟಿಂಗ್, ಕಲಿಸಿದ ರಂಗಶಿಬಿರಗಳೆಷ್ಟೋ 

ಹಳೆ ಕನ್ನಡ, ಹೊಸಕನ್ನಡ 
ಸಂಸ್ಕೃತ ಜೊತೆ ತರ್ಜಿಮೆಯಾದ ನಾಟಕಗಳು 
ಕಥೆ ಕಾದಂಬರಿ ಜೀವನ ಚರಿತ್ರೆಗಳು 
ರಂಗದಮೇಲೆ ತಂದರು ಯಶಸ್ವಿ ಪ್ರಯೋಗಗಳು  

ಹಳೆ ತಲೆ  ಹೊಸ ಚಿಗುರು ಮೇಳೈಸಿ  
ಬೆಳೆಸಿದರು ಗುರುತಿಸಿಕೊಂಡ ನಟರೆಷ್ಟೋ  
ಹೊಸ ನಾಟಕ ರಚಿಸಿ ನಿರ್ದೇಶನ ಮಾಡಲು 
ಉತ್ತೇಜಿಸಿ ಕೊಟ್ಟ ಅವಕಾಶಗಳೆಷ್ಟೋ  

ಸಣ್ಣ ಸಾಧನೆಯನ್ನು ಗುರುತಿಸಿ ಬೆಳೆಸಿದರು  
ಕಿರುತೆರೆ - ಹಿರಿತೆರೆಗೆ ಹೋದವರೆಷ್ಟೋ    
ರಂಗಾಭಿನಂದನೆ  ಪ್ರಶಸ್ತಿಗಳನೆ ಪಡೆದ     
ರಂಗ ನೆೇಪಥ್ಯ  ಕಲಾವಿದರೆಷ್ಟೋ  

ಎಪ್ಪತ್ತು ಆದರೂ ಉತ್ಸಾಹ ಇಪ್ಪತ್ತು 
ಇಂದಿಗೂ ಚಿರಯವ್ವನ ರಂಗದ ಮುಂದೆ 
ಕಾಪಿ ತಿಂಡಿ  ಜೊತೆ ಇಂದಿಗೂ  ರಿಹರ್ಸಲ್   
ನಿರ್ದೇಶಕರ ಕೈಚಳಕ   ರಂಗದ ಹಿಂದೆ  

ನಾಟಕ ಮಾಡುತ  ಪ್ರಪಂಚ ಸುತ್ತಿದ 
ತಂಡಗಳಲ್ಲಿ ಮುಂಚೂಣಿ ಕಲಾಗಂಗೋತ್ರಿ
ವಸುದೈವಕುಟುಂಬದ ನೈಜತೆ ತುಂಬಿ    
ಸಾಗುತಿದೆ ಈ ಐವತ್ತು ವರ್ಷದ ಮೈತ್ರಿ   
 

ನವಿಲೊಂದು

 
ನವಿಲೊಂದು ಕುಣಿಯುತಿದೆ 
ಗರಿಕೆದರಿ ಹನಿಮಳೆಗೆ 
ಕಿವಿಯಲೇನೋ  ಹೇಳುತಿದೆ 
ಪ್ರೀತಿ ಸುರಿಸಿ  ನಲ್ಲೆಗೆ  

ಹಾಡೊಂದು ಹಾಡುತಿವೆ
ಇನಿದನಿಯ ರಾಗಕೆ
ಕೊಳಲೊಂದು ನುಡಿಯುವಂತೆ
ಮುಂಜಾವಿನ ತಾಳಕೆ 

 
ಬಣ್ಣ ಚಲ್ಲಿ ಹಾರಾಡುತಿವೆ     
ಮಂಜು ಮುಸಿಕಿದ ಮೋಡಕೆ
ಹೊಂಬಿಸಿಲು ಸವಿಯುತಲಿ
ಪ್ರೀತಿ ಹಂಚುತ  ಮೆಲ್ಲಗೆ 


ನಲಿದುಬಿಡು ನವಿಲಿನಹಾಗೆ
ನೋವಿನಲಿರುವುದೇನಿದೆ
ಇಂದು ಮುಂದು ಎಂದೆಂದೂ
ಒಲವೇ ಭಾವ ಬದುಕಿಗೆ