ಬುಧವಾರ, ಮೇ 30, 2012

ಮುಗಿಲಾಚೆಗೆ

ಹಸಿರೆ ಹಸಿರೆ ನನ್ನ ಕೈಬೀಸಿ 
ಕರೆದು ಬಿಡು
ಉಸಿರೇ ಉಸಿರೇ ನೀ ನಗುತ 
ಜೊತೆ ನಲಿದಾಡು

ಮುಗಿಲು ಮುಟ್ಟಿದ ಮರಗಿಡದ 
ಸೊಬಗ ನೋಡದೆ ಇರಲಾರೆ
ಕೈ ಬೀಸಿ ಕರೆವ ಜಲಪಾತದಲ್ಲಿ 
ಇಳಿದು ಆಡದೆ ಬರಲಾರೆ

ಆ ಚಹಾ ತೋಟದ ಏರಿಳಿತದಲ್ಲೂ 
ನಿನ್ನನ್ನೇ ನಾ ಕಾಣುವೆ
ಝುಳು ಝುಳು ಹರಿವ ತೊರೆ ಅಂಚಿನಲ್ಲಿ 
ಅಪ್ಪಿ ಮುದ್ದಾಡುವ ಬಾರೆ

ಹಗಲೆಲ್ಲ ಬಿಸಿಲ ಹಣ್ಣನ್ನೇ ತಿಂದು 
ಮೈಯಲ್ಲ ನಾ ಬೆವೆತೆ
ಇರುಳಲ್ಲಿ ಮುಳುಗೋ ರವಿಯನ್ನ ಕಾಣಲು 
ಬೆಟ್ಟದಂಚಿನಲಿ ನಾ ಕುಳಿತೆ

ನಾಮುಂದು ತಾಮುಂದು ಚಲಿಸುತ 
ಮೋಡಗಳು ತಾಕಿದವು ಎನ್ನೆದೆಗೆ 
ಮಂಜು ಮುಸುಕಿದ ತಂಗಾಳಿಯಲ್ಲಿ 
ಹೃದಯ ಕೊರಗಿತು ನೀನಿಲ್ಲದೆ

ಸವಿಗನಸಿನಲ್ಲಿ  ಕೈ ಹಿಡಿದು ನಡೆವೆ 
ಮುಂಜಾವುನ ಇನಿದನಿಯಗೆ
ಮೈ ಮರೆತು ಗರಿಕೆದರಿದ ನವಿಲಿನ 
ನಾಟ್ಯಕೆ ನಿನ್ನದೇ ಇದೆ ಹೋಲಿಕೆ

ಕಾಡೊಳಗೆ ಹುಡುಕುತ ನಿನ್ನ ಹೆಸರನ್ನ 
ಕೂಗಿದೆ ಮುಖಮಾಡಿ ಮುಗಿಲಾಚೆಗೆ
ಬಳಿ ಬಂದು ಪ್ರೀತಿಸಿ ಮುತ್ತಿಕ್ಕು ಒಮ್ಮೆ 
ಅದೊಂದೇ ಧನ್ಯತೆಗೆ  ನಾ ಕಾಯುವೆ