ಶನಿವಾರ, ಮೇ 30, 2015

ಬೇಸಿಗೆ ಶಿಬಿರ

ಬಿಸಿಲಲಿ ಬೇಸಿಗೆ ಶಿಬಿರವು ಬಂದಿತು ತುಸು ಬದಲಾವಣೆ ನಮಗಿಲ್ಲಿ ಹೊಸ ಗೆಳೆಯರ ಹೊತ್ತು ತಂದಿತು ಹುಸಿಯಾಟ ಆಡಲು ಜೊತೆಯಲ್ಲಿ ಬಣ್ಣವ ಹಚ್ಚಿ ಬೆತ್ತದ ಗೊಂಬೆಗೆ ಕಣ್ಣು ಹುಬ್ಬುಮೂಗು ತೀಡುತಲಿ ಚಿನ್ನಿಕೋಲು ಬುಗುರೀ ಗೋಲಿ ಚೆನ್ನಾಗಿ ಆಡುತ ಜೊತೆಯಲ್ಲಿ ಬುರುಗಿನ ನೀರಲಿ ಗಾಳಿಯ ಊದಿ ಹಾರಿಸಿ ನಲಿಯುತ ಹರುಷದಲಿ ನೀರಿನ ಗುಳ್ಳೆಯು ಹೊಳೆಯುತ ಸಾಗಿವೆ ತೋರುತ ನಗುಮುಖ ಜೊತೆಯಲ್ಲಿ ಗುಳ್ಳೆಯು ಹಾರುತ ಹಾರುತ ಒಡೆಯಿತು ಒಳ್ಳೆಜೀವನ ಪಾಠ ಕಲಿಸುತಲಿ ಬಣ್ಣವು ಅಳಿಸಿತು ಬಗುರಿಯು ಮುರಿಯಿತು ಚಿಣ್ಣರ ಶಿಬಿರವು ಮುಗಿಯುತಲಿ

ಶನಿವಾರ, ಮೇ 16, 2015

ಅಭಿಸಾರಿಕೆ


ಕಳೆದೊಂದು ವರುಷದ ಹಿಂದೆ 
ಬಳಕುವಾ ಬೆಡಗಿಯ ಕಂಡೆ 
ಬೆಳೆದು ನಿಂತಾ ಅಭಿಸಾರಿಕೆಯ  
ಹೊಳೆವ ಹೂ ಕಂಗಳ ಕಂಡೆ 

ಮುದ್ದು ಗರೆಯುವ ಮುಖದಲ್ಲಿ
ತಿದ್ದಿ ತೀಡಿದ ಹುಬ್ಬನು ಕಂಡೆ 
ಬಿದ್ದು ಹೋದೆ ಅವಳಿಗೆ ಸೋತು 
ಎದ್ದು ಬರುವ ದಾರಿಯು ಹುಡುಕುತಿಹೆ   

ಪ್ರೇಮ ನಿವೇದನೆಗೆಂದು ಗುಲಾಬಿ ಹೂವನು ತಂದೆ 
ಪ್ರೀತಿ ಪತ್ರವ ಕೊಡಲು ಪದಗಳನು ಹುಡುಕುತಲಿರುವೆ 
ಪ್ರತೀ ಪುಟವನ್ನು ತೆರೆದು ಪದಗಳ ಹೆಕ್ಕಿ ತೆಗದೇ 
ಪ್ರಭುದ್ದ  ಕವನವನು  ಗೀಚುತ ಮೈಮೆರೆತುಹೋದೆ 

ಒಂದೊಂದು ಸಾಲಿನಲ್ಲಿ ಹೊಸ ಪ್ರೀತಿ ತುಂಬಿಸಿ ಇಟ್ಟೆ 
ಚಂದದ ಅರ್ಥಕೆ ಸೋತು ಗುಲಾಬಿ ದಳ ಎಲೆಗಳು ಬಿತ್ತೇ 
ಅಂದಗೊಳಿಸಿ ಮುಗಿಸುತಲಿ  ಸಮಯ ಬಹಳ ಸರಿದಿತ್ತೆ! 
ಇಂದು ಪತ್ರ ಕೊಡುವುದರೊಳಗೆ ಅವಳಿಗೆ ತಾಳಿ ಬಿದ್ದೈತೆ !!! 

ಮಂಗಳವಾರ, ಮೇ 5, 2015

ಸೈಕಲ್ ಮೇಲೆ.

ಬಣ್ಣ ಬಣ್ಣದ ಬಲೂನಲ್ಲಿ 
ಸಣ್ಣ ರಂದ್ರದಿ ಗಾಳಿ ತುಂಬಿ 
ಅಣ್ಣ ಹಿಡಿದು ಹೊರಟಿದ್ದಾನೆ ಸೈಕಲ್ ಮೇಲೆ.

ದುಂಡು ಮೊಗದ ಬಲೂನಲ್ಲಿ 
ಚಂದದ ಕಣ್ಣು ಮೂಗು ಬರೆದು 
ಅಂದ ಹೆಚ್ಹಿಸಿ ಹೊರಟಿದ್ದಾನೆ ಸೈಕಲ್ ಮೇಲೆ 

ಕೆಂಪು ಹಳದಿ ನೀಲಿ ಹಸಿರು 
ತಂಪು ಗಾಳಿ ಒಳಗೆ ಉಸಿರು 
ಗುಂಪು ಕಟ್ಟಿ ಹೊರಟಿದ್ದೇವೆ ಸೈಕಲ್ ಮೇಲೆ 

ಹಗಲು ಸಂಜೆ ಇರುಳಿನಲ್ಲಿ 
ನಗುತ ನಲಿಯುತ ದಾರಿಯಲ್ಲಿ    
ಹೋಗಿ ಕೊನೆಗೆ ಸೇರುವುದೆಲ್ಲೋ ಸೈಕಲ್ ಮೇಲೆ 

ದಡವ ಸೇರಿಸುವ ಮಾಲಿಕನಿಗೆ 
ದುಡಿದು ಕೊಳ್ಳುವ ಗ್ರಾಹಕರಿಗೆ 
ಕೊಡತ ಪ್ರೀತಿ ಸಾಗುವೆವು ನಾವು ಸೈಕಲ್ ಮೇಲೆ