ಬುಧವಾರ, ಅಕ್ಟೋಬರ್ 31, 2018

*** ಮೂಲೆ ಸೇರಿದೆ ಪುಸ್ತಕ ***


ಅಂತರಜಾಲದ ಬಿರುಗಾಳಿಗೆ 
ನಿಧಾನಕೆ, ನಿಧಾನಕೆ, ಪುಸ್ತಕ ಮೂಲೆ ಸೇರಿದೆ 
ಪುಸ್ತಕ ಓದುವುದು ಕಡಿಮೆಯಾಗಿದೆ 

ಕಾದಂಬರಿ, ಕವನ, ಕಥೆ, ಪಠ್ಯ ವಿಮರ್ಶೆ ಪುಸ್ತಕಾ 
ದಿನಪತ್ರಿಕೆ ಸಿಗುತ್ತಿತ್ತು, ಓದಲು ಎಲ್ಲರಿಗೂ ಉಚಿತಾ  
ಗುಂಪುಮಾಡಿ ಜೋಡಿಸಿದ ಅಟ್ಟಕ್ಕೆ, ಹೆಸರಿತ್ತು ಇಷ್ಟುದಿನಾ 
ಗುಂಪಾಗಿ ಬಿದ್ದಿವೆ, ಹುಡುಕಲು ಏನು ಮಾಡಲಿ ನಾ 

ಮನಸನು ಕಾಡುತಾ, ನೆನಪು ತರುವ ಪುಸ್ತಕಾ 
ನಲಿವನು, ನೋವನು, ಅನುಭವಿಸಿದೆ ಓದುತಾ  
ಜನರ ಸೆಳೆದು ಗ್ರಂಥಾಲಯಕ್ಕೆ, ಜೀವ ತುಂಬಿದ್ದೆ ಇಷ್ಟುದಿನಾ 
ಜನರಿಲ್ಲದೆ ಒಣಗುತ್ತಿದೆ ಈಗ ಏನು ಮಾಡಲಿ ನಾ

ಮಂಗಳವಾರ, ಅಕ್ಟೋಬರ್ 9, 2018

ತ್ರಿಕೋನ ಪ್ರೀತಿ

ನೋಡಾದಿರಿ ನನ್ನ ನೀಲಿ ಕಣ್ಣುಗಳಿಂದ 
ಪ್ರೀತಿ ಸ್ನೇಹ  ಮುರಿಯುವ ಭಯವಾಗಿದೆ  

ಮೂರೂ ಮನಸ್ಸುಗಳ ಅಂತರ ತ್ರಿಕೋನದಂತೆ 
ಮೂರೂ ಕಲ್ಲುತುಂಬಿದ ಬೆಟ್ಟಗಳು ನಿಂತಿವೆ  
ಮೂರೂ ತೀರದಿ ಮಧ್ಯ ನದಿಯೊಂದು ಹರಿದಿದೆ 
ಮೂರೂ ಹೃದಯ ಬೆಸೆಯಲು ತಪ್ಪ ಬಂದಂತಿದೆ 

ಪ್ರೀತಿ ಮೂಡಿತು ನಿನ್ನ ಮೊದಲು ನೋಡಿದ ಆ ಕ್ಷಣ 
ಕೃತಿಯಲ್ಲಿ ಅವನ ಸ್ನೇಹ  ರಕ್ತದ ಕಣ ಕಣದಲ್ಲಿದೆ  
ತಪ್ಪು ತಿಳುವಳಿಕೆ ಬೆಳೆದು ಬೆಟ್ಟವಾಗಿ  ನಿಂತಿದೆ 
ಒಪ್ಪುವಂದದಿ ಕರಗಿ ಮುನಿಸು ನೀರಾಗಬಾರದೇ

ಮೌನತುಂಬಿದ ಗಾಳಿಯಲ್ಲೂ ಮನಸ್ಸಿನ ತೊಳಲಾಟ 
ಅಲೆಗಳಿಲ್ಲದ ನೀರಿನಲ್ಲೂ ಮೂಡಿದೆ ಚಕ್ರತೀರ್ಥ 
ನೀರು ಹರಿದಷ್ಟು ಮನಸು ತಿಳಿಯಾಗಬಹುದು ಕಾಯುವೆ   
ತೀರಗಳ ಬೆಸೆಯಲು ನಾವು ಸ್ನೇಹ ಸೇತುವೆ ಕಟ್ಟಬಾರದೇ     


 

ಬುಧವಾರ, ಅಕ್ಟೋಬರ್ 3, 2018

ಮೌನವೇ ಮಾತಾಗಿದೆ



ಮಧುರ ಮುಂಜಾನೆಯ  
ಬಿರಿದ  ತಿಳಿ  ಬೆಳಕಲ್ಲಿ 
ಚಕ್ರತೀರ್ಥದಿ ನಿಂತಾಗಿದೆ 
ಮೌನವೇ ಮಾತಾಗಿದೆ 

ನೀನೊಂದು ಬೆಟ್ಟದಲ್ಲಿ 
ಅವನೊಂದು ಬೆಟ್ಟದಲ್ಲಿ 
ಕಲ್ಲಂತೆ ನಾವು ನಿಂತಾಗಿದೆ 
ಕಳೆದ ಸ್ನೇಹ ಹುಡುಕಾಡಿದೆ 

ನದಿಯು ಹರಿಯುತಿದೆ 
ಬೆಟ್ಟಗಳ ಬುಡ ಸವರಿ 
ತೆಪ್ಪ ತೆಪ್ಪಗೆ ನಿಂತಾಗಿದೆ 
ಅಲೆಗಳಿಗೂ ರಜೆ ಸಿಕ್ಕಿದೆ    

ತಂಗಾಳಿ  ಬೀಸುತಲಿ ಮಾತು 
ಅಲೆಗಳು ರಾಚುತಲಿ ಪ್ರೀತಿ 
ಸ್ನೇಹ ಸೇತುವೆ ನಿಲ್ಲಬೇಕಿದೆ 
ಜೀವನ ಪಯಣ ಸಾಗಬೇಕಿದೆ