ಶುಕ್ರವಾರ, ಜನವರಿ 29, 2016

ದೂರದ ಸಾಧನೆ


ಓಡುತ ಮರಳಲಿ ನಲಿಯುತ ಆಡುವ 
ಸೂರ್ಯನು ಮುಳುಗುವ ಸಮಯದಲಿ 
ಚಿಲಿಪಿಲಿ ಗುಟ್ಟುತ ಕಲರವದಿ ಹರಾಡುವ  
ಹಕ್ಕಿಗಳಂತೆ ಮನೆ ಸೇರುವ ಹರುಷದಲಿ 

ತಂಪಿನ ತಂಗಾಳಿಗೆ ಚಲಿಸುತ ಬರುವ 
ಮೋಡವು ಚಿತ್ತಾರ ಬಿಡಿಸಿದೆ ಅಂಬರದಲ್ಲಿ 
ಆಡುತ ಆಡುತ ಕುಣಿಯುವ ಜೊತೆಯಲಿ  
ಹೊಳೆಯುವ ಸಂಜೆ ಸೂರ್ಯ ಕಿರಣದಲಿ 

ಹೆಡೆಯನು ಎತ್ತಿ ಏರುತ ಇಳಿಯುತ 
ಗಾಳಿಪಟ ತೇಲಿದೆ ಹಾರಿದೆ ಮುಗಿಲಲ್ಲಿ 
ದಾರವ ಹಿಡಿಯುತ  ಓಡುತ ಓಡುತ 
ಹಾರಿಸುವೆವು ಹೊಸ ಕನಸು ಆಗಸದಲ್ಲಿ  

ದೂರದ ಬೆಟ್ಟ ನಿಂತಿದೆ ಸುಮ್ಮನೇ 
ನೋಡುತ ನಮ್ಮನು ವಿಸ್ಮಯದಲ್ಲಿ 
ದೂರದ ಸಾಧನೆ ಮಾಡಿಯೇ ತಿರುವೆವು 
ಎನ್ನುವ ಸಂದೇಶ ಸಾರುವೆವು ಇರುಳಲ್ಲಿ

ಬುಧವಾರ, ಜನವರಿ 13, 2016

ಸ್ವರ್ಗದ ದಾರಿ

ಮಬ್ಬಿನ ಮಂಜು ಮುಂಜಾವಲಿ ಬಂತು 
ಇಬ್ಬನಿ ಮಿನುಗಿದೆ ಹಸಿರಲಿ  ನಿಂತು
ತಬ್ಬಿ ಭೂಮಿಯ ಉಲ್ಲಾಸದಿ ಬೆರೆತು  
ಉಬ್ಬಿಸಿ  ಮನಸು ಹೊಸ ಹುರುಪವ ತಂತು 

ಕೊನೆ ಇರದಾ ದಾರಿಗೆ ಬೇಲಿಯ  ಬಿಗಿದು
ಮನದಲಿ ತುಂಬಿದ ಕೊಳೆಯನು ತೊಳಿದು 
ಕಾನನದಂಚಿಗೆ ಕಂಬ ತಂತಿಯ ಎಳೆದು 
ಬಾನಿಗೆ ಕಳುಸುವ ಸಂದೇಶವು ಹೊಸದು  

ಸ್ವರ್ಗದ ದಾರಿಯು ಹೊಳೆಯುತ ನಿಂತು 
ನಿರ್ಭಯ ಲೋಕಕೆ ಕೈಬೀಸಿ ಕರೆಯಿತು 
ಸ್ವಾರ್ಥವಿಲ್ಲದೆ ಸಾಧನೆ ಮಾಡಿದವರಿಗೆ 
ದುರ್ಗಮವಿಲ್ಲದ ಹೊಸ ದಾರಿ ತೋರಿಸಿತು