ಮಲಗಿದ ಮಂಚವು ನಡುಗಿತು
ಹೊಸ ಕಪ್ಪು ಬಿಳಿಪು ಕನಸಲ್ಲಿ
ಹಳೆಯ ದಿನಗಳು ಕಣ್ಮುಂದೆ
ಹಾದು ನೀರೂರಿತು ಕಣ್ಣಂಚಿನಲಿ
ಚಳಿ ಮಳೆ ಬಿಸಿಲುಲಿ ದಿನ ದುಡಿಯುತಲಿದ್ದೆ
ಮರದ ಚಕ್ರ ಸರಪಳಿ ಚಿಕ್ಕ ಗಾಡಿ ಜೊತೆಯಲ್ಲಿ
ನಡು ರಸ್ತೆಯಲಿ ಸುಖ ನಿದ್ರೆ ಮಾಡುತಲಿದ್ದೆ
ದಣಿದ ದೇಹದ ಬೆವರು ಗಾಳಿಗೆ ತಂಪಾಗುತಲಿ ೧
ಬಿಸಿಲಲಿ ಧಗೆಗೆ ಹಗಲ ಕನಸೊಂದು ಬಿದ್ದಿತು
ಸುಂದರ ಅರಮನೆ ರಾಣಿಯ ಜೊತೆಯಲ್ಲಿ
ಮೃಷ್ಟಾನ್ನ ಭೋಜನಮಾಡಿ ಬೀಡ ಹಾಕುತ
ಕುಳಿತಿದ್ದೆ ಸುಂದರ ಸಖಿಯರು ಪಲ್ಲಂಗದಲಿ
ತಿರುಕನ ಕನಸು ನನಸಾಗುತ ಹೋಯಿತು
ದಿನ ಕಳೆದಂತೆ ಕಷ್ಟ ಪಟ್ಟು ದುಡಿಯುತಲಿ
ಹೊಸ ಬಟ್ಟೆ ಉಟ ಮನೆ ವಾಹನ ಬಂತು
ಬೆಳೆದಂತೆ ಊರು ಆಸೆಯು ಬೆಳೆಯುತಲಿ
ವ್ಯಾಪಾರದಿ ಮೋಸವು ಇಣುಕುತ ಹೊಕ್ಕಿತು
ಗಳಿಸಿ ಹೆಣ್ಣು ಹೊನ್ನು ಮಣ್ಣು ದಿನಕಳೆಯುತಲಿ
ತಂಪು ಗಾಳಿಯ ಮಧ್ಯ ಮೆದು ಮಂಚವಿದ್ದರೂ
ಬಾರದಾಗಿದೆ ನಿದ್ದೆ ಚಿಂತೆ ತುಂಬಿದ ಮನಸಲ್ಲಿ
ಕಾಲ ಚಕ್ರವು ತಿರುಗಿ ಮರುಗಿದೆ ನಿದ್ರೆಯಲ್ಲಿ
ಆ ಹಳೆಯ ಕನಸು ಇಂದು ತುಂಬಾ ಕಾಡುತಿದೆ
ಅಂದಿನ ನೀಯತ್ತು ಉಳಿಸಿಕೋ ಇವತ್ತು ಎಂದು
ಹೊಸ ಕನಸಲ್ಲಿ ಹಳೆಯ ಕನಸು ಎಚ್ಚರಿಸುತಿದೆ