ಶನಿವಾರ, ಜೂನ್ 15, 2024

ತಾಯೆ ನಿನ್ನ ಮಡಿಲಲಿ ಬಂದು

ತಾಯೆ ನಿನ್ನ ಮಡಿಲಲಿ ಬಂದು
ಪ್ರಕೃತಿಯ ಕಂಡು
ಮಗುವೇ ಆದೆ ನಾ 


ಬ್ರಹ್ಮಗಿರಿ ಕಾವೇರಿಯನೆ  ಕಂಡು 
ಮಂಜಿನಲಿ ಮಿಂದು 
ಧನ್ಯನಾದೆ ನಾ 

ಜೀವನದಿಯಾಗಿ ಹರಿವಳು ನೀನು 
ಹಸಿರಿನ ಉಸಿರು ನೀನು 
ರೈತರ ಮೊಗದಿ ನಗುವನು ತರಿಸಿ 
ದಿನವೂ ಸಾಕುವವಳು ನೀನು 

ಗಿಡಮರ ಜೀವ ಸಂಕುಲಕೆಲ್ಲಾ 
ನೀರುಣಿಸುವೆಯಲ್ಲಾ 
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

ತಾಯೆ ನಿನ್ನ ಮಡಿಲಲಿ ಬಂದು 
ಪ್ರಕೃತಿಯ ಕಂಡು
ಮಗುವೇ ಆದೆ ನಾ 
 
ಹಸಿರ ಸೀರೆ ಉಡಿಸಿ ಭುವಿಗೆ 
ಬಳೆಯ ತೊಡಿಸುವೆ ನೀನು 
ಆರತಿ ಎತ್ತಿ ಇಳಿಯನು ತೆಗೆದು 
ಸೀಮಂತ ಮಾಡಿ ನಲಿವೆಯೇನು 

ಹುತ್ತರಿ ಹಬ್ಬವನೇ ಮಾಡಿ 
ನಗುವ ಮಕ್ಕಳ ನೋಡುವೆ  
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

ತಾಯೆ ನಿನ್ನ ಮಡಿಲಲಿ ಬಂದು 
ಪ್ರಕೃತಿಯ ಕಂಡು
ಮಗುವೇ ಆದೆ ನಾ 

ನಿನ್ನಂಥ ತಾಯಿ ಇರುವ ವರೆಗೆ 
ಇಲ್ಲಿ ಯಾವ ಚಿಂತೆಯೂ ಇಲ್ಲ
ಉಸಿರಿರೋವರೆಗೂ ನಿಂತಮೇಲೆಯೂ  
ನಿನ್ನ ಮಡಿಲೇ ನಮಗೆಲ್ಲ 

ಮಕ್ಕಳ ಸಾಧನೆಯ ನೋಡಿ 
ಮುಕ್ತಿ ನೀನು ಕೊಡಿಸುವೆ 
ಪ್ರೀತಿ ಇಂದಾನೇ
- ಪ್ರೀತಿ ಇಂದಾನೇ 

*ಮೈಸೂರ್ ಪಾಕ್*


ತುಪ್ಪದಲ್ಲಿ ಹುರಿದು 
ಸಕ್ಕರೆ ಪಾಕದಲ್ಲಿ ಸೇರಿಸಿ 
ಸಣ್ಣ ಉರಿಯಲ್ಲಿ ಕುದಿಸಿ 
ತೆಗೆದರೆ ಮೈಸೂರ್ ಪಾಕ್ 

ಆಯತಾಕಾರದಲ್ಲಿ ಇದ್ದರೆ 
ನೀ ಕಲ್ಲಾಗಬಹುದೆಂದು 
ಹೃದಯದಾಕಾರ ಕೊಟ್ಟು 
ನಿನ್ನ ಮೃದುವಾಗಿಸಿಹರು 

ಆಕಾರವೇನೇ ಇರಲಿ 
ಮಾಡುವವರು ಸಿಹಿಯಾಗಿದ್ದರಾಯ್ತು  
ಜೊತೆ ಜೊತೆಯಾಗಿ ಕುಳಿತು  
ಸವಿದರೆ ಬಾಯಲ್ಲಿ ನೀರೂರಬೇಕು  

*ನೀಲಿಕನ್ನಿಕೆ*


ನಿನ್ನ ಕಂಗಳ 
ನೋಟ ನೋಡುತ 
ರವಿಯು ಅವಿತನು ಮೋಡದಿ 

ಬುವಿಯಲೆಲ್ಲಾ 
ನಿನ್ನದೇ ಪ್ರಭೆ 
ಕವಿಯು ಹಿಡಿದನು ಕವಿತೆಲಿ 

ನೀಳವೇಣಿಯೇ 
ನೀಲಿಮಣಿಯದು  
ಮಿನುಗುತಿದೆ ಬೈತಲೆಯಲಿ 

ನೀಲಿ ಹಾರವು 
ನಗುತ ಹೊಳೆದಿದೆ    
ತುಟಿಗೆ ಕಂಪನು ಕೊಡುತಲಿ 

ನೀಲಿ ರವಿಕೆಯು 
ನೀಲಿ ಸೀರೆಯು 
ನವಿಲ ಹೋಲಿಕೆ ನಡುವಲಿ 

ನೀಲಿಯಾಯಿತು 
ಭೂಲೋಕವೆಲ್ಲಾ 
ನೀಲಿ ಕಂಗಳ ಚಲುವಲಿ

ನೀಲಿ ನೋಟಕೆ 
ನೀಳವಾಯಿತು 
ಮನಸು ಹುದಗಿತು ನಿನ್ನಲಿ 

ನಾಗಲೋಕದ 
ನೀಲಿಕನ್ನಿಕೆ 
ನಾ ಸಿಂಧೂರವಿಡಲೇ ಹಣೆಯಲಿ