ರೊಟ್ಟಿಯ ತಟ್ಟು ಕಲಸಿ ಜೋಳದಹಿಟ್ಟು
ರೊಟ್ಟಿಯ ತಟ್ಟು ಕೈಬಳೆ ಮೇಲಕ್ಕೆ ಕಟ್ಟು
ಬೇಡಿ ಸಾಕಾಗಿದೆ ಜೀತ ಮುಗಿಯದೆಂದು
ನೋಡಿ ಈ ಕರ್ಮವು ಕಳೆಯುವುದೆಂದು
ಕಾಡು ಅಲೆದು ಒಣಗಿದ ಕಟ್ಟಿಗೆಗಳ ತಂದು
ಹೂಡು ಜೋಡಿಸಿರುವೆ ರೊಟ್ಟಿ ಮಾಡಲೆಂದು
ಕಳೆಗುಂದಿದ ಹಂಚನು ಬದಿಗೆ ಸರಸಿ
ಛಳಿ ಕಳೆಯಲು ಬಿಸಿ ಚಹಾಕಾಸಿ ಕುಡಿಸಿ
ಹಳೆಯ ಡಬ್ಬಿಯ ಎಳೆದು ಹಿಟ್ಟು ಸೂಸಿ
ಪಳಗಿದ ಕೈ ಕಲಸಿದೆ ಹಿಟ್ಟು ನೀರುಕ್ಕರಿಸಿ
ಮಣ್ಣಿನ ಓಲೆ ಒಳಗಿನ ಬೆಂಕಿಯ ಕೆಂಪಲ್ಲಿ
ಹೆಣ್ಣಿನ ಕೈ ರೊಟ್ಟಿ ತಟ್ಟೋ ಕಲೆಯ ನೋಡು
ಕಣ್ಣಲ್ಲಿ ಕಣ್ಣಿಟ್ಟು ಊದಿ ಉರಿವ ಒಲೆಯಲ್ಲಿ
ಸಣ್ಣ ರೊಟ್ಟಿ ಉಬ್ಬಿದ ಸೊಬಗ ನೋಡು